ಕೋಮುದ್ವೇಷ ಹರಡುತ್ತಿರುವ ಕನ್ನಡ ಟಿವಿ ಚಾನಲ್ ಗಳಿಗೆ ಕಡಿವಾಣ ಅಸಾಧ್ಯವಾಗಿದೆ: ಸಾಮಾಜಿಕ ಕಾರ್ಯಕರ್ತರ ಅಳಲು
ಬೆಂಗಳೂರು: ದ್ವೇಷ ಭಾಷಣ ವಿರುದ್ಧ ಅಭಿಯಾನ ನಡೆಸುತ್ತಿರುವ ಕರ್ನಾಟಕ ಮೂಲದ ಗುಂಪೊಂದು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿರುವ ಸುದ್ದಿ ವಾಹಿನಿಗಳಿಗೆ ಸಂಬಂಧಿಸಿದ ಸಮಿತಿಗೆ ಕನ್ನಡ ಸುದ್ದಿವಾಹಿನಿಗಳ ವಿರುದ್ಧ 2021ರಲ್ಲಿ 17 ಪ್ರಕರಣ ದಾಖಲಿಸಿತ್ತು. ಆದರೆ ದೂರು ಪಡೆದುಕೊಂಡ ಒಂದೇ ಒಂದು ಸ್ವೀಕೃತಿ ಇದುವರೆಗೂ ದೊರೆತಿಲ್ಲ ಎಂದು ತಿಳಿದು ಬಂದಿದೆ.
'ಭಯೋತ್ಪಾದನೆಗಿಂತ ಮತಾಂತರ ಭಯಾನಕ! ಕ್ರಿಶ್ಚಿಯನ್ ಧರ್ಮಕ್ಕೆ ಹಿಂದೂ ಮತಾಂತರಗೊಂಡರೆ ಎಷ್ಟು ಹಣ ಬರುತ್ತದೆ ಎಂದು ನಿಮಗೆ ತಿಳಿದಿದೆಯೇ?’ - ಇದು ಮಾರ್ಚ್ 2021 ರಲ್ಲಿ ದಿಗ್ವಿಜಯ 24x7 ನ್ಯೂಸ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಶೀರ್ಷಿಕೆ. ಈ ಕಾರ್ಯಕ್ರಮದ ನಿರೂಪಕಿ ಮಮತಾ ಹೆಗ್ಡೆ ಕಾರ್ಯಕ್ರಮದುದ್ದಕ್ಕೂ ʼಧಾರ್ಮಿಕ ಮತಾಂತರ’ ಕುರಿತು ಚರ್ಚಿಸಿದ್ದಾರೆ.
“ಕ್ರಿಶ್ಚಿಯನ್ ಪಾದ್ರಿ ಮನೆಗೆ ಬಂದಾಗ ಏನು ಮಾಡಬೇಕೆಂದು” ವೀಕ್ಷಕರಿಗೆ ಸಲಹೆಯನ್ನು ನೀಡಿದ ನಿರೂಪಕಿಯು, "ಪಾದ್ರಿ ಮನೆಗೆ ಬಂದಾಗ ಏನು ಮಾಡಬೇಕು ಎಂದು ಅನೇಕರಿಗೆ ತಿಳಿದಿಲ್ಲ, ದಯವಿಟ್ಟು ಪೊಲೀಸರಿಗೆ ಕರೆ ಮಾಡಿ, ದೂರು ನೀಡಿ. ಅವರು ಮತಾಂತರಗೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿ. ಹತ್ತು ಜನರಿಗೆ ಶಿಕ್ಷೆಯಾದರೆ, ನಂತರ 11ನೇ ವ್ಯಕ್ತಿ ಮತಾಂತರ ಮಾಡಲು ಬರುವುದಿಲ್ಲ. ನಮ್ಮ ಧರ್ಮ ರಕ್ಷಣೆ ಮಾಡಲು ಧೈರ್ಯ ತೋರದಿದ್ದರೆ ಇದ್ಯಾವುದೂ ನಿಲ್ಲುವುದಿಲ್ಲ” ಎಂದು ಹೇಳುತ್ತಾರೆ.
