×
Ad

ಉತ್ತರಾಖಂಡ ಸಚಿವ ವಜಾ, ಬಿಜೆಪಿ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆ

Update: 2022-01-17 07:18 IST
ಹರಕ್ ಸಿಂಗ್ ರಾವತ್

ಡೆಹ್ರಾಡೂನ್: ಉತ್ತರಾಖಂಡ ಸಚಿವ ಹರಕ್ ಸಿಂಗ್ ರಾವತ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಿ, ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ.

ರಾವತ್ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಶಹಬಾದ್ ಶಮ್ಸ್ ಪಿಟಿಐಗೆ ತಿಳಿಸಿದ್ದಾರೆ. ಪಕ್ಷವು ಎಂದಿಗೂ ಅಶಿಸ್ತನ್ನು ಸಹಿಸುವುದಿಲ್ಲ ಮತ್ತು ಯಾವುದೇ ಬಗೆಯ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ರವಾನಿಸಲಾಗುತ್ತಿದೆ ಎಂದು ಶಮ್ಸ್ ಹೇಳಿದರು.

ರಾಜ್ಯ ವಿಧಾನಸಭೆಯಲ್ಲಿ ಕೊತದ್ವಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಾವತ್, ತಮ್ಮ ಸೊಸೆ ಅನುಕೃತಿ ಗೌಸಿಯಾನ್‌ಗೆ ಲಾನ್ಸ್‌ ಡೌನ್ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು ಹಾಗೂ ತಮ್ಮ ಕ್ಷೇತ್ರವನ್ನೂ ಬದಲಿಸುವಂತೆ ಕೋರಿದ್ದರು. ಬಿಜೆಪಿ ನಾಯಕತ್ವದ ಬಗ್ಗೆ ರಾವತ್ ಅಸಮಾಧಾನ ಹೊಂದಿದ್ದರು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಇವರು ಕಾಂಗ್ರೆಸ್ ಪಕ್ಷಕ್ಕೆ ಮರಳುವ ಸಂಬಂಧ ಕಾಂಗ್ರೆಸ್ ಮುಖಂಡರ ಜತೆ ಸಂಪರ್ಕದಲ್ಲಿದ್ದರು ಎಂದೂ ಬಿಜೆಪಿ ನಾಯಕರು ಆಪಾದಿಸಿದ್ದಾರೆ. ಈ ಕಾರಣದಿಂದ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಹರಿದ್ವಾರದಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದ ರಾವತ್, ತಮ್ಮ ಬೇಡಿಕೆ ಈಡೇರದಿದ್ದರೆ ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು.

ಫೆಬ್ರುವರಿ 14ರಂದು ಉತ್ತರಾಖಂಡ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News