ಗ್ರಾಹಕರಿಗೆ ಮತ್ತೊಂದು ಶಾಕ್: ದುಬಾರಿಯಾಗಲಿದೆ ಹಾಲು

Update: 2022-01-15 04:02 GMT

ಬೆಂಗಳೂರು: ಪ್ರತಿ ಲೀಟರ್ ಹಾಲಿನ ದರವನ್ನು 3 ರೂಪಾಯಿ ಹೆಚ್ಚಿಸಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗಿದೆ.

"ನಂದಿನಿ ಇಡೀ ಭಾರತದಲ್ಲೇ ಅತ್ಯಂತ ಅಗ್ಗದ ಹಾಲು. ನಾವು 37 ರೂಪಾಯಿ ದರದಲ್ಲಿ ಹಾಲು ಮಾರಾಟ ಮಾಡುತ್ತಿದ್ದೇವೆ. ರಾಜ್ಯದ ಎಲ್ಲ ಹಾಲು ಉತ್ಪಾದಕರ ಸಂಘಗಳು ಹಾಲಿನ ಬೆಲೆ ಪರಿಷ್ಕರಣೆಗೆ ಒಕ್ಕೊರಲ ಬೇಡಿಕೆ ಮುಂದಿಟ್ಟಿವೆ. 3 ರೂಪಾಯಿ ದರ ಹೆಚ್ಚಳದಿಂದ ಒಕ್ಕೂಟಕ್ಕೆ ಯಾವುದೇ ಲಾಭ ಇಲ್ಲ. ಈ ಇಡೀ ಮೊತ್ತವನ್ನು ಹಾಲು ಖರೀದಿ ವೇಳೆ ರೈತರಿಗೆ ನೀಡಲಾಗುತ್ತದೆ. ಸದ್ಯವೇ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಪರಿಷ್ಕರಣೆಗೆ ಅನುಮತಿ ಪಡೆಯಲಿದ್ದೇವೆ" ಎಂದು ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಂದಿನಿ ಮೆಗಾ ಫುಡ್ ಪಾರ್ಕ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದು ಕಾರ್ಯಾರಂಭ ಮಾಡಿದ ಬಳಿಕ ನಂದಿಂನಿಯ ಇತರ ಉತ್ಪನ್ನಗಳ ಜತೆಗೆ ಪನೀರ್ ಮತ್ತು ಚೀಸ್ ಮಾರಾಟಕ್ಕೆ ಉತ್ತೇಜನ ಸಿಗಲಿದೆ. ಹಾಸನ ಪೆಟ್ ಬಾಟಲ್ ಪ್ಲಾಂಟ್‌ನಲ್ಲಿ ಉತ್ಪಾದಿಸಿದ ನಂದಿನಿ ಸುವಾಸಿತ ಹಾಲನ್ನು ಮಾರಾಟ ಮಾಡಲು ಸರ್ವ ಸದಸ್ಯರ ಸಭೆ ಒಪ್ಪಿಗೆ ನೀಡಿದೆ. ಈ ಒಂದೇ ಘಟಕದಲ್ಲಿ ದಿನಕ್ಕೆ 5 ಲಕ್ಷ ಬಾಟಲಿ ಸುವಾಸಿತ ಹಾಲು ಉತ್ಪಾದಿಸಲಾಗುವುದು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News