ಮೌನವಾದ ಚಂಪಾ ಎಂಬ ಬಂಡಾಯದ ಧ್ವನಿ

Update: 2022-01-16 19:30 GMT

ಧಾರವಾಡದಲ್ಲಿ ಪ್ರಗತಿಪರ ಸಂಘಟನೆಗಳ ಯಾವುದೇ ಪ್ರತಿಭಟನೆ ಇರಲಿ ಚಂಪಾ ಇಲ್ಲದೇ ನಡೆಯುತ್ತಿರಲಿಲ್ಲ. ಪ್ರತಿಭಟನೆಯ ಬ್ಯಾನರ್ ಅನ್ನು ಚಂಪಾ ಸಿದ್ಧಪಡಿಸಿಕೊಂಡು ತಮ್ಮ ಸ್ಕೂಟರಿನಲ್ಲಿ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ವಿದ್ಯಾವರ್ಧಕ ಸಂಘದ ಸಭಾಂಗಣಕ್ಕೆ ಹಾಜರಾಗುತ್ತಿದ್ದರು. ಚಂಪಾ ಬೆಂಗಳೂರಿಗೆ ಹೋದ ನಂತರ ಧಾರವಾಡದಲ್ಲಿ ಪ್ರತಿಭಟನೆಗಳಿಗೆ ಮೊದಲಿನ ಕಾವು ಇರುತ್ತಿರಲಿಲ್ಲ.



ಚಂಪಾ ಎಂದೇ ಹೆಸರಾದ ಚಂದ್ರಶೇಖರ ಪಾಟೀಲರು ನಿರ್ಗಮಿಸಿ ಒಂದು ವಾರವಾಯಿತು.ಅವರ ಜೊತೆಗಿನ ನನ್ನ ಒಡನಾಟ ಎಪ್ಪತ್ತರ ದಶಕದ ಆರಂಭದ ದಿನಗಳಿಂದ ಶುರುವಾಗಿ ಅವರು ಕೊನೆಯುಸಿರೆಳೆಯುವವರೆಗೂ ಇತ್ತು. ಆದರೆ ಕೊನೆಯ ಎರಡು ವರ್ಷ ಅವರು ತೀವ್ರ ಅಸ್ವಸ್ಥರಾದುದರಿಂದ ಭೇಟಿಯಾಗಲು ಆಗಿರಲಿಲ್ಲ.ಸೈದ್ಧಾಂತಿಕ ಭಿನ್ನಾಭಿಪ್ರಾಯ ಇಟ್ಟುಕೊಂಡೂ ಸ್ನೇಹವನ್ನು ಹೇಗೆ ಸಂಬಾಳಿಸಬೇಕೆಂಬುದು ನಾನು ಚಂಪಾರಿಂದ ಕಲಿತ ಪಾಠ.