ಅದೇ ತಿಂಗಳಲ್ಲಿ ಕನ್ನಡದ ಮತ್ತೊಂದು ವಾಹಿನಿ ಏಷಿಯಾನೆಟ್ ಸುವರ್ಣ ನ್ಯೂಸ್ ಕೂಡಾ ಕ್ರೈಸ್ತರ ವಿರುದ್ಧ ಇಂತಹದ್ದೇ ನಾಲ್ಕು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಕ್ರಿಶ್ಚಿಯನ್ನರು ಹಣದ ಆಮಿಷ ಹಾಗೂ ಮೋಸದ ವಿಧಾನಗಳನ್ನು ಬಳಸಿಕೊಂಡು ಮತಾಂತರವನ್ನು ನಡೆಸುತ್ತಾರೆ ಎಂದು ಆರೋಪಿಸಿದ ಚಾನೆಲ್, ಹೊಸದುರ್ಗ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಹಿಂದೂಗಳನ್ನು ಹೇಗೆ ಮತಾಂತರ ಮಾಡಿದರು ಎಂಬುದನ್ನು ಕುಟುಕು ಕಾರ್ಯಾಚರಣೆ ಮೂಲಕ ಪ್ರದರ್ಶಿಸುತ್ತಿರುವುದಾಗಿ ಹೇಳಿಕೊಂಡಿದೆ. ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿ ಪುಟ್ಟಮ್ಮ ಅವರ ಮತಾಂತರ ಪ್ರಕರಣವೇ ಈ ಕಾರ್ಯಕ್ರಮದ ಆಧಾರವಾಗಿದೆ.
ಈ ಕಾರ್ಯಕ್ರಮ ನಿರೂಪಕರು, ಹೊಸದುರ್ಗದಲ್ಲಿ ಲಕ್ಷಾಂತರ ಮಂದಿಯನ್ನು ಮತಾಂತರ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಹೊಸದುರ್ಗದಲ್ಲಿ ಲಕ್ಷಾಂತರ ಮಂದಿಯನ್ನು ಮತಾಂತರ ಮಾಡಿರುವುದನ್ನು ನಾವು ನೋಡಿದ್ದೇವೆ. ಸಾವಿರಗಳಲ್ಲ, ಲಕ್ಷಾಂತರ ಮಂದಿಯನ್ನು ಮತಾಂತರ ಮಾಡಲಾಗಿದೆ ಎಂದು ಅವರು ಆರೋಪಿಸುತ್ತಾರೆ. ಆದರೆ, ಅದ್ಯಾವುದಕ್ಕೂ ಅವರು ಪುರಾವೆಯನ್ನು ಒದಗಿಸುವುದಿಲ್ಲ. ಈ ಕಾರ್ಯಕ್ರಮ ಪ್ರಸಾರಗೊಂಡ ಏಳು ತಿಂಗಳ ಬಳಿಕ ಹೊಸದುರ್ಗ ತಹಶಿಲ್ದಾರ್ ಮಾಡಿದ ಸರ್ವೆಯಲ್ಲಿ ಚಾನೆಲ್ ಬಂಡವಾಳ ಬಯಲಾಗಿದೆ. ಹೊಸದುರ್ಗದ ಕೆಲವು ಕಡೆ ಚರ್ಚುಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪ್ರಾರ್ಥನೆ ಮಾಡುವುದು ಕಂಡು ಬಂದಿದ್ದು, ಅವರನ್ನು ಯಾರೂ ಬಲವಂತಪಡಿಸಿ ಅಥವಾ ಆಮಿಷಕ್ಕ ಒಡ್ಡಿ ಮತಾಂತರ ಮಾಡಿಲ್ಲ, ಅವರು ಸ್ವ ಇಚ್ಛೆಯಿಂದಲೇ ಚರ್ಚುಗಳಿಗೆ ಬಂದು ಪ್ರಾರ್ಥನೆ ನಡೆಸಿ ತೆರಳುತ್ತಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಗಳ ಸಂಧರ್ಭದಲ್ಲಿ ರಾಜ್ಯದ ನ್ಯೂಸ್ ಚಾನೆಲ್‌ಗಳು ಕ್ರೈಸ್ತರ ವಿರುದ್ಧ ಮಾಡಿದ ಕೆಲವು ಕಾರ್ಯಕ್ರಮಗಳ ಉದಾಹರಣೆಯಷ್ಟೇ ಇದು.
