ಉಕ್ರೇನ್ ಸರಕಾರದ ವೆಬ್‌ಸೈಟ್ ಮೇಲೆ ಬೃಹತ್ ಸೈಬರ್ ದಾಳಿ‌‌ ನಡೆಸಿ ʼಸಂದೇಶʼ ಪ್ರಸಾರ ಮಾಡಿದ ಹ್ಯಾಕರ್‌ಗಳು

Update: 2022-01-14 17:34 GMT
Representational Image | PTI

ಕೀವ್, ಜ.14: ಶುಕ್ರವಾರ ಸರಕಾರದ ಹಲವು ಇಲಾಖೆಗಳ ವೆಬ್‌ಸೈಟ್‌ಗಳ ಮೇಲೆ ನಡೆದ ಸೈಬರ್‌ದಾಳಿಯಿಂದ ಇಲಾಖೆಗಳ ಕಾರ್ಯನಿರ್ವಹಣೆಗೆ ತೊಡಕಾಗಿದೆ ಎಂದು ಉಕ್ರೇನ್ ಸರಕಾರ ಹೇಳಿದೆ.

ಉಕ್ರೇನ್ ಗಡಿಭಾಗದಲ್ಲಿ ರಶ್ಯಾ ಭಾರೀ ಸಂಖ್ಯೆಯಲ್ಲಿ ಸೇನೆಯನ್ನು ಜಮೆಗೊಳಿಸುತ್ತಿರುವ ವಿದ್ಯಮಾನದ ಮಧ್ಯೆಯೇ ಈ ಸೈಬರ್ ದಾಳಿ ನಡೆದಿರುವುದು ಗಮನಾರ್ಹವಾಗಿದೆ ಎಂದು ಮಾಧ್ಯಮಗಳು ಹೇಳಿವೆ.
ಕೃಷಿ, ಶಿಕ್ಷಣ ಇಲಾಖೆ, ವಿದೇಶ ವ್ಯವಹಾರ ಇಲಾಖೆ ಸೇರಿದಂತೆ ಸರಕಾರದ ಹಲವು ಪ್ರಮುಖ ಇಲಾಖೆ, ಸಂಸ್ಥೆಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿದ್ದು ವೆಬ್‌ಸೈಟ್‌ಗಳ ಕಾರ್ಯನಿರ್ವಹಣೆಗೆ ತೊಡಕಾಗಿದೆ. ಇದೀಗ ಇವನ್ನು ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿದೆ . ಹ್ಯಾಕ್ ಮಾಡಲಾದ ವೆಬ್‌ಸೈಟ್‌ಗಳಲ್ಲಿ ಕೆಲಹೊತ್ತು ರಶ್ಯನ್, ಪೋಲಂಡ್ ಭಾಷೆಯಲ್ಲಿ ಸಂದೇಶ ಪ್ರಸಾರವಾಗಿದೆ ಎಂದು ಉಕ್ರೇನ್‌ನ ವಿದೇಶ ವ್ಯವಹಾರ ಇಲಾಖೆಯ ವಕ್ತಾರರು ಹೇಳಿದ್ದಾರೆ.
‘ಉಕ್ರೇನೀಯರೇ, ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕ ಜಾಲಸಂಪರ್ಕಕ್ಕೆ ಅಪ್ಲೋಡ್ ಮಾಡಲಾಗಿದೆ. ನಿಮ್ಮ ಕಂಪ್ಯೂಟರ್‌ನಲ್ಲಿ ಇರುವ ಎಲ್ಲಾ ಮಾಹಿತಿಗಳನ್ನೂ ಅಳಿಸಲಾಗಿದ್ದು ಅವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ನಿಮ್ಮ ಕುರಿತ ಎಲ್ಲಾ ಮಾಹಿತಿಗಳೂ ಈಗ ಸಾರ್ವಜನಿಕರಿಗೆ ಲಭ್ಯವಾಗಿದೆ. ನೀವು ಈ ಹಿಂದೆ, ಈಗ ಮತ್ತು ಭವಿಷ್ಯದಲ್ಲಿ ಮಾಡುವ ಕೃತ್ಯಕ್ಕಾಗಿ ಇದನ್ನು ಮಾಡಲಾಗಿದೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
 ಉಕ್ರೇನ್ ವಿರುದ್ಧ ಸೈನಿಕ ಕಾರ್ಯಾಚರಣೆಗೂ ಮುನ್ನ ರಶ್ಯಾ ಆ ದೇಶದ ವಿರುದ್ಧ ಸೈಬರ್ ದಾಳಿ ನಡೆಸಬಹುದು ಎಂದು ಅಮೆರಿಕ ಹಾಗೂ ಅದರ ಮಿತ್ರಪಕ್ಷಗಳು ಎಚ್ಚರಿಕೆ ನೀಡಿದ್ದವು. ಇದನ್ನು ರಶ್ಯಾ ನಿರಾಕರಿಸಿತ್ತು. ಆದರೆ ಕೆಲವು ದೇಶಭಕ್ತ ಹ್ಯಾಕರ್‌ಗಳು ದೇಶದ ಹಿತಾಸಕ್ತಿಗಾಗಿ ಆನ್‌ಲೈನ್‌ನಲ್ಲಿ ಸ್ವಯಂ ಕಾರ್ಯಾಚರಣೆ ನಡೆಸಬಹುದು ಎಂದು ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟನ್ ಇತ್ತೀಚೆಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News