ನಾನು ‘ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸಕ್ಕೆ ಸೇರಿ ಹುಬ್ಬಳ್ಳಿಗೆ ಬರುವವರೆಗೆ ಚಂಪಾ ಅವರ ಹೆಸರನ್ನು ಮಾತ್ರ ಕೇಳಿದ್ದೆ. ಭೇಟಿಯಾಗಿರಲಿಲ್ಲ. ನಾನು ಅವರ ವಿದ್ಯಾರ್ಥಿಯೂ ಅಲ್ಲ. ಹುಬ್ಬಳ್ಳಿಗೆ ಬಂದ ನಂತರ ಚಂಪಾ ಅವರನ್ನು ಕಾಣಲು ಅವರ ಮನೆಗೆ ನಾನು ಮತ್ತು ಗೆಳೆಯ ನಾಶೀಮಠ ಧಾರವಾಡಕ್ಕೆ ಹೋದೆವು. ಬೆಳಗಾವಿ ರಸ್ತೆಯಲ್ಲಿದ್ದ ಅವರ ಮನೆಯನ್ನು ಹುಡುಕುವುದು ಕಷ್ಟವಾಗಲಿಲ್ಲ. ನಾವು ಹೋದ ದಿನ ಯಾವುದೋ ಹೆಣ್ಣು ಮಗಳು ಕುಡಿಯಲು ನೀರು ಕೇಳಲು ಬಂದಳು. ನೀರು ಕೊಡಲು ಚಂಪಾ ಮನೆಯವರಿಗೆ ಹೇಳಿದರು. ಈಮಧ್ಯೆ ನೀರು ಕುಡಿಯಲು ಬಂದ ತರಕಾರಿ ಮಾರುವ ಹೆಣ್ಣು ಮಗಳು ಸುಮ್ಮನಿರದೇ ‘ಇದು ಲಿಂಗಾಯತರ ಮನಿಯೇನ್ರಿ’ ಎಂದು ಕೇಳಿದಳು. ಆಗ ತಕ್ಷಣ ಚಂಪಾ ‘ಇದು ಹೊಲೆಯರ ಮನೆ’ ಎಂದು ಬಿಟ್ಟರು. ಆಕೆ ನೀರಿನ ಲೋಟ ಅಲ್ಲೇ ಇಟ್ಟು ಹೋದಳು. ಚಂಪಾ ನಮ್ಮತ್ತ ತಿರುಗಿ ‘‘ಈ ದೇಶದಲ್ಲಿ ಜಾತಿ ಹ್ಯಾಂಗೈತಿ ನೋಡ್ರಿ’’ ಎಂದರು.

ಆ ನಂತರ ಚಂಪಾ ಹೆಚ್ಚಾಗಿ ಸಿಗುತ್ತಿದ್ದುದು ಸೋಷಲಿಸ್ಟ್ ರಾಚಪ್ಪ ಹಡಪದ ಅವರ ಸಮತಾ ಹೇರ್ ಕಟಿಂಗ್ ಸಲೂನ್‌ನಲ್ಲಿ. ರಾಚಪ್ಪನ ಸಲೂನ್ ಧಾರವಾಡದ ಸಮಾಜವಾದಿ ಪಕ್ಷದ ಕಚೇರಿಯಂತಿತ್ತು. ಅಲ್ಲಿ ಜಾರ್ಜ್ ಫೆರ್ನಾಂಡಿಸ್, ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್, ಎಂ.ಡಿ.ನಂಜುಂಡಸ್ವಾಮಿ, ಕೆ.ರಾಮದಾಸ್ ಮುಂತಾದ ಸೋಷಲಿಸ್ಟ್ ಒಲುವಿನ ಲೇಖಕರು ಆಗಾಗ ಬರುತ್ತಿದ್ದರು. ರಾಚಪ್ಪನೂ ಸಮಾಜವಾದಿ ಸಿದ್ಧಾಂತ ಮತ್ತು ಚಳವಳಿಯ ಬಗ್ಗೆ ಸಾಕಷ್ಟು ಓದಿಕೊಂಡಿದ್ದರು. ಈ ಸಲೂನ್ ಒಂದು ರೀತಿ ಧಾರವಾಡದ ಎಲ್ಲ ಎಡಪಂಥೀಯರ ಸಂಗಮ ತಾಣವಾಗಿತ್ತು.