ಕಳೆದ ಎಪ್ರಿಲ್‌ನಲ್ಲಿ ಬುದ್ದಿಜೀವಿಗಳು, ಹೋರಾಟಗಾರರು, ವಕೀಲರನ್ನೊಳಗೊಂಡ ತಂಡ ಮೇಲೆ ಹೇಳಿರುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದಿಗ್ವಿಜಯ ನಿರೂಪಕಿಯನ್ನು ಉತ್ತರದಾಯಿಯಾಗಿಸಿ ದೂರು ನೀಡಿತ್ತು. ಕನ್ನಡದ ಮುಂಚೂಣಿ ಚಾನೆಲ್‌ಗಳಾದ ಟಿವಿ9 ಕನ್ನಡ, ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ ಮಾತ್ರವಲ್ಲದೆ ಇಂಗ್ಲಿಷ್ ವಾಹಿನಿ ಟೈಮ್ಸ್ ನೌ ವಿರುದ್ಧವೂ ಧ್ವೇಷಪೂರಿತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ತಂಡ ಒಟ್ಟು 17 ದೂರುಗಳನ್ನು ನೀಡಿದೆ. ಅದರಲ್ಲಿ 2 ದೂರಿಗೆ ಪ್ರತಿಕ್ರಿಯೆ ಬಂದಿದೆ.
ಇದೇ ತಂಡವು, ಕರೋನಾ ಸಾಂಕ್ರಾಮಿಕದ ಕುರಿತಂತೆ ಮುಸ್ಲಿಮರ ಹಾಗೂ ತಬ್ಲೀಘಿ ಜಮಾತ್ ವಿರುದ್ಧ ಧ್ವೇಷಪೂರಿತ ಕಾರ್ಯಕ್ರಮ ನಡೆಸಿದ ಕುರಿತು (News Broadcasters Standards Association -NBSA) ಗೆ ಈ ಹಿಂದೆ ದೂರು ನೀಡಿತ್ತು. ಅದರಲ್ಲಿ ನ್ಯೂಸ್ 18 ಕನ್ನಡ, ಸುವರ್ಣ ನ್ಯೂಸ್ ಹಾಗೂ ಟೈಮ್ಸ್ ನೌ ಚಾನೆಲ್ ತಪ್ಪಿತಸ್ಥರೆಂದು ಪರಿಗಣಿಸಿ ದಂಡ ವಿಧಿಸಲಾಗಿತ್ತು.
ಅದಾಗ್ಯೂ, ಕೋಮು ಧ್ವೇಷ ಹರಡುವ ಮತಾಂತರದ ಕಾರ್ಯಕ್ರಮದ ವಿಷಯಕ್ಕೆ ಬಂದರೆ, ದಿಗ್ವಿಜಯ ನ್ಯೂಸ್, ಬಿಟಿವಿ ನ್ಯೂಸ್, ಇಟಿವಿ ನ್ಯೂಸ್ ಹಾಗೂ ರಾಜ್ ಟಿವಿ ಕನ್ನಡ ವಾಹಿನಿಗಳು ಎನ್‌ಬಿಎಸ್‌ಎಯಂತಹ ಸ್ವಯಂ-ನಿಯಂತ್ರಕ ಸಂಸ್ಥೆಗಳ ಭಾಗವಾಗಿರದ ಕಾರಣ ದಂಡನೆಯಿಂದ ತಪ್ಪಿಸಿಕೊಂಡಿದೆ.
“ಖಾಸಗಿ ಚಾನೆಲ್‌ಗಳಲ್ಲಿ ನಡೆದ ಪ್ರಸಾರವನ್ನು ಪರಿಶೀಲಿಸಲು ನಾವು ಜಿಲ್ಲಾ ಮತ್ತು ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಗಳಿಗೆ 17 ದೂರುಗಳನ್ನು ಸಲ್ಲಿಸಿದ್ದೇವೆ. ಆದರೆ ಯಾವುದೇ ದೂರುಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ದ್ವೇಷ ಭಾಷಣದ ವಿರುದ್ಧದ ಅಭಿಯಾನದ ಮಾನವಿ ಅತ್ರಿ the news minute ಗೆ ತಿಳಿಸಿದ್ದಾರೆ.
2019 ರ ಕರ್ನಾಟಕ ಹೈಕೋರ್ಟ್ ಆದೇಶದ ಆಧಾರದ ಮೇಲೆ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಮತ್ತು ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಟಿವಿ ವಾಹಿನಿಗಳನ್ನು ಮೇಲ್ವಿಚಾರಣೆ ಮಾಡಲು ವಿವಿಧ ಹಂತಗಳಲ್ಲಿ ಸಮಿತಿಗಳನ್ನು ರಚಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಟಿವಿ ಚಾನೆಲ್‌ಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವ ಪ್ರಭಾರ ನೋಡಲ್ ಅಧಿಕಾರಿಯೊಂದಿಗೆ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಬೇಕು ಎಂದು ಹೈಕೋರ್ಟ್ ಹೇಳಿತ್ತು.
