ಕೇಂದ್ರ ಸರಕಾರದಿಂದ ನಮ್ಮ ನೆಲದ ನಂಬಿಕೆಗಳಿಗೆ ಅಪಮಾನ: ಕುಮಾರಸ್ವಾಮಿ ಟೀಕೆ

Update: 2022-01-15 08:24 GMT
ನಾರಾಯಣ ಗುರು

ಬೆಂಗಳೂರು, ಜ.15: ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ಖಂಡನೀಯ ಹಾಗೂ ನಮ್ಮ ನೆಲದ ನಂಬಿಕೆಗಳಿಗೆ ಮಾಡಿರುವ ಅಪಮಾನ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿ ಜಾತಿ, ಮತಭೇದಗಳನ್ನು ಧಿಕ್ಕರಿಸಿ ಸಮಾಜೋದ್ಧಾರಕ್ಕೆ ಶ್ರಮಿಸಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳು,  "ಮನುಷ್ಯರೆಲ್ಲ ಒಂದೇ ಎಂದು ಹೇಳಿ ಒಂದೇ ಜಾತಿ, ಒಂದೇ ಮತ, ಒಬ್ಬರೇ ದೇವರು" ಎಂದು ಸಾರಿ ಆತ್ಮದಲ್ಲಿ ಅರಿವಿನ ಬೆಳಕು ಮೂಡಿಸಿದವರು.

ಅಂಥವರ ಚಿತ್ರವಿದ್ದ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿರುವುದು ಕ್ಷಮಾರ್ಹವಲ್ಲದ ತಪ್ಪು ಹಾಗೂ ಭಾರತೀಯ ಸುಧಾರಣಾ ಪರಂಪರೆಯ ಬಗ್ಗೆ ತಿಳಿವಳಿಕೆ ಇಲ್ಲದ ಅಜ್ಞಾನದ ಪರಮಾವಧಿ. ಆಯ್ಕೆ ಸಮಿತಿಯಲ್ಲಿ ಇಂಥ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ನಾರಾಯಣ ಗುರುಗಳ ಚಿತ್ರವಿರುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್ʼಗೆ ಸಮಿತಿಯು ಅಂಗೀಕಾರ ಮಾಡಬೇಕು. ಕೂಡಲೇ ಸಂಬಂಧಪಟ್ಟ ಕೇಂದ್ರದ ಸಚಿವಾಲಯ ಮತ್ತು ಅಧಿಕಾರಿಗಳು ಈ ಅಚಾತುರ್ಯವನ್ನು ಸರಿ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News