ನಾನು ರಂಜಾನ್ ದರ್ಗಾ, ಸಿದ್ದನಗೌಡ ಪಾಟೀಲ ಮೊದಲಾದವರು ಬಿಜಾಪುರದಲ್ಲೇ ಮಾರ್ಕ್ಸ್‌ವಾದದ ದೀಕ್ಷೆ ಪಡೆದು ಧಾರವಾಡಕ್ಕೆ ಬಂದಿದ್ದೆವು. ಲೋಹಿಯಾವಾದಿಗಳು ಮತ್ತು ನಮ್ಮ ನಡುವೆ ಸಹಜವಾದ ಭಿನ್ನಾಭಿಪ್ರಾಯ ಇತ್ತು. ಲೋಹಿಯಾರ ಕಾಂಗ್ರೆಸ್ ವಿರೋಧಿ ರಾಜಕೀಯ ಕೋಮುವಾದಿ ಶಕ್ತಿಗಳನ್ನು ಬೆಳೆಸುತ್ತದೆ ಎಂದು ಆಗಲೇ ನಮ್ಮ ತಕರಾರು ಇತ್ತು. 1976-77ರಲ್ಲಿ ಜೆಪಿ ಚಳವಳಿಯ ಅಬ್ಬರ. ಬಲಪಂಥೀಯ ಫ್ಯಾಶಿಸ್ಟ್ ಶಕ್ತಿಗಳನ್ನು ಬೆಳೆಸುವ ಜೆಪಿ ಚಳವಳಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ವಿರೋಧಿಸಿತ್ತು. ಆ ಪಕ್ಷದ ಜೊತೆಗೆ ಗುರುತಿಸಿಕೊಂಡ ನಾವೂ ಜೆಪಿ ಚಳವಳಿಯನ್ನು ವಿರೋಧಿಸಿದೆವು. ಚಂಪಾ ಧಾರವಾಡದಲ್ಲಿ ಜೆಪಿ ಚಳವಳಿಯ ಸಾರಥ್ಯ ವಹಿಸಿದ್ದರು. ಜೆಪಿ ಧಾರವಾಡಕ್ಕೆ ಬಂದಾಗ ನಾವು ಕಪ್ಪು ಬಾವುಟ ಪ್ರದರ್ಶನ ಮಾಡಿದೆವು. ನಾವು ಊಹಿಸಿದ ಅಪಾಯ ಇಂದು ನಿಜವಾಗಿದೆ. ಮನುವಾದಿ, ಫ್ಯಾಶಿಸ್ಟ್ ಶಕ್ತಿಗಳು ಪ್ರಭುತ್ವದ ಸೂತ್ರ ಹಿಡಿದು ಭಾರತವೆಂಬ ಸರ್ವ ಜನಾಂಗದ ಶಾಂತಿಯ ತೋಟವನ್ನು ಹೇಗೆ ನಾಶ ಮಾಡುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ನಂತರ ಚಂಪಾ ಅವರು ಜೆಪಿ ಚಳವಳಿಯನ್ನು ಬೆಂಬಲಿಸಿದ ತಪ್ಪನ್ನು ಖಾಸಗಿ ಮಾತುಕತೆಯಲ್ಲಿ ಒಪ್ಪಿಕೊಂಡರು.

ಚಂಪಾ ಅವರೊಂದಿಗಿನ ನಲವತ್ತೈದು ವರ್ಷಗಳ ಸ್ನೇಹದಲ್ಲಿ ಅನೇಕ ಸಲ ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಬರುತ್ತಿದ್ದವು. ಆದರೂ ನಮ್ಮನ್ನು ಒಂದಾಗಿ ಬೆಸೆದದ್ದು ಸಂಘ ಪರಿವಾರದ ಕೋಮುವಾದವನ್ನು ವಿರೋಧಿಸುವ ಬದ್ಧತೆ. ಚಂಪಾ ಕೂಡ ಎಂದೂ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಹೋರಾಟದಲ್ಲಿ ರಾಜಿ ಮಾಡಿಕೊಂಡವರಲ್ಲ.ಇದರೊಂದಿಗೆ ಪುರೋಹಿತ ಶಾಹಿ ವಿರೋಧಿ ಹೋರಾಟ, ಮೂಢ ನಂಬಿಕೆ ಕಂದಾಚಾರಗಳ ವಿರುದ್ಧ ಹೋರಾಟ ನಮ್ಮನ್ನು ಒಂದಾಗಿಸಿತ್ತು. ನಮ್ಮ ಮುಖ್ಯ ಶತ್ರು ಕೋಮುವಾದ ಮತ್ತು ಮನುವಾದ ಆಗಿರುವುದರಿಂದ ಏನೇ ಭಿನ್ನಾಭಿಪ್ರಾಯ ಇರಲಿ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೆವು.
