ಕೋವಿಡ್; ಪರ್ಯಾಯ ಮೆರವಣಿಗೆಯ ಎಲ್ಲಾ ಟ್ಯಾಬ್ಲೋ ರದ್ದು: ಡಿಸಿ ನೇತೃತ್ವದ ಸಭೆ ತೀರ್ಮಾನ

Update: 2022-01-17 15:19 GMT

ಉಡುಪಿ, ಜ.17: ಉಡುಪಿ ಪರ್ಯಾಯೋತ್ಸವವನ್ನು ಸರಳವಾಗಿ ನಡೆಸುವ ಬಗ್ಗೆ ಶಾಸಕ ರಘುಪತಿ ಭಟ್ ನೇತೃತ್ವದ ಪರ್ಯಾಯೋತ್ಸವ ಸಮಿತಿಯೊಂದಿಗೆ ಜಿಲ್ಲಾಧಿಕಾರಿಯವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಸಭೆಯಲ್ಲಿ ಪರ್ಯಾಯ ಮೆರವಣಿಗೆಯಲ್ಲಿ ಯಾವುದೇ ಟ್ಯಾಬ್ಲೋಗಳಿಗೂ ಅವಕಾಶ ನೀಡದಿರಲು ನಿರ್ಧರಿಸಲಾಯಿತು.

ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಪರ್ಯಾಯೋತ್ಸವ ವನ್ನು ಅತ್ಯಂತ ಸರಳವಾಗಿ ಹಾಗೂ ಪರ್ಯಾಯ ಪೀಠವೇರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರ ಆಶಯದಂತೆ ಕೇವಲ ಸಂಪ್ರದಾಯಕ್ಕೆ ಒತ್ತು ಕೊಟ್ಟು ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ಪರ್ಯಾಯಕ್ಕೆ ಸಜ್ಜುಗೊಂಡ ಎಲ್ಲ 40 ಜಾನಪದ ಟ್ಯಾಬ್ಲೊಗಳನ್ನು ರದ್ದು ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.

ಎಂದಿನಂತೆ ