ಡಿಆರ್ ಎಸ್ ವಿವಾದಕ್ಕೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನಿಜಕ್ಕೂ ಅಪ್ರಬುದ್ದ:ಗೌತಮ್ ಗಂಭೀರ್ ಆಕ್ರೋಶ

Update: 2022-01-14 14:55 GMT

ಕೇಪ್ ಟೌನ್: ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ವಿವಾದಾತ್ಮಕ ಡಿಆರ್‌ಎಸ್ ನಿರ್ಧಾರದ ಬಗ್ಗೆ ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ  ಪ್ರತಿಕ್ರಿಯಿಸಿದ ರೀತಿಯನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಕಿಸಿದ್ದಾರೆ.

ಕೊಹ್ಲಿಯ ಪ್ರತಿಕ್ರಿಯೆಯು 'ಉತ್ಪ್ರೇಕ್ಷಿತ' ಹಾಗೂ 'ನಿಜವಾಗಿಯೂ ಅಪ್ರಬುದ್ದವಾಗಿದೆ' ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ಗಂಭೀರ್  ಹೇಳಿದರು.

ಕೇಪ್ ಟೌನ್ ಟೆಸ್ಟ್‌ನ ನಾಲ್ಕನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಅವರು ತನ್ನ ವಿರುದ್ಧದ ಎಲ್‌ಬಿಡಬ್ಲ್ಯೂ ನಿರ್ಧಾರವನ್ನು ರದ್ದುಗೊಳಿಸಲು ವಿವಾದಾತ್ಮಕ ಅಂಪೈರ್ ತೀರ್ಪು ಪರಾಮರ್ಶೆ (ಡಿಆರ್‌ಎಸ್) ನೆರವು ಪಡೆದ ನಂತರ ಭಾರತೀಯ ಆಟಗಾರರು ಕೆರಳಿದ್ದರು.

ಅಶ್ವಿನ್ ಎಸೆದ ಇನಿಂಗ್ಸ್‌ನ 21ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ.

ದ್ವಿತೀಯ ಪಂದ್ಯದ ಹೀರೊ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಕ್ರೀಸ್ ಗೆ ಅಂಟಿಕೊಂಡು ನಿಂತಿದ್ದರು. ಈ ಸಮಯದಲ್ಲಿ ಬೌಲಿಂಗ್ ಮಾಡಿದ ಸ್ಪಿನ್ನರ್ ಆರ್.ಅಶ್ವಿನ್ ಅವರು ಎಲ್ಗರ್ ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಲು ಯಶಸ್ವಿಯಾದರು. ಭಾರತ ಆಟಗಾರರ ಮನವಿ ಪುರಸ್ಕರಿಸಿದ ಫೀಲ್ಡ್ ಅಂಪೈರ್ ಮರಾಯಿಸ್ ಎರಾಸ್ಮಸ್ ಔಟ್ ತೀರ್ಪು ನೀಡಿದರು. ಈ ಸಂದರ್ಭದಲ್ಲಿ ಎಲ್ಗರ್ ಡಿಆರ್ ಎಸ್ ಮೊರೆ ಹೋದರು.

ರಿಪ್ಲೇ ನಲ್ಲಿ ಚೆಂಡು ಬ್ಯಾಟ್ ಗೆ ತಗಲದೆ ನೇರವಾಗಿ ಎಲ್ಗರ್ ಕಾಲಿಗೆ ಅಪ್ಪಳಿಸಿತ್ತು. ಆದರೆ ಡಿಆರ್ ಎಸ್ ನಲ್ಲಿ ಚೆಂಡು ಲೆಕ್ಕಕ್ಕೂ ಮೀರಿ ಪುಟಿದೇಳುವ ಮೂಲಕ ವಿಕೆಟ್ ನ ಮೇಲಿಂದ ಹಾರಿ ಹೋಯಿತು. ಬಳಿಕ ಮೂರನೇ ಅಂಪೈರ್  ನಾಟೌಟ್ ಎಂದು ತೀರ್ಪು ನೀಡಿದರು. ಈ ತೀರ್ಪು ಭಾರತದ ಆಟಗಾರರು ಅದರಲ್ಲೂ ಮುಖ್ಯವಾಗಿ ನಾಯಕ ಕೊಹ್ಲಿಯ ಕೋಪಕ್ಕೆ ಕಾರಣವಾಯಿತು.

ಕೊಹ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಲ್ಲದೆ ಅಶ್ವಿನ್ ಓವರ್ ಮುಗಿದ ಬಳಿಕ ಸ್ಟಂಪ್ ಮೈಕ್ ಸಮೀಪಕ್ಕೆ ತೆರಳಿ ತಮ್ಮ ಅಸಮಾಧಾನ ಮಾತಿನಲ್ಲೇ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News