ಪಾಟೀಲರು ಲಿಂಗಾಯತ ಜಂಗಮ ಮನೆತನದಿಂದ ಬಂದಿದ್ದರೂ ಜಾತಿಯೊಂದಿಗೆ ಅವರು ಎಂದೂ ಗುರುತಿಸಿಕೊಳ್ಳುತ್ತಿರಲಿಲ್ಲ. ಹುಬ್ಬಳ್ಳಿಯ ಆ ಕಾಲದ ಪ್ರಭಾವಿ ಮಠಾಧೀಶ ಮೂರು ಸಾವಿರ ಮಠದ ಜಗದ್ಗುರುವನ್ನು ತ್ರಿಥೌಜಂಡೇಶ್ವರ ಎಂದು ಲೇವಡಿ ಮಾಡುತ್ತಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿ ನಡೆದಾಗ ಚಂಪಾ ಪಂಚಾಚಾರ್ಯರ ಪೀಠಕ್ಕೆ ಸೇರಿದ್ದರೂ ತಾನು ಬಸವಣ್ಣನವರ ಪಾರ್ಟಿ ಎಂದು ಬಹಿರಂಗವಾಗಿ ಹೇಳಿದರು.

ನಂಬಿದ ತತ್ವ, ಸಿದ್ಧಾಂತದ ಪ್ರಶ್ನೆಯಲ್ಲಿ ಚಂಪಾ ಎಂದಿಗೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಇದಕ್ಕೆ ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ಉದಾಹರಣೆ. ಕಸಾಪ ಅಧ್ಯಕ್ಷರಾಗಿದ್ದ ಚಂಪಾ ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಕವಿ ನಿಸಾರ್ ಅಹ್ಮದ್ ಹೆಸರನ್ನು ಸೂಚಿಸಿ ಆಯ್ಕೆ ಮಾಡಿದಾಗ ತೀವ್ರ ವಿರೋಧ ಬಂತು. ಚಂಪಾ ಮಣಿಯಲಿಲ್ಲ. ಎರಡನೇಯದಾಗಿ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಗೆ ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಮಲೆನಾಡಿನ ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಗಡೆ ಅವರನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ಆರೆಸ್ಸೆಸ್ ಆಕ್ಷೇಪಿಸಿತು. ಯಾವುದೇ ಕಾರಣಕ್ಕೂ ಗೌರಿ ಲಂಕೇಶ್ ಮತ್ತು ವಿಠಲ ಹೆಗ್ಗಡೆ ಅವರಿಗೆ ವೇದಿಕೆ ಕೊಡಲೇಬಾರದೆಂದು ಆಗಿನ ಉಪ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಸಂಘ ಪರಿವಾರ ಒತ್ತಡ ಹೇರಿತು. ಯಡಿಯೂರಪ್ಪ ಚಂಪಾಗೆ ಫೋನ್ ಮಾಡಿ ಅವರಿಬ್ಬರನ್ನು ಕರೆಸಬೇಡಿ ಎಂದು ಒತ್ತಡ ಹೇರಿದರು. ಚಂಪಾ ಇದಕ್ಕೆ ಮಣಿಯಲಿಲ್ಲ. ಇದು ಸಾಹಿತ್ಯ ಪರಿಷತ್ತಿನ ತೀರ್ಮಾನ. ನಿಮ್ಮ ಮಾತು ಕೇಳಿ ನಿಗದಿತ ಕಾರ್ಯಕ್ರಮವನ್ನು ಬದಲಿಸಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಕೊನೆಗೆ ಪೊಲೀಸ್ ಕಾವಲಿನಲ್ಲಿ ವಿಚಾರ ಗೋಷ್ಠಿ ನಡೆಯಿತು. ವೇದಿಕೆಯ ಮೇಲೆ ಪರ, ವಿರೋಧ ಹೊಡೆದಾಟವೂ ನಡೆಯಿತು.

