ಡಾಬಾ ಸಿಬ್ಬಂದಿ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2022-01-14 18:48 GMT

ಬೆಂಗಳೂರು, ಜ.14: ಡಾಬಾ ಸಿಬ್ಬಂದಿ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಬಂಧಿತರ ಪೈಕಿ ಇಬ್ಬರು ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ಸುಲಿಗೆ, ದರೋಡೆಗೆ ಸಂಚು, ಅಪಹರಣ ಮತ್ತು ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. 

ನಗರದ ಯೂಟರ್ನ್ ಡಾಬಾದಲ್ಲಿ ಹಲವು ವರ್ಷಗಳಿಂದ ಹಾಸನ ಜಿಲ್ಲೆಯ ಮನೋಜ್(19) ಕೆಲಸ ಮಾಡಿಕೊಂಡಿದ್ದನು. ಡಿ.23ರಂದು ಈ ಡಾಬಾಗೆ ಬಂದಿದ್ದ ಆರೋಪಿಗಳು ಊಟ ಮಾಡಿದ ಬಳಿಕವೂ ತುಂಬಾ ಹೊತ್ತು ಕುಳಿತು ಮಾತನಾಡುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ತಡವಾಯಿತು ಬಾಗಿಲು ಹಾಕಬೇಕು. ಬಿಲ್ ನೀಡುವಂತೆ ಕೇಳಿದಾಗ ಸಿಬ್ಬಂದಿ ಜೊತೆ ಜಗಳವಾಡಿ ಹೋಗಿದ್ದಾರೆ. ರಾತ್ರಿ 12 ಗಂಟೆ ಸುಮಾರಿನಲ್ಲಿ ಮತ್ತೆ ಈ ಡಾಬಾ ಬಳಿ ಬಂದ ಆರೋಪಿಗಳು ಡಾಬಾದ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ.

ಆ ವೇಳೆ ಸಿಬ್ಬಂದಿ ಮನೋಜ್ ಬಾಗಿಲು ತೆಗೆಯುತ್ತಿದ್ದಂತೆ ಆರೋಪಿಗಳು ಆತನ ಮೇಲೆಯೂ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ತಕ್ಷಣ ಮನೋಜ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಡಿ.28ರಂದು ಮನೋಜ್ ಮೃತಪಟ್ಟಿದ್ದಾನೆ.

ಈ ಮೊಕದ್ದಮೆ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News