×
Ad

​ಸರಳ, ಸಾಂಪ್ರದಾಯಿಕ ಪರ್ಯಾಯೋತ್ಸವ, ದರ್ಬಾರ್ ಸಭೆ: ಸಮಿತಿಯಿಂದ ಮಹತ್ವದ ನಿರ್ಧಾರ

Update: 2022-01-16 21:14 IST

ಉಡುಪಿ, ಜ.16: ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಚರ್ತುಥ ಪರ್ಯಾಯ ಮಹೋತ್ಸವ ವನ್ನು ಸ್ವಾಮೀಜಿಯ ಸೂಚನೆಯಂತೆ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಸಲು ತೀರ್ಮಾನಿಸಿರುವುದಾಗಿ ಪರ್ಯಾಯ ಮಹೋತ್ಸವ ಸಮಿತಿ ಘೋಷಿಸಿದೆ.

ಸಮಿತಿ ಗೌರವಾಧ್ಯಕ್ಷ ಕೆ.ಸೂರ್ಯನಾರಾಯಣ ಉಪಾಧ್ಯಾಯರು ಹಾಗೂ ಕಾರ್ಯಾಧ್ಯಕ್ಷ ಮತ್ತು ಶಾಸಕ ಕೆ.ರಘುಪತಿ ಭಟ್ ಉಪಸ್ಥಿತಿಯಲ್ಲಿ ಶನಿವಾರ ರಾತ್ರಿ ನಡೆದ ಪರ್ಯಾಯೋತ್ಸವ ಸಮಿತಿ ಪ್ರಮುಖರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಕೋವಿಡ್ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಾಗೂ ಸರಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರ್ಣವಾಗಿ ಸಹಕರಿಸಬೇಕೆಂಬ ಭಾವಿ ಪರ್ಯಾಯ ಕೃಷ್ಣಾಪುರ ಸ್ವಾಮೀಜಿಯ ಆಶಯದಂತೆ ಜ.18ರ ನಸುಕಿನ ವೇಳೆ ನಡೆಯುವ ಪರ್ಯಾಯೋತ್ಸವ ಮೆರವಣಿಗೆ ಮತ್ತು ನಂತರ ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್ ಸಭೆಯನ್ನು ತೀರಾ ಸಾಂಪ್ರದಾಯಿಕತೆಗೆ ಆದ್ಯತೆ ನೀಡಿ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ.

ಟ್ಯಾಬ್ಲೋ ಸಂಖ್ಯೆ ಇಳಿಕೆ

ಪರ್ಯಾಯೋತ್ಸವ ಮೆರವಣಿಗೆಯಲ್ಲಿ ಉತ್ಸವ ಸಮಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಿದ್ಧಪಡಿಸಲಾಗಿದ್ದ ಜಾನಪದ ಕಲಾತಂಡಗಳನ್ನು ಮತ್ತು ಕೆಲವು ಟ್ಯಾಬ್ಲೋಗಳನ್ನು ರದ್ದುಪಡಿಸಿ, ಅವುಗಳ ಸಂಖ್ಯೆ ಇಳಿಕೆ ಮಾಡಲಾಗಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಅಷ್ಟ ಮಠಾಧೀಶರು ಕುಳಿತುಕೊಳ್ಳುವ ಮೇನೆಯನ್ನು ಹೊತ್ತ ವಾಹನಗಳು, ವಾದ್ಯ ಚಂಡೆ, ಡೋಲು, ಬಿರುದಾವಳಿ ಮತ್ತು ಕೇವಲ ಪೌರಾಣಿಕ ದೃಶ್ಯಾವಳಿ ಗಳನ್ನೊಳಗೊಂಡ ಟ್ಯಾಬ್ಲೋಗಳು ಮಾತ್ರ ಮೆರಣಿಗೆಯಲ್ಲಿ ಇರುತ್ತವೆ. ಪರ್ಯಾಯ ದರ್ಬಾರ್ ಸಭೆಯಲ್ಲೂ ಸೀಮಿತ ಸಂಖ್ಯೆಯ ಆಸನ ವ್ಯವಸ್ಥೆ ಮಾಡಲಾುವುದು ಎಂದು ಅವರು ತಿಳಿಸಿದ್ದಾರೆ.

ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರಥಬೀದಿಯಲ್ಲಿ ನಡೆಯುವ ಜ.17ರ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿ 10ಗಂಟೆಯೊಳಗೆ ಮುಗಿಸಲಾಗುವುದು. ರಥಬೀದಿ ಸೇರಿದಂತೆ ನಗರದ ಒಟ್ಟು 9 ಕಡೆಗಳಲ್ಲಿ ಬಹೃತ್ ಎಲ್‌ಇಡಿ ಟಿವಿ ಪರದೆಗಳನ್ನು ಆಳವಡಿಸಿ ಪರ್ಯಾಯ ನೇರಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ.

ಲಸಿಕಾ ಕೇಂದ್ರ ಸ್ಥಾಪನೆ

ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ಉಚಿತ ಚಿಕಿತ್ಸಾಲಯದಲ್ಲಿ ಈಗಾಗಲೇ ಆರೋಗ್ಯ ಇಲಾಖೆಯಿಂದ ಒಂದು ಕೋವಿಡ್ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ.