ಧಾರವಾಡದಲ್ಲಿ ಪ್ರಗತಿಪರ ಸಂಘಟನೆಗಳ ಯಾವುದೇ ಪ್ರತಿಭಟನೆ ಇರಲಿ ಚಂಪಾ ಇಲ್ಲದೇ ನಡೆಯುತ್ತಿರಲಿಲ್ಲ. ಪ್ರತಿಭಟನೆಯ ಬ್ಯಾನರ್ ಅನ್ನು ಚಂಪಾ ಸಿದ್ಧಪಡಿಸಿಕೊಂಡು ತಮ್ಮ ಸ್ಕೂಟರಿನಲ್ಲಿ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ವಿದ್ಯಾವರ್ಧಕ ಸಂಘದ ಸಭಾಂಗಣಕ್ಕೆ ಹಾಜರಾಗುತ್ತಿದ್ದರು. ಚಂಪಾ ಬೆಂಗಳೂರಿಗೆ ಹೋದ ನಂತರ ಧಾರವಾಡದಲ್ಲಿ ಪ್ರತಿಭಟನೆಗಳಿಗೆ ಮೊದಲಿನ ಕಾವು ಇರುತ್ತಿರಲಿಲ್ಲ.
ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಚಂಪಾ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡರು. ಆ ನಂತರ ಬೆಂಗಳೂರು ಸೇರಿದ ಚಂಪಾ ವಾಪಸ್ ಧಾರವಾಡಕ್ಕೆ ಬರಲಿಲ್ಲ.ಆದರೆ ಧಾರವಾಡದ ಕರುಳಬಳ್ಳಿಯ ಪ್ರೀತಿ ಅವರಲ್ಲಿ ನಿತ್ಯ ಹಸಿರಾಗಿತ್ತು. ಬೆಂಗಳೂರಿನಲ್ಲಿ ನೆಲೆಸಿದರೂ ಆಗಾಗ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಊರುಗಳಿಗೆ ಬಂದು ಹೋಗುತ್ತಿದ್ದರು. ಅಧಿಕಾರದಲ್ಲಿರಲಿ, ಇಲ್ಲದಿರಲಿ ಸೈದ್ಧಾಂತಿಕ ನಿಲುವಿನಲ್ಲಿ ಅವರು ರಾಜಿ ಮಾಡಿಕೊಂಡಿರಲಿಲ್ಲ.

ಚಂಪಾ ಅವರು ಗಿರಡ್ಡಿ ಗೋವಿಂದರಾಜ ಮತ್ತು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರೊಂದಿಗೆ ಸೇರಿ ಸಂಕ್ರಮಣ ಸಾಹಿತ್ಯ ಮಾಸಿಕವನ್ನು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ನಡೆಸಿದರು. ತುರ್ತುಸ್ಥಿತಿ ನಂತರ ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಗಿರಡ್ಡಿ ಸಂಕ್ರಮಣದಿಂದ ದೂರವಾದರು. ಆದರೆ ಚಂಪಾ ಏಕಾಂಗಿಯಾಗಿ ನಡೆಸಿದರು. ಚಂದಾ ಹಣ ಮುಗಿದ ತಕ್ಷಣ ಚಂಪಾ ಅವರಿಂದ ಹದಿನೈದು ಪೈಸೆ ಪೋಸ್ಟ್ ಕಾರ್ಡ್ ಬರುತ್ತಿತ್ತು.
ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಚಂಪಾ ಅವರೊಂದಿಗೆ ಸೇರಿದರು. ‘ಯಾಕೆ ಸರ್’ ಎಂದು ಕೇಳಿದಾಗ ‘ಯಡಿಯೂರಪ್ಪ ವಾಪಸ್ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದಾನ್ರಿ. ದೇವರ ಮೇಲೆ ಆಣೆನೂ ಮಾಡ್ಯಾನ್ರಿ’ ಎಂದು ಚಂಪಾ ಹೇಳಿದರು.
