ಉತ್ತರ ಪ್ರದೇಶ ಬಿಜೆಪಿಗೆ ಮತ್ತೊಂದು ಆಘಾತ: ಮಿತ್ರ ಪಕ್ಷ ಅಪ್ನಾ ದಳದ ಇಬ್ಬರು ಶಾಸಕರು ರಾಜೀನಾಮೆ

Update: 2022-01-14 02:46 GMT
(Photo | ANI)

ಪ್ರತಾಪಗಢ: ಉತ್ತರ ಪ್ರದೇಶ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರಿದಿರುವ ನಡುವೆಯೇ, ಬಿಜೆಪಿಯ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೇಲಾಲ್)ದ ಇಬ್ಬರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಸಿದ್ಧಾರ್ಥನಗರದ ಶೋಹ್ರತ್‌ಗಢ ಶಾಸಕ ಚೌಧರಿ ಅಮರ್ ಸಿಂಗ್ ಅವರು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ಬಳಿಕ ಗುರುವಾರ ಸಂಜೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದೇ ಕ್ಷೇತ್ರದಿಂದ ಅಮರ್ ಸಿಂಗ್ ಎಸ್ಪಿ ಟಿಕೆಟ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಪಕ್ಷದ ಮತ್ತೊಬ್ಬ ಶಾಸಕ ಪ್ರತಾಪ್‌ಗಢದ ವಿಶ್ವನಾಥ ಗಂಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆರ್.ಕೆ.ವರ್ಮಾ ಕೂಡಾ ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ಶುಕ್ರವಾರ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದು, ಪಕ್ಷ ತೊರೆಯಲು ಏನು ಕಾರಣ ಎಂಬ ಬಗ್ಗೆ ವಿವರ ನೀಡುವುದಾಗಿ ಅವರು ಹೇಳಿದ್ದಾರೆ.

ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ನೇತೃತ್ವದ ಅಪ್ನಾ ದಳ (ಸೋನೆಲಾಲ್) 2017ರ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿ 12 ಸ್ಥಾನಗಳಲ್ಲಿ ಸ್ಪರ್ಧಿಸಿ, ಒಂಬತ್ತು  ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಗುರುವಾರ ಹಿಂದುಳಿದ ವರ್ಗಗಳ ನಾಯಕ ಧರ್ಮೇಂದ್ರ ಸಿಂಗ್ ಸೈನಿ, ಕಳೆದ ಒಂದು ವಾರದಲ್ಲಿ ಉತ್ತರ ಪ್ರದೇಶ ಸಂಪುಟಕ್ಕೆ ರಾಜೀನಾಮೆ ನೀಡಿದ ಮೂರನೇ ಸಚಿವ ಎನಿಸಿಕೊಂಡಿದ್ದರು. ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಇದು ತೀವ್ರ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೂ ಸ್ವಲ್ಪ ಮೊದಲು ಶಿಕೋಹಾಬಾದ್ ಶಾಸಕ ಮುಕೇಶ್ ವರ್ಮಾ ಬಿಜೆಪಿ ತೊರೆದಿದ್ದರು.

ಸಚಿವರು ಸೇರಿದಂತೆ ಕಳೆದ ಮೂರು ದಿನಗಳಲ್ಲಿ ರಾಜೀನಾಮೆ ನೀಡಿರುವ ಎಂಟು ಶಾಸಕರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಈ ಚುನಾವಣೆಯಲ್ಲಿ ಹಿಂದುಳಿತ ವರ್ಗಗಳು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದತ್ತ ಒಲವು ಹೊಂದಿವೆ ಎನ್ನುವುದರ ಸ್ಪಷ್ಟ ಸೂಚನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News