ಸುದ್ದಿ ವಾಹಿನಿಗಳ ವಿರುದ್ಧದ 17 ದೂರುಗಳನ್ನು ಸಮಿತಿಗಳು ಕೈಗೆತ್ತಿಕೊಳ್ಳದಿರುವುದು ನ್ಯಾಯಾಲಯದ ಆದೇಶದ ಅವಹೇಳನವಾಗಿದೆ ಎಂದು ಮಾನವಿ ಹೇಳುತ್ತಾರೆ.
"ಇದರರ್ಥ ಕೆಲವು ಚಾನೆಲ್‌ಗಳು ಯಾವುದೇ ನಿಯಂತ್ರಕ ಕಾರ್ಯವಿಧಾನಗಳಿಲ್ಲದೆ ಸಂಪೂರ್ಣ ಅಧಿಕಾರವನ್ನು ಚಲಾಯಿಸುತ್ತವೆ. ಅವುಗಳು 'ಸುದ್ದಿ' ಎಂದು ಅವರು ಬಯಸಿದ್ದನ್ನು ಪ್ರಸಾರ ಮಾಡಲು ಮುಕ್ತವಾಗಿರುತ್ತವೆ," ಮಾನವಿ ಹೇಳಿದ್ದಾರೆ.
ಖಾಸಗಿ ವಾಹಿನಿಗಳ ಕಾರ್ಯಕ್ರಮವನ್ನು ನಿರಂತರವಾಗಿ ಪರಿಶೀಲಿಸಿರುವ ತಂಡವು, ಇಂತಹ ಕಾರ್ಯಕ್ರಮಗಳ ಮೂಲಕ ಸುದ್ದಿ ವಾಹಿನಿಗಳು ʼಯಾವುದೇ ಸಾಂವಿಧಾನಿಕ ಅಧಿಕಾರವಿಲ್ಲದ ಗುಂಪುಗಳು ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಪರೋಕ್ಷವಾಗಿ ಉತ್ತೇಜಿಸುತ್ತಿದೆʼ ಎಂದು ಹೇಳಿದೆ.
ಧಾರ್ಮಿಕ ಮತಾಂತರದ ವಿಷಯದ ಕುರಿತು ದಿಗ್ವಿಜಯ ವಾಹಿನಿ ಪ್ರಸಾರ ಮಾಡಿದ ಕಾರ್ಯಕ್ರಮದ ವಿರುದ್ಧ ನೀಡಿರುವ ದೂರಿನಲ್ಲಿ, ಆಂಕರ್ ಮಮತಾ ಹೆಗ್ಡೆ ಸುಳ್ಳುಸುದ್ದಿಗಳನ್ನು ಹುಟ್ಟುಹಾಕಿದ್ದಾರೆ. ಮತ್ತು ಅಲ್ಪಸಂಖ್ಯಾತ ಧರ್ಮಗಳ ವಿರುದ್ಧ ಹಿಂದೂಗಳು ಹಗೆತನದ ಭಾವನೆಯನ್ನು ಬೆಳೆಸಬೇಕೆಂದು ಕರೆ ನೀಡಿರುವುದಾಗಿ ಉಲ್ಲೇಖಿಸಲಾಗಿದೆ.
ʼಕಾರ್ಯಕ್ರಮದ ನಿರೂಪಕಿ ಧಾರ್ಮಿಕ ಮತಾಂತರವನ್ನು ಕಾನೂನು ಬಾಹಿರ ಎಂದು ಹೇಳಿದ್ದಾರೆ. ಆದರೆ ಮತಾಂತರವು ಕಾನೂನು ಬಾಹಿರವಲ್ಲ. ಅದು ಅಲ್ಲದೆ, ಸಾಬೀತುಗೊಳ್ಳದ ಹಲವು ಆರೋಪಗಳನ್ನು ಕ್ರಿಶ್ಚಿಯನ್ ಸಮುದಾಯದ ಮೇಲೆ ನಿರೂಪಕಿ ಹೊರಿಸಿದ್ದಾರೆ. ಒಟ್ಟಾರೆ, ಕ್ರೈಸ್ತರು ಹೊರಗಿನಿಂದ ಬಂದವರೆಂಬ ಭಾವನೆ ಹುಟ್ಟು ಹಾಕಲು ನಿರೂಪಕಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
"ಕಾರ್ಯಕ್ರಮದ ಉದ್ದಕ್ಕೂ, ಆಂಕರ್ ಕ್ರಿಶ್ಚಿಯನ್ನರ ವಿರುದ್ಧ ಹಿಂಸಾತ್ಮಕ ಕೃತ್ಯಗಳನ್ನು ಒಳಗೊಂಡಿರುವ ವೀಡಿಯೊಗಳನ್ನು ಬಳಸಿದ್ದು, 'ಮೋಸದ ಮತಾಂತರ'ಕ್ಕೆ ಸೂಕ್ತ ಪ್ರತಿಕ್ರಿಯೆ ಎಂಬಂತೆ ಆ ಹಿಂಸಾತ್ಮಕ ವಿಡಿಯೋಗಳನ್ನು ಸೂಚಿಸುತ್ತಾರೆ" ಎಂದು ದೂರಿನಲ್ಲಿ ಹೇಳಲಾಗಿದೆ.
