×
Ad

ಕಾರ್ಕಳ | ದಾರುಲ್ ಕಝಾ, ದಾರುಲ್ ಇಫ್ತಾ ಉದ್ಘಾಟನೆ

Update: 2025-12-15 11:07 IST

ಕಾರ್ಕಳ: ಇಲ್ಲಿನ ಕರಿಯಕಲ್ಲು ಮದ್ರಸ ಅಲ್ ಮಆರಿಫ್ ದಲ್ಲಿ ನೂತನ ದಾರುಲ್ ಕಝಾ ಹಾಗೂ ಇಫ್ತಾ (ಇಸ್ಲಾಮಿ ಶರೀಯ ಕೋರ್ಟ್)ವನ್ನು ಬೆಂಗಳೂರಿನ ಇಮಾರತೆ ಶರೀಯ ಖಾಝಿ ಮೌಲಾನಾ ಹಾರೂನ್ ಸಾಹೇಬ್ ರಶಾದಿ ರವಿವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿದ್ದ ಮುಫ್ತಿ ರಿಯಾಝುಲ್ ಹಖ್ ರಶಾದಿ ಮಾತನಾಡಿ, ದಾರುಲ್ ಕಝಾ ಈ ಪರಿಸರದವರಿಗೆ ಒಂದು ದೊಡ್ಡ ಭಾಗ್ಯ ಎಂದು ಬಣ್ಣಿಸಿದರು.

ಪರಸ್ಪರ ದ್ವೇಷಕ್ಕೆ ಅವಕಾಶ ನೀಡಬೇಡಿ. ಎಲ್ಲ ಸಮಸ್ಯೆಗಳನ್ನು ಕುರ್ ಆನ್ ಹಾಗೂ ಪ್ರವಾದಿ ವಚನಗಳ ಮೂಲಕ ಪರಿಹರಿಸಿಕೊಳ್ಳಿ ಎಂದು ಅವರು ಕರೆ ನೀಡಿದರು

ಇನ್ನೋರ್ವ ಮುಖ್ಯ ಅತಿಥಿ ಭಟ್ಕಳ ಜಾಮಿಯಾ ಇಸ್ಲಾಮಿಯಾದ ಹದೀಸ್ ಪ್ರಧಾನ ಭೋದಕ ಮೌಲಾನಾ ಅಬ್ದುಲ್ ರಬ್ ಮಾತನಾಡಿ, ಪ್ರವಾದಿಯವರ ಕಾಲಕ್ಕೆ ಮುಂಚೆ ಜಗತ್ತಿನಲ್ಲಿ ಅಶಾಂತಿ, ಕೋಮು ದ್ವೇಷ ಹಾಗೂ ಪರಸ್ಪರ ಮತ್ಸರ ತಾಂಡವಾಡುತ್ತಿತ್ತು. ನ್ಯಾಯವು ಸಂಪೂರ್ಣ ಮರೀಚಿಕೆಯಾಗಿತ್ತು. ಪ್ರವಾದಿಯರು ನ್ಯಾಯ ಹಾಗೂ ಮಾನವತೆಯನ್ನು ಕಲಿಸಿದರು. ಇಂದು ನಾವು ಅಂತಹ ಉದಾತ್ತ ಮೌಲ್ಯಗಳಿಂದ ವಿಮುಖರಾಗುತ್ತಿದ್ದೇವೆ. ಆದ್ದರಿಂದ ನಾನಾ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ, ಬೆಂಗಳೂರಿನಲ್ಲಿ ಖಾಝಿಯಾಗಿರುವ ಮೌಲಾನಾ ಹಾರೂನ್ ರಶಾದಿ ಮಾತನಾಡಿ, ನಮ್ಮ ಸಮಸ್ಯೆಗಳನ್ನು ಕುರ್ ಆನ್ ಹದೀಸ್ ಗಳ ಮೂಲಕ ಪರಿಹರಿಸುವ ಬದಲು ಕೋರ್ಟ್ ಕಚೇರಿಗಳಿಗೆ ಅಲೆದಾಡುತ್ತಾ ಅಮೂಲ್ಯ ಜೀವನವನ್ನು ಹಾಳು ಮಾಡುತ್ತಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು.

ನಿಕಾಹ್ ಗಿಂತ ಮುಂಚೆ ಕೌನ್ಸೆಲಿಂಗ್ ತೀರಾ ಅಗತ್ಯ ಹಗೂ ನಿಖಾಹ್ ಸಂಧರ್ಭದಲ್ಲಿ ನವ ವಧು-ವರರಿಗೆ ಜವಾಬ್ದಾರಿಗಳ ಬಗ್ಗೆ ತಿಳಿಹೇಳಬೇಕು, ಮದುವೆ ಸಂದರ್ಭದಲ್ಲಿ ದುಂದುವೆಚ್ಚ ಹಾಗೂ ಅಶ್ಲೀಲತೆಯನ್ನು ತೊಡೆದು ಹಾಕಿ ಎಂದು ಕರೆ ನೀಡಿದರು.

