ಕಳ್ಳತನ ಒಪ್ಪಿಕೊಳ್ಳುವಂತೆ ಪೊಲೀಸರಿಂದ ಹಿಂಸೆ ಆರೋಪ: ಭಿನ್ನಚೇತನ ವ್ಯಕ್ತಿ ಸಾವು

Update: 2022-01-17 13:12 GMT

ಚೆನ್ನೈ: ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಪೊಲೀಸರು ಜನವರಿ 8ರಂದು ಅಲ್ಲಿನ ಆದಿದ್ರಾವಿಡರ್ ಸಮುದಾಯಕ್ಕೆ ಸೇರಿದ ಭಿನ್ನಚೇತನ ವ್ಯಕ್ತಿ ಪ್ರಭಾಕರ್ ಮತ್ತಾತನ ಪತ್ನಿ ಅಂಶುಲಾಳನ್ನು ಚಿನ್ನಾಭರಣ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರೆ, ನಾಲ್ಕು ದಿನಗಳ ನಂತರ ಜನವರಿ 12ರಂದು ಪ್ರಭಾಕರ್ ಮೃತಪಟ್ಟಿದ್ದು ಕಸ್ಟಡಿಯಲ್ಲಿ ಪೊಲೀಸರು ನೀಡಿದ ಹಿಂಸೆಯೇ ಇದಕ್ಕೆ ಕಾರಣವೆಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಮೂವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಮೃತ ವ್ಯಕ್ತಿಯ ಕುಟುಂಬ ಸದಸ್ಯರ ಪ್ರಕಾರ ಜನವರಿ 8ರಂದು ಪ್ರಭಾಕರ್ ಮನೆಗೆ ಆಗಮಿಸಿದ್ದ ಪೊಲೀಸರು ಆತ ಹಾಗೂ ಆತನ ಪತ್ನಿ ಅಂಶುಲಾ ಅವರನ್ನು ನಿಂದಿಸಿ ಮನೆಯಿಂದ ಹೊರಗೆಳೆದು ಹಲ್ಲೆಗೈದಿದ್ದರು. ಪೊಲೀಸರು ಅಂಶುಲಾ ಕೂದಲನ್ನೆಳೆದು ಹೊರಗೆ ತಂದಿದ್ದರು ಎಂದು ದೂರಲಾಗಿದೆ. ಬೊಬ್ಬೆ ಕೇಳಿ ನೆರೆಹೊರೆಯವರು ಓಡಿ ಬಂದಿದ್ದರೂ, ಎಲ್ಲರನ್ನೂ ಗದರಿದ್ದ ಪೊಲೀಸರು  ನೀವು ಸುಮ್ಮನಿರದೇ ಇದ್ದರೆ ಇದಕ್ಕಿಂತಲೂ ಕೆಟ್ಟದ್ದಾಗಿ ವರ್ತಿಸುತ್ತೇವೆ ಎಂದಿದ್ದರು ಎಂದು ದೂರಲಾಗಿದೆ.

ಪೊಲೀಸರು ಬಂಧಿಸಿದ ನಂತರ ಪ್ರಭಾಕರ್ ಎಲ್ಲಿದ್ದಾರೆಂಬ ಮಾಹಿತಿ ಕುಟುಂಬಕ್ಕಿರಲಿಲ್ಲ. ಅಂಶುಲಾಳನ್ನು ಸೇಲಂನಲ್ಲಿನ ಮಹಿಳೆಯರ ಕಾರಾಗೃಹದಲ್ಲಿರಿಸಲಾಗಿತ್ತು ಎಂಬ ಮಾಹಿತಿಯಿತ್ತು. ಪ್ರಭಾಕರ್ ಜನವರಿ 11ರಂದು ನಮಕ್ಕಲ್ ಉಪಕಾರಾಗೃಹದಲ್ಲಿದ್ದಾನೆಂದು ಮಾಹಿತಿಯಿತ್ತು. ಅಲ್ಲಿ ಆತನ ಸ್ಥಿತಿ ಬಿಗಡಾಯಿಸಿದಾಗ ಸೇಲಂ ಆಸ್ಪತ್ರೆಗೆ ಸೇರಿಸಲಾಗಿತ್ತು.

ಚಿನ್ನಾಭರಣ ಕಳ್ಳತನವನ್ನು ಒಪ್ಪಿಕೊಳ್ಳುವಂತೆ ಹೇಳಿ ಪ್ರಭಾಕರ್ ಗೆ ಹಿಂಸಿಸಲಾಗಿತ್ತು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News