ಚಂಪಾ ಅವರು ಇಷ್ಟವಾಗುವುದು ಎಷ್ಟೇ ಭಿನ್ನಾಭಿಪ್ರಾಯ ಇರಲಿ ವೈಯಕ್ತಿಕ ಸ್ನೇಹ ಸಂಬಂಧವನ್ನು ಅವರು ಕೆಡಿಸಿಕೊಳ್ಳುತ್ತಿರಲಿಲ್ಲ. ಕಳೆದ ಐವತ್ತು ವರ್ಷಗಳಲ್ಲಿ ಅನೇಕ ಬಾರಿ ಅವರೊಂದಿಗೆ ವೈಚಾರಿಕ ಸಂಘರ್ಷ ನಡೆದಿದೆ.ವಿಶೇಷವಾಗಿ ಗೋಕಾಕ್ ವರದಿ ಜಾರಿಗಾಗಿ ನಡೆದ ಚಳವಳಿಯ ಸಂದರ್ಭದಲ್ಲಿ ಚಂಪಾ ಸೇರಿದಂತೆ ಬಂಡಾಯ ಸಾಹಿತ್ಯ ಸಂಘಟನೆಯ ನಿಲುವು ಗೋಕಾಕ್ ವರದಿಯ ಪರವಾಗಿತ್ತು. ಆದರೆ ಆಗ ಕಮ್ಯುನಿಸ್ಟ್ ಪಕ್ಷದ ನಿಲುವು ಭಿನ್ನವಾಗಿತ್ತು.

‘‘ಕನ್ನಡ ಮಾಧ್ಯಮದ ಹೆಸರಿನಲ್ಲಿ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷೆಗಳ ಮೇಲೆ ಸವಾರಿ ಬೇಡ ಎಂಬುದು ಎರಡೂ ಕಮ್ಯುನಿಸ್ಟ್ ಪಕ್ಷಗಳ ನಿಲುವಾಗಿತ್ತು. ನಾವು ಅಂದರೆ ಸಿದ್ಧನಗೌಡ ಪಾಟೀಲ ಮೊದಲಾದವರು ಸಹಜವಾಗಿ ಕಮ್ಯುನಿಸ್ಟ್ ಪಕ್ಷದ ನಿಲುವಿನ ಪರವಾಗಿ ನಿಂತೆವು. ಧಾರವಾಡದಲ್ಲಿ ನಡೆದ ಬಂಡಾಯ ಸಾಹಿತ್ಯ ಸಂಘಟನೆಯ ಸಭೆಯಲ್ಲಿ ತೀವ್ರ ವಾಗ್ವಾದಗಳು ನಡೆದು ನಾವು ಸಭ್ಯಾತ್ಯಾಗ ಮಾಡಿ ಹೊರಗೆ ಬಂದೆವು. ಇದು ಪತ್ರಿಕೆಗಳಲ್ಲೂ ದೊಡ್ಡ ಸುದ್ದಿಯಾಯಿತು. ಆದರೂ ಚಂಪಾ ಮತ್ತು ನಮ್ಮ ನಡುವಿನ ವೈಯಕ್ತಿಕ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗಲಿಲ್ಲ. ಚಂಪಾ ನಮ್ಮ ಮೇಲೆ ಎಂದೂ ವೈಯಕ್ತಿಕ ದಾಳಿಗೆ ಇಳಿಯಲಿಲ್ಲ. ನಾವೂ ಅವರ ಬಗ್ಗೆ ಅದೇ ರೀತಿ ಗೌರವವನ್ನು ಹೊಂದಿದ್ದೆವು.