ದಿಗ್ವಿಜಯ್ 24x7 ನ್ಯೂಸ್ ಬಿಜೆಪಿಯ ಮಾಜಿ ಸಂಸದರಾಗಿರುವ ವಿಜಯ್ ಸಂಕೇಶ್ವರ್ ಅವರ ವಿಆರ್‌ಎಲ್ ಮೀಡಿಯಾದ ಮಾಲೀಕತ್ವದಲ್ಲಿದೆ. ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಸ್ಟ್ಯಾಂಡರ್ಡ್ಸ್ ಅಸೋಸಿಯೇಷನ್ (NBSA) ಅಥವಾ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಫೆಡರೇಶನ್ (NBF) ನಂತಹ ರಾಷ್ಟ್ರೀಯ ಮಟ್ಟದ ನಿಯಂತ್ರಕ ಸಂಸ್ಥೆಗಳ ಭಾಗವಾಗಿರದ ಕಾರಣ, ತಪಾಸಣೆಯಿಂದ ಮುಕ್ತವಾಗಿರುವ ಹಲವಾರು ಕನ್ನಡ ವಾಹಿನಿಗಳಲ್ಲಿ ಈ ವಾಹಿನಿ ಕೂಡಾ ಒಂದು.
PUCL ವರದಿಯ ಪ್ರಕಾರ 2021 ರಲ್ಲಿ ಕರ್ನಾಟಕದಲ್ಲಿ ಕ್ರಿಶ್ಚಿಯನ್ ಧರ್ಮೀಯರ ಮೇಲೆ ಕನಿಷ್ಠ 39 ದಾಳಿಗಳು ನಡೆದಿವೆ ಎಂಬುದು ಗಮನಾರ್ಹ ಅಂಶವಾಗಿದೆ. ತನಿಖಾ ವರದಿಯನ್ನು ಮಾಡುವ ಸೋಗಿನಲ್ಲಿ ಮಾಧ್ಯಮ ಸಿಬ್ಬಂದಿ ದಾಳಿಗಳನ್ನು ನಡೆಸಲು ಹಿಂದುತ್ವ ಗುಂಪುಗಳೊಂದಿಗೆ ಸೇರಿಕೊಂಡಿದ್ದಾರೆ ಎಂಬುವವುದನ್ನು ಪೊಲೀಸ್ ವರದಿಗಳೇ ಹೇಳಿವೆ.
"ಸುದ್ದಿ ಚಾನೆಲ್‌ಗಳ ಇಂತಹ ಕಾರ್ಯಕ್ರಮಗಳ ಪ್ರಸಾರವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಜನರ ಮೂಲಭೂತ ಹಕ್ಕುಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ನಿರ್ಮಿಸಿದೆ. ಮಾತ್ರವಲ್ಲ ಸಮಾಜದಲ್ಲಿ ಅವರನ್ನು ಅಪರಾಧಿಗಳಂತೆ ಬಿಂಬಿಸಿದೆ. ಆದರೆ ಸುದ್ದಿ ವಾಹಿನಿಗಳನ್ನು ಅದಕ್ಕೆ ಹೊಣೆಗಾರರನ್ನಾಗಿ ಮಾಡಲು ಯಾವುದೇ ಕಾರ್ಯವಿಧಾನವಿಲ್ಲ" ಎಂದು ಮಾನವಿ ಹೇಳಿದ್ದಾರೆ.
ಕೃಪೆ: Thenewsminute.com