ಮಂಗಳೂರಿನ ಕುದ್ರೋಳಿ ಜಾಮಿಯಾ ಮಸೀದಿಯ ಖಾಝಿ ಮುಫ್ತಿ ಮುತಹ್ಹಿರ್ ಹುಸೇನ್ ಮಾತನಾಡಿ ಖಾಝಿಗೆ ಬಹು ದೊಡ್ಡ ಜವಾಬ್ದಾರಿಗಳು ಇರುತ್ತವೆ. ಅದನ್ನು ಪಾಲಿಸಿದಲ್ಲಿ ಮಾತ್ರ ನಿಜವಾದ ನ್ಯಾಯ ಸಿಗಲಿಕ್ಕೆ ಸಾಧ್ಯ. ಕುರ್ ಆನ್ ಹಾಗೂ ಹದೀಸ್ ಗಳನ್ನು ಉಲ್ಲೇಖಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದಲ್ಲಿ ಖಂಡಿತ ಸಮಾಜದಲ್ಲಿ ಒಂದು ಉತ್ತಮ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸಬಹುದು ಎಂದು ಹೇಳಿದರು.

ಇದೇ ಸಂದರ್ಭ ನೂತನ ದಾರುಲ್ ಕಝಾ ಹಾಗೂ ಇಫ್ತಾ ಖಾಝಿಯಾಗಿ ಮುಫ್ತಿ ಅವ್ಸಾಫ್ ರನ್ನು, ಬೆಂಗಳೂರಿನ ಇಮಾರತೆ ಶರೀಯ ಖಾಝಿ ಮೌಲಾನಾ ಹಾರೂನ್ ಸಾಹೇಬ್ ರಶಾದಿ ನಿಯೋಜಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾರುಲ್ ಉಲೂಮ್ ಅಲ್ ಮಆರಿಫ್ ರಾದ ಪ್ರಾಂಶುಪಾಲ ಮುಫ್ತಿ ಅಬ್ದುಲ್ ರಹ್ಮಾನ್ ಕಾಸಿಮಿ ಮಾತನಾಡಿದರು.

ಭಟ್ಕಳಧ ಜಾಮಿಯಾ ಇಸ್ಲಾಮಿಯಾಧ ಪ್ರಧಾನ ಹದೀಸ್ ಬೋಧಕ ಮೌಲಾನಾ ಅಬ್ದುಲ್ ರಬ್ ದುಆಗೈದರು.

ವೇದಿಕೆಯಲ್ಲಿ ಮುಫ್ತಿ, ಖಾಝಿ ಮುತಹ್ಹಿರ್ ಹುಸೇನ್ ಸಾಬ್, ಮುಫ್ತಿ ರಿಯಾಝುಲ್ ಹಕ್ ರಶಾದಿ, ಮುಫ್ತಿ ಅಬ್ದುಲ್ ರಹ್ಮಾನ್ ಸಾಬ್ ಅಲ್ ಕಾಸಿಮಿ, ಮೌಲಾನಾ ಝಹೀರ್ ಅಹ್ಮದ್ ಅಲ್ ಕಾಸಿಮಿ, ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿ, ಮೌಲಾನಾ, ಖಾಝಿ ಹಾರೂನ್ ಸಾಹೇಬ್ ರಶಾದಿ, ಬೆಂಗಳೂರು, ಕಾರ್ಕಳ ಮುಸ್ಲಿಮ್ ಜಮಾಅತ್ ಮಾಜಿ ಅಧ್ಯಕ್ಷ ಅಶ್ಫಾಕ್ ಅಹ್ಮದ್, ಸಿಟಿ ನರ್ಸಿಂಗ್ ಹೋಮ್ ನ ಇಮ್ರಾನ್ ಸಾಹೇಬ್, ಖಾಝಿ ಲುತ್ಫುಲ್ಲಾ ಸಾಹೇಬ್ ಕಾಪು, ಅಬ್ದುಲ್ ಖಾದರ್ ಸಾಹೇಬ್, ಮಂಗಳೂರು, ಇಸ್ಹಾಕ್ ಸಾಹೇಬ್ ಪುಲ್ಕೇರಿ ಮತ್ತಿತರರು ಉಪಸ್ಥಿತರಿದ್ದರು.

ಮುಹಮ್ಮದ್ ವಸೀಮ್ ಕಿರಾಅತ್ ಪಠಿಸಿದರು. ಮುಫ್ತಿ ಅವ್ಸಾಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಫ್ತಿ ಇಮ್ದಾದುಲ್ಲಾ ಅಲ್ ಕಾಸಿಮಿ ಕಾರ್ಯಕ್ರಮ ನಿರೂಪಿಸಿದರು, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News