ಮುಷ್ಕರ ಬಿಟ್ಟು ಬೋಧನೆಗೆ ಹಿಂದಿರುಗಿ: ಅತಿಥಿ ಉಪನ್ಯಾಸಕರಿಗೆ ಸಚಿವ ಅಶ್ವತ್ಥನಾರಾಯಣ ಮನವಿ

Update: 2022-01-15 17:53 GMT

ಬೆಂಗಳೂರು, ಜ.15: ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸರಕಾರವು ಸಹಾನುಭೂತಿಯಿಂದ ಪರಿಶೀಲಿಸಿದ್ದು, ಅವರ ವೇತನವನ್ನು ಎರಡು ಪಟ್ಟಿಗಿಂತಲೂ ಹೆಚ್ಚು ಏರಿಸಿದೆ. ಆದ್ದರಿಂದ, ಮುಷ್ಕರವನ್ನು ಮುಂದುವರಿಸದೆ ಬೋಧನೆಗೆ ಹಿಂದಿರುಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮನವಿ ಮಾಡಿಕೊಂಡಿದ್ದಾರೆ. 

ಸರಕಾರ ಘೋಷಿಸಿರುವ ಪ್ಯಾಕೇಜ್ ಸಮಾಧಾನಕರವಾಗಿಲ್ಲ ಎಂದಿರುವ ಅತಿಥಿ ಉಪನ್ಯಾಸಕರ ಕೆಲವು ಸಂಘಟನೆಗಳು, ತಾವು ಮುಷ್ಕರ ಮುಂದುವರಿಸಿರುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಅವರು ಶನಿವಾರ ಹೀಗೆಂದಿದ್ದು, ಅತಿಥಿ ಉಪನ್ಯಾಸಕರಿಗೆ ಅತ್ಯುತ್ತಮವಾದ ಪ್ಯಾಕೇಜ್ ನೀಡಲಾಗಿದೆ ಎಂದರು. 

2022-23ರ ಶೈಕ್ಷಣಿಕ ವರ್ಷಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಸೋಮವಾರದಿಂದ (ಜ.17) ಆರಂಭವಾಗಲಿದೆ. ಇದಕ್ಕಾಗಿ ಅಭಿವೃದ್ಧಿಪಡಿಸಿರುವ ಆನ್-ಲೈನ್ ಪೋರ್ಟಲ್‍ನಲ್ಲಿ ಅತಿಥಿ ಉಪನ್ಯಾಸಕರು ಅರ್ಜಿ ಹಾಕಿಕೊಳ್ಳಬೇಕು. ಅರ್ಜಿ ಸಲ್ಲಿಸಲು ಒಂದು ವಾರ ಕಾಲಾವಕಾಶವಿದ್ದು, ಅಭ್ಯರ್ಥಿಗಳು ತಮ್ಮ ಇಷ್ಟದ ಐದು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. 

ಅರ್ಹರನ್ನು ಇಡೀ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ (10 ತಿಂಗಳು) ನೇಮಿಸಿಕೊಳ್ಳಲಾಗುವುದು. ಜತೆಗೆ, ಇನ್ನು ಮುಂದೆ ಪ್ರತೀ ತಿಂಗಳ 10ನೇ ತಾರೀಖಿನೊಳಗೆ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸಲಾಗುವುದು. ಅತಿಥಿ ಉಪನ್ಯಾಸಕರು ವಿದ್ಯಾರ್ಥಿ ಸಮುದಾಯದ ಹಿತದೃಷ್ಟಿಯನ್ನೂ ಪರಿಗಣಿಸಬೇಕು ಎಂದು ಸಚಿವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News