ಕವಿ ಬೇಂದ್ರೆಯವರ ಜೊತೆಗಿನ ಚಂಪಾ ಜಗಳವೂ ಅಷ್ಟೇ ಆರೋಗ್ಯಕರವಾಗಿತ್ತು. ಬೇಂದ್ರೆಯವರಿಗೆ ಅವರ ನಾಲ್ಕು ತಂತಿ ಕವನ ಸಂಕಲನಕ್ಕೆ ಜ್ಞಾನ ಪೀಠ ಪ್ರಶಸ್ತಿ ಬಂದಾಗ ಅದನ್ನು ಬೇಂದ್ರೆಯವರು ಒಡಿಶಾ ಸಾಹಿತಿ ಜೊತೆಗೆ ಹಂಚಿಕೊಳ್ಳಬೇಕಾಗಿ ಅಂದರೆ ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಗಳನ್ನು ಇಬ್ಬರಿಗೂ ತಲಾ ಐವತ್ತು ಸಾವಿರದಂತೆ ಹಂಚಲಾಯಿತು. ಇದನ್ನು ಚಂಪಾ ಲೇವಡಿ ಮಾಡಿ ಒಂದು ತಂತಿಗೆ ಹನ್ನೆರಡುವರೆ ಸಾವಿರ ಎಂದು ಬರೆದರು. ಇದನ್ನು ಓದಿದ ಬೇಂದ್ರೆ ಅವರು ಒಂದು ದಿನ ಧಾರವಾಡದ ವಿಶ್ವವಿದ್ಯಾನಿಲಯಕ್ಕೆ ಹೋಗುವ ದಾರಿಯಲ್ಲಿ ಸ್ಕೂಟರ್‌ನಲ್ಲಿ ಹೊರಟಿದ್ದ ಚಂಪಾ ಅವರನ್ನು ತಡೆದು ನಿಲ್ಲಿಸಿ ‘‘ಏ ಗೌಡಾ ಹಂಗ್ಯಾಕ ಬರದಿಯೋ’’ ಎಂದು ಜಗಳಕ್ಕೆ ನಿಂತರು. ಚಂಪಾ ಕೂಡ ‘‘ನನಗೆ ಗೌಡಾ ಅಂದರೆ ನಿಮಗೆ ಬ್ರಾಹ್ಮಣ ಅಂತೀನಿ’’ ಎಂದು ತಿರುಗೇಟು ನೀಡಿದರು. ಆದರೆ ಈ ಜಗಳದ ನಂತರವೂ ಬೇಂದ್ರೆ, ಚಂಪಾ ಸ್ನೇಹ ಅಬಾಧಿತವಾಗಿತ್ತು. ಬೇಂದ್ರೆ ಕನ್ನಡದ ಅತ್ಯಂತ ಶ್ರೇಷ್ಠ ಕವಿ ಎಂದು ಚಂಪಾ ಸಾಹಿತ್ಯ ಗೋಷ್ಠಿಗಳಲ್ಲಿ ಹೇಳಿದರು. ನಮ್ಮ ಕಾಲದಲ್ಲಿ ಜಗಳದಲ್ಲಿ ದ್ವೇಷ ಇರಲಿಲ್ಲ. ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಬಂದರೂ ಹಗೆತನ ಕಾಣಿಸಿಕೊಳ್ಳುತ್ತಿರಲಿಲ್ಲ.
ಸಹಬಾಳ್ವೆಯ ಬಹುತ್ವ ಭಾರತ ಅಪಾಯದಲ್ಲಿರುವಾಗ ತೇಜಸ್ವಿ, ಲಂಕೇಶ್, ಅನಂತಮೂರ್ತಿ, ಕಾರ್ನಾಡರ ಬೆನ್ನ ಹಿಂದೆ ಚಂಪಾ ಕೂಡ ನಿರ್ಗಮಿಸಿದ್ದಾರೆ. ಭಿನ್ನಾಭಿಪ್ರಾಯ ಇಟ್ಟುಕೊಂಡು ಹೇಗೆ ಬದುಕಬೇಕೆಂಬುದಕ್ಕೆ ಒಂದು ಮಾದರಿಯಾಗಿ ಚಂಪಾ ನಿತ್ಯ ನಮ್ಮೆಂದಿಗೆ ಇರುತ್ತಾರೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News