ವೀಕೆಂಡ್ ಕರ್ಫ್ಯೂ: ಮಂಗಳೂರಿನಲ್ಲಿ ಬಸ್ ಸಹಿತ ವಾಹನಗಳ ಓಡಾಟದಲ್ಲಿ ಇಳಿಮುಖ

Update: 2022-01-15 13:57 GMT

ಮಂಗಳೂರು, ಜ.15: ಕೊರೋನ ರೂಪಾಂತರಿ ಒಮೈಕ್ರಾನ್ ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರದ ಆದೇಶದ ಹಿನ್ನಲೆಯಲ್ಲಿ ವೀಕೆಂಡ್ ಕರ್ಫ್ಯೂವಿನ ಮೊದಲ ದಿನವಾದ ಶನಿವಾರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬಸ್ ಸಹಿತ ವಾಹನಗಳ ಸಂಚಾರ ಎಂದಿನಂತಿತ್ತು. ಆದರೆ ಅವುಗಳ ಸಂಖ್ಯೆಯಲ್ಲಿ ತೀರಾ ಇಳಿಮುಖವಿತ್ತು. ಸಾರ್ವಜನಿಕರ ಓಡಾಟವೂ ತುಂಬಾ ಕಡಿಮೆ ಇತ್ತು.

ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಬಸ್ಸುಗಳು, ಆಟೋರಿಕ್ಷಾ, ಟ್ಯಾಕ್ಸಿಗಳ ಓಡಾಟ ಅಷ್ಟೇನೂ ಇರಲಿಲ್ಲ. ದಿನಬಳಕೆಯ ವಸ್ತುಗಳ ಅಂಗಡಿಗಳು, ಬೀದಿ ಬದಿ ವ್ಯಾಪಾರ, ಮಾರುಕಟ್ಟೆಗಳು ಎಂದಿನಂತೆ ಕಾರ್ಯಾಚರಿಸಿತ್ತು. ಆದರೆ ಬೀದಿಬದಿ ಸಹಿತ ಮಾರುಕಟ್ಟೆಗಳಲ್ಲಿ ಜನರಿಲ್ಲದ ಕಾರಣ ವ್ಯಾಪಾರ ವಹಿವಾಟಿನಲ್ಲಿ ಚುರುಕು ಕಾಣಿಸಲಿಲ್ಲ. ಮಧ್ಯಾಹ್ನದ ಬಳಿಕವಂತೂ ನಗರದಲ್ಲಿ ಜನರ ಮತ್ತು ವಾಹನಗಳ ಓಡಾಟ ತೀರಾ ಕಡಿಮೆಯಾಗಿತ್ತು.

ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ವೇಳೆಗೆ ನಗರದಲ್ಲಿ ಅದರಲ್ಲೂ ಶನಿವಾರ ವಾಹನ ದಟ್ಟಣೆ ಇರುತ್ತದೆ. ಆದರೆ ಶನಿವಾರ ವೀಕೆಂಡ್ ಕರ್ಫ್ಯೂ ಆದ ಕಾರಣ ವಾಹನ ಸಂಚಾರ ಕಡಿಮೆ ಇದ್ದುದರಿಂದ ಸಿಗ್ನಲ್ ಲೈಟ್‌ನ ಸಮಸ್ಯೆಯೇ ಇರಲಿಲ್ಲ.

ಹೊಟೇಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಎಂದು ಆದೇಶಿಸಲಾಗಿದ್ದರೂ ನಗರದ ಹಲವು ಒಳರಸ್ತೆಗಳ ಕೆಲವು ಹೊಟೇಲ್‌ಗಳಲ್ಲಿ ಗ್ರಾಹಕರಿಗೆ ಕುಳಿತು ತಿನ್ನಲು ಅವಕಾಶ ನೀಡಿರುವುದು ಕಂಡು ಬಂದಿದೆ.

ನಗರದ ಪ್ರಾರ್ಥನಾ ಕೇಂದ್ರಗಳು, ಬೀಚ್, ಮಾಲ್‌ಗಳಿಗೆ ಅವಕಾಶವಿಲ್ಲದ ಕಾರಣ ಬಹುತೇಕ ಮಂದಿ ಮನೆಯಲ್ಲೇ ಕಳೆದರು. ಶಾಲೆ, ಕಾಲೇಜುಗಳು ಕೂಡ ಬಂದ್ ಆಗಿದ್ದವು. ವಿವಾಹ, ನೇಮೋತ್ಸವ, ಯಕ್ಷಗಾನ ಇತ್ಯಾದಿ ಪೂರ್ವ ನಿಗದಿತ ಕಾರ್ಯಕ್ರಮಗಳು ಹೊರಾಂಗಣದಲ್ಲಿ 200, ಒಳಾಂಗಣದಲ್ಲಿ 100ರಷ್ಟು ಜನರ ಸೇರುವಿಕೆಯಿಂದ ನಿಯಮಬದ್ಧವಾಗಿ ನೆರವೇರಿದವು.

ವಾಹನ ತಪಾಸಣೆ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ 36 ಕಡೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳ ಹಲವೆಡೆ ಚೆಕ್‌ಪೋಸ್ಟ್ ಹಾಕಲಾಗಿತ್ತು. ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಕಾವಲು ಇತ್ತು. ಅನಗತ್ಯವಾಗಿ ಓಡಾಡುವ ವಾಹನಗಳಿಗೆ ದಂಡ ವಿಧಿಸುತ್ತಿದ್ದುದು ಕಂಡುಬಂತು. ಅಲ್ಲದೆ ಮಾಸ್ಕ್ ಹಾಕದ ವಾಹನಿಗರಿಗೂ ದಂಡ ವಿಧಿಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News