ಕೋವಿಡ್ ಹಿನ್ನೆಲೆ: ಕಬಕ ಪುತ್ತೂರು-ಮಂಗಳೂರು ಸೆಂಟರ್ ಪ್ಯಾಸೆಂಜರ್ ರೈಲು ವಿಶೇಷ ರೈಲಾಗಿ ಪರಿವರ್ತನೆ

Update: 2022-01-16 05:49 GMT

ಪುತ್ತೂರು, ಜ.16: ಕಬಕ ಪುತ್ತೂರು-ಮಂಗಳೂರು ಸೆಂಟರ್ ಮತ್ತು ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ನಡುವಣ ಓಡಾಟ ನಡೆಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದಾಗಿ ತಾತ್ಕಾಲಿಕವಾಗಿ ವಿಶೇಷ ರೈಲು ಬಂಡಿಯಾಗಿ ಪರಿವರ್ತನೆಗೊಳಿಸಲಾಗಿದೆ. ಇದರ ಪರಿಣಾಮವಾಗಿ ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ನಡುವಣ 45 ಕಿ.ಮೀ. ಅಂತರದ ರೈಲು ಪ್ರಯಾಣ ದರವನ್ನು ರೂ.15ರಿಂದ ರೂ.30ಕ್ಕೆ ಏರಿಕೆಗೊಳಿಸಲಾಗಿದೆ. ಪ್ಯಾಸೆಂಜರ್ ರೈಲು ಬಂಡಿಯನ್ನು ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ರೈಲನ್ನಾಗಿ ಪರಿವರ್ತಿಸಿ ಹೆಚ್ಚುವರಿ ರೈಲಿನ ಪ್ರಯಾಣ ದರವನ್ನು ವಿಧಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆಯ ಕೊರತೆಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸಂಬಂಧಿಸಿದ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣದ ನಡುವಣ 50 ಕಿ.ಮೀ. ಪ್ರಯಾಣದ ಅಂತರಕ್ಕೂ ಪ್ರಯಾಣ ದರವನ್ನು ರೂ. 15ರಿಂದ ರೂ. 30ಕ್ಕೆ ಏರಿಸಲಾಗಿದೆ. ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ ನಡುವಣ 95 ಕಿ.ಮೀ. ಅಂತರಕ್ಕೆ ಹಿಂದೆ ಇದ್ದ ಪ್ರಯಾಣ ದರ ರೂ.30ನ್ನು ರೂ.50ಕ್ಕೆ ಏರಿಸಲಾಗಿದೆ.

ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ನಡುವಣ ಓಡಾಟ ನಡೆಸುತ್ತಿರುವ ವಿಶೇಷ ರೈಲಾಗಿ ಪರಿವರ್ತನೆಗೊಂಡಿರುವ ಲೋಕಲ್ ರೈಲಿಗೆ ಮಂಗಳೂರಿಗೆ ತೆರಳುವಾಗ ನೇರಳಕಟ್ಟೆ ರೈಲು ನಿಲ್ದಾಣದಲ್ಲಿ ನಿಲುಗಡೆ ಇದೆ. ಆದರೆ ಇದೇ ರೈಲು ಬಂಡಿ ಸಂಜೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕಬಕ ಪುತ್ತೂರು ರೈಲು ನಿಲ್ದಾಣಕ್ಕೆ ಸಂಚರಿಸುವಾಗ ನೇರಳಕಟ್ಟೆಯಲ್ಲಿ ನಿಲುಗಡೆ ರದ್ದುಪಡಿಸಲಾಗಿದೆ. ಅಲ್ಲದೆ ಈ ಎರಡೂ ವಿಶೇಷ ರೈಲುಗಳಿಗೂ ಮಂಗಳೂರು ಸೆಂಟ್ರಲ್‌ನಿಂದ ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣದ ವರೆಗಿನ ಎಲ್ಲಾ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News