''ಭಿನ್ನ ಧ್ವನಿಯ ಬಂಡಾಯಗಾರ ಪ್ರೊ.ಚಂಪಾ'': ನಾಡೋಜ ಬರಗೂರು ರಾಮಚಂದ್ರಪ್ಪ

Update: 2022-01-15 18:25 GMT

ಬೆಂಗಳೂರು, ಜ. 15: `ನವ್ಯ ಸಾಹಿತ್ಯದಿಂದ ಹೊರಬಂದು ಪ್ರಗತಿಪರ, ಬಂಡಾಯ ಸಾಹಿತ್ಯ ಮತ್ತು ಚಳವಳಿಯಲ್ಲಿ ಕ್ರಿಯಾಶೀಲರಾಗಿದ್ದ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅವರು ನುಡಿದಂತೆ ನಡೆದ ಭಿನ್ನ ಧ್ವನಿಯ ಬಂಡಾಯಗಾರ' ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಇಂದಿಲ್ಲಿ ಹೇಳಿದ್ದಾರೆ.

ಶನಿವಾರ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ-ಕರ್ನಾಟಕ ಏರ್ಪಡಿಸಿದ್ದ ಚಂಪಾ ನುಡಿನಮನ ಆನ್‍ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾರಸ್ವತ ಲೋಕದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಚಂಪಾ ಅವರ ಸಮಗ್ರ ಸಾಹಿತ್ಯವನ್ನು ರಾಜ್ಯ ಸರಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಪ್ರೊ.ಚಂಪಾ ಅವರ ಲೇಖನ, ನಾಟಕ. ಕಥೆ, ಕಾವ್ಯ ಸೇರಿದಂತೆ ಅವರ ಸಮಗ್ರ ಸಾಹಿತ್ಯವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಥವಾ ಸರಕಾರ ಪ್ರಕಟಿಸಬೇಕು. ಅಲ್ಲದೆ, ಆ ಕೃತಿಗಳನ್ನು ಅಗ್ಗದ ಬೆಲೆಯಲ್ಲಿ ಜನ ಸಾಮಾನ್ಯರಿಗೆ ಅವರ ಸಾಹಿತ್ಯವನ್ನು ಒದಗಿಸಿಕೊಡಬೇಕು. ಒಂದು ವೇಳೆ ಸರಕಾರ ಮಾಡಿದ್ದರೆ ಆ ಕೆಲಸವನ್ನು ಕಸಾಪ ಮಾಡಬೇಕ ಎಂದು ಬರಗೂರು ಒತ್ತಾಯಿಸಿದರು.

ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಆಹ್ವಾನಿತರ ಬಗ್ಗೆ ಅಂದಿನ ಸರಕಾರ ಆಕ್ಷೇಪಿಸಿತ್ತು. ಆದರೆ, ಸರಕಾರದ ಆಕ್ಷೇಪಕ್ಕೆ ಸೊಪ್ಪು ಹಾಕದೆ ಕನ್ನಡ ಸಾಹಿತ್ಯ ಪರಿಷತ್ ಸ್ವಾಯತ್ತತೆಯನ್ನು ಎತ್ತಿ ಹಿಡಿದ ಭಿನ್ನ ಧ್ವನಿಯ ಬಂಡಾಯಗಾರ. ಕನ್ನಡ ಭಾಷೆ ಅವರ ಮೊದಲ ಆದ್ಯತೆಯಾಗಿತ್ತು. ಪ್ರಾದೇಶಿಕ ಪಕ್ಷ ಅಗತ್ಯವೆಂದು ಪರಿಭಾವಿಸಿ ಚಾಮರಾಜಪೇಟೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಬರಗೂರು ರಾಮಚಂದ್ರಪ್ಪ ಸ್ಮರಿಸಿದರು.

ಪ್ರೊ.ಚಂಪಾ ಅವರು ನಮ್ಮ ನಡುವಿನ ಭಿನ್ನ ಧ್ವನಿಯ ಬಿಚ್ಚು ಮತ್ತು ಚುಚ್ಚು ಮಾತಿನ ಅಪರೂಪದ ವ್ಯಕ್ತಿ. ಅವರ ಚುಚ್ಚು ಮಾತು ಎಂದೂ, ಯಾರಿಗೂ ಗಾಯ ಮಾಡದೆ ಕಚಗುಳಿ ಇಟ್ಟಂತೆ ಇರುತ್ತಿತ್ತು. ಯಾವುದೇ ವ್ಯಕ್ತಿ ಮತ್ತು ಅವರು ಎಷ್ಟೇ ದೊಡ್ಡವರಿದ್ದರು ಯಾವುದೇ ಮುಚ್ಚುಮರೆ ಇಲ್ಲದೆ ಟೀಕಿಸುತ್ತಿದ್ದರು. ಆದರೆ, ಅವರು ಎಂದೂ ಯಾರನ್ನು ದ್ವೇಷ ಮಾಡಲಿಲ್ಲ ಎಂದು ಬರಗೂರು ರಾಮಚಂದ್ರಪ್ಪ, ಚಂಪಾ ಅವರ ಕವನವನ್ನು ಉಲ್ಲೇಖಿಸಿದರು.

ಚಂಪಾ ಅವರು ನುಡಿದಂತೆ ಮತ್ತು ಅವರು ಬದುಕಿದಂತೆ ಅವರಿಗೆ ವೈಚಾರಿಕಾ ವಿದಾಯ ಹೇಳಿದ್ದಕ್ಕೆ ಕುಟುಂಬದವರಿಗೆ ಅಭಿನಂದನೆಗಳು. ಯಾವುದೇ ಜಡ ಸಂಪ್ರಾದಾಯಗಳಿಲ್ಲದೆ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದರು ಎಂದ ಅವರು, ಧೀಮಂತಿಕೆಯ ಬಂಡಾಯಗಾರ ಚಂಪಾ ಅವರು ಎಂದೂ ಆತ್ಮವಂಚನೆ ಮಾಡಿಕೊಳ್ಳದೆ ಬದುಕಿದರು. ಯಾವುದೇ ವಿಚಾರಗಳಿದ್ದರೂ ಮುಕ್ತವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಅನಸೂಯ ಕಾಂಬ್ಳೆ, ರಾಜಪ್ಪ ದಳವಾಯಿ, ಡಾ. ಎಲ್.ಹನುಮಂತಯ್ಯ, ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲಸ್ವಾಮಿ, ಸರಜೂ ಕಾಟ್ಕರ್, ಆರ್.ಜಿ.ಹಳ್ಳಿ ನಾಗರಾಜ್, ರಾಜಶೇಖರ ಮೂರ್ತಿ, ಭಕ್ತರಹಳ್ಳಿ ಕಾಮರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡು ಚಂಪಾ ಅವರ ಒಡನಾಟದ ಬಗ್ಗೆ ಮಾತನಾಡಿದರು.

ಯುವಕರಿಗೆ ಅವಕಾಶ

`ಯುವ ಲೇಖಕರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದ ಚಂಪಾ, ತಮ್ಮ `ಸಂಕ್ರಮಣ' ಸಾಹಿತ್ಯ ಪತ್ರಿಕೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಯುವಕರಿಗೆ ನೀಡುತ್ತಿದ್ದರು. ಅವರು ಎಲ್ಲರನ್ನು ನಿರ್ಬೀಢೆಯಿಂದ, ಯಾವುದೇ ಮುಲಾಜಿಲ್ಲದೆ ಮಾತನಾಡುತ್ತಿದ್ದ ಅಪರೂಪದ ವ್ಯಕ್ತಿ. ಸಾಹಿತ್ಯ ವಲಯದಲ್ಲಿವರು ಜಗಳಗಂಟರು ಎಂದೆ ಪ್ರಸಿದ್ಧ. ಆದರೆ, ಅವರ ಕಾವ್ಯ ಮತ್ತು ನಾಟಕಗಳಿಗೆ ಸರಿಯಾದ ವಿಮರ್ಶೆ ನ್ಯಾಯ ಸಿಗಲಿಲ್ಲ'

-ಡಾ.ಎಲ್.ಹನುಮಂತಯ್ಯ ರಾಜ್ಯಸಭಾ ಸದಸ್ಯ 

ಕನ್ನಡ ಸಾಹಿತ್ಯದ ಕೆಂಪು ನಕ್ಷತ್ರ

ಸಂವಿಧಾನ ಪರಾಮರ್ಶೆ ವಿರುದ್ಧ, ಬಾಬಾಬುಡಾನ್ ಗಿರಿ ಉಳಿವಿಗಾಗಿನ ಹೋರಾಟ, ಮಡೆ ಮಡೆಸ್ನಾನದಂತಹ ಮೂಢನಂಬಿಕೆ ವಿರೋಧಿ ಸೇರಿದಂತೆ ಹಲವು ಹೋರಾಟಗಳಲ್ಲಿ ನಮ್ಮೊಂದಿಗೆ ಇದ್ದ ಅಪರೂಪದ ಬರಹಗಾರ ಚಂಪಾ ಅವರು ಕನ್ನಡ ಸಾಹಿತ್ಯ ಕೆಂಪು ನಕ್ಷತ್ರ. ತಾತ್ವಿಕ ಭಿನ್ನಾಭಿಪ್ರಾಯವುಳ್ಳ ಕಾರಣಕ್ಕೆ ಹತ್ಯೆಗೈಯುವ ಪ್ರಯತ್ನದ ಸಂದರ್ಭದಲ್ಲಿಯೂ ನಿರ್ಬೀಢೆಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.

-ಶ್ರೀ ವೀರಭದ್ರ ಚನ್ನಮಲ್ಲಸ್ವಾಮೀಜಿ ನಿಡುಮಾಮಿಡಿ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News