‘ಬುಲ್ಲಿಬಾಯ್’ ಆರೋಪಿ ಬಿಷ್ಣೋಯ್ ಗೆ ಜಾಮೀನು ನಿರಾಕರಣೆ

Update: 2022-01-15 18:14 GMT

ಹೊಸದಿಲ್ಲಿ,ಜ.16: 100ಕ್ಕೂ ಅಧಿಕ ಮಂದಿ ಪ್ರತಿಷ್ಠಿತ ಮುಸ್ಲಿಂ ಮಹಿಳೆಯರನ್ನು ‘ಆನ್ಲೈನ್ ನಲ್ಲಿ ಹರಾಜಿಗಿದ್ದಾರೆ ’ ಎಂದು ಬಿಂಬಿಸುವ ವಿವಾದಾತ್ಮಕ ಆ್ಯಪ್ ಬುಲ್ಲಿಭಾಯ್ನ ಸೃಷ್ಟಿಕರ್ತ ನೀರಜ್ ಬಿಷ್ಣೋಯಿಗೆ ದಿಲ್ಲಿಯ ನ್ಯಾಯಾಲಯವು ಶುಕ್ರವಾರ ಜಾಮೀನು ನಿರಾಕರಿಸಿದೆ. ಬಿಷ್ಣೋಯಿಯ ಕೃತ್ಯವು ನಿರ್ದಿಷ್ಟ ಸಮುದಾಯ ಹಾಗೂ ಮಹಿಳೆಯರ ಘನತೆಗೆ ಮತ್ತು ಸಮಾಜದಲ್ಲಿ ಕೋಮು ಸಾಮರಸ್ಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಅದು ಕಿಡಿಕಾರಿದೆ.

ಬಿಷ್ಣೋಯಿ ಹಾಗೂ ಇತರ ಮೂವರು ಆರೋಪಿಗಳು ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ಅವರ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಭಾವಚಿತ್ರಗಳನ್ನು ಅನುಮತಿಯಿಲ್ಲದೆ ತೆಗೆದು, ಅವುಗಳನ್ನು ಬುಲ್ಲಿ ಬಾಯ್ ಆ್ಯಪ್ನಲ್ಲಿ ಹರಾಜಿಗಿದ್ದಾರೆ ಎಂದು ಬರೆದು ಪ್ರದರ್ಶಿಸಲಾಗುತ್ತಿತ್ತು.

ಗಿಟ್ಹಬ್ ವೆಬ್‌ ಪ್ಲಾಟ್‌ ಫಾರಂ ಮೂಲಕ ಲಭ್ಯವಾಗುತ್ತಿದ್ದ ಬುಲ್ಲಿಬಾಯ್ ಆ್ಯಪ್ ವಿರುದ್ಧ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಆರೋಪಿ ಬಿಷ್ಣೋಯಿಗೆ ಜಾಮೀನು ನೀಡುವುದನ್ನು ವಿರೋಧಿಸಿದ ದಿಲ್ಲಿ ಪೊಲೀಸರು, ಆ್ಯಪ್ ಅನ್ನು ಸೃಷ್ಟಿಸಲು ಆತ ಬಳಸಿದ ಡಿಜಿಟಲ್ ಉಪಕರಣದ ಪರಿಶೀಲನೆಯನ್ನು ತಾವು ನಡೆಸುತ್ತಿರುವುದಾಗಿ ತಿಳಿಸಿದರು. ಭಾರತದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವಾರು ಪ್ರಕರಣಗಳಲ್ಲಿ ಬಿಷ್ಣೋಯಿ ಶಾಮೀಲಾಗಿದ್ದಾನೆಂದು ಅವರು ಹೇಳಿದರು.   

ಆರೋಪಿ ಬಿಷ್ಣೋಯಿ ವಿರುದ್ಧದ ಆರೋಪಗಳು ಗಣನೀಯವಾಗಿವೆ ಹಾಗೂ ಈ ಹಂತದಲ್ಲಿ ಆತನಿಗೆ ಜಾಮೀನು ನೀಡಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದು ಮುಖ್ಯಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ತಿಳಿಸಿದರು. ಈ ಆ್ಯಪ್ ಮಹಿಳೆಯರನ್ನು ಖಳರನ್ನಾಗಿಸುವ ಅಭಿಯಾನವಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

ನಿರ್ದಿಷ್ಟ ಸಮುದಾಯದ ಮಹಿಳಾ ಪತ್ರಕರ್ತೆಯರು,ಸಿಲೆಬ್ರಿಟಿಗಳು, ಸಾಮಾಜಿಕ ಜಾಲತಾಣಗಳ ಖ್ಯಾತನಾಮರನ್ನು ಗುರಿಯಿರಿಸಿ ಆರೋಪಿಯು ಈ ಆ್ಯಪ್ ಸೃಷ್ಟಿಸಿದ್ದಾನೆ ಹಾಗೂ ಅವರನ್ನು ಅಪಮಾನಿಸುವ, ನಿಂದಿಸುವ ದುರುದ್ದೇಶವನ್ನು ಆತ ಹೊಂದಿದ್ದ ಎಂದು ನ್ಯಾಯಾಲಯದ ತಿಳಇಸಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿಯಾದ ಬಿಷ್ಣೋಯಿ ಎಂಬಾತನನ್ನು ಈ ತಿಂಗಳ ಆರಂಭದಲ್ಲಿ ಬಂಧಿಸಲಾಗಿತ್ತು ಹಾಗೂ ಆತನಿಗೆ ನ್ಯಾಯಾಲಯವು ಏಳು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News