ಪರ್ಯಾಯ ವೆುರವಣಿಗೆ ಹಿನ್ನೆಲೆಯಲ್ಲಿ ಜ.17ರಂದು ರಾತ್ರಿ ಹೆಚ್ಚು ಜನ ಸೇರುವುದರಿಂದ ನಗರದಲ್ಲಿ ಇನ್ನೊಂದು ಲಸಿಕಾ ಕೇಂದ್ರ ಸ್ಥಾಪಿಸುವ ಯೋಜನೆ ಇದೆ. ಅದೇ ರೀತಿ ತುರ್ತು ಅಗತ್ಯಕ್ಕಾಗಿ ಆರು ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಬಿಗಿ ಪೊಲೀಸ್ ಭದ್ರತೆ

ಪರ್ಯಾಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣು ವರ್ಧನ್ ಉಡುಪಿ ಶ್ರೀಕೃಷ್ಣ ಮಠ, ರಥಬೀದಿ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

70ಕ್ಕೂ ಅಧಿಕ ಡಿವೈಎಸ್ಪಿ, ಪೊಲೀಸ್ ನಿರೀಕ್ಷಕರು, ಉಪನಿರೀಕ್ಷಕರು, 60 ಎಎಸ್ಸೈ, 60 ಮಹಿಳಾ ಹೆಡ್‌ ಕಾನ್‌ಸ್ಟೇಬಲ್ ಮತ್ತು ಮಹಿಳಾ ಕಾನ್‌ಸ್ಟೇಬಲ್ ಗಳು, 650 ಹೆಡ್‌ಕಾನ್‌ಸ್ಟೇಬಲ್ ಮತ್ತು ಕಾನ್‌ಸ್ಟೇಬಲ್‌ಗಳು, ಏಳು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಎರಡು ಕೆಎಸ್‌ಆರ್‌ಪಿ, ನಾಲ್ಕು ವಿದ್ವಂಸಕ ನಿಗ್ರಹ ಪರಿಶೀಲನಾ ತಂಡ ಮತ್ತು ಒಂದು ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸ ಲಾಗಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮ ರದ್ದು

ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ಬಾರಿ ನಗರದ ವಿವಿಧ ಕಡೆ ನಡೆಯುತ್ತಿದ್ದ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿರುವುದರಿಂದ ಎಲ್ಲ ಕಾರ್ಯಕ್ರಮ ಗಳು ರದ್ದುಗೊಂಡಿವೆ.

ಪ್ರತಿಬಾರಿ ಕಿನ್ನಿಮುಲ್ಕಿ, ಸರ್ವಿಸ್ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್, ಜಟ್ಕಾ ಸ್ಟಾಂಡ್, ಗೀತಾಂಜಲಿ ಬಳಿ, ಮಿತ್ರಾ ಆಸ್ಪತ್ರೆ ಬಳಿ, ಪಿಪಿಸಿ ಸಭಾಂಗಣ ದಲ್ಲಿ ವಿವಿಧ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ತ್ತಿತ್ತು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

''ಪರ್ಯಾಯ ಕಾರ್ಯಕ್ರಮಗಳನ್ನು ವಿವಿಧ ಟಿವಿ ವಾಹಿನಿಗಳಲ್ಲಿ ನೇರಪ್ರಸಾರ ಮಾಡುವುದರಿಂದ ಭಕ್ತಾದಿಗಳು ಇದನ್ನು ಸದುಪಯೋಗ ಪಡೆದುಕೊಂಡು ಸಹಕರಿಸಬೇಕು. ಎರಡು ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಉತ್ಸವದಲ್ಲಿ ಭಾಗವಹಿಸಲು ಆದ್ಯತೆ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಸಮಿತಿಯು ಜಿಲ್ಲಾಡಳಿತದೊಂದಿಗೆ ಪೂರ್ಣ ಸಹಕರಿಸಲಿದೆ''.

-ರಘುಪತಿ ಭಟ್, ಶಾಸಕರು, ಉಡುಪಿ

''ಪರ್ಯಾಯ ಮಹೋತ್ಸವದ ಸಂಬಂಧ ಈಗಾಗಲೇ ಸಚಿವರ ಉಪಸ್ಥಿತಿ ಯಲ್ಲಿ ಸಮಿತಿಯವರೊಂದಿಗೆ ಸಭೆ ನಡೆಸಲಾಗಿದೆ. ಸ್ವಾಮೀಜಿ ಸರಳ ಹಾಗೂ ಸಾಂಪ್ರಾದಾಯಿಕವಾಗಿ ಆಚರಣೆ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಸಮಿತಿಯವರು ಸರಳವಾಗಿ ಆಚರಿಸುತ್ತಾರೆ. ಈ ಕುರಿತು ಈವರೆಗೆ ಸರಕಾರ ದಿಂದ ಯಾವುದೇ ವಿಶೇಷ ಆದೇಶ ಬಂದಿಲ್ಲ. ಜ.17ರಂದು ರಾತ್ರಿ ನಗರದಲ್ಲಿ ನಡೆಯುವ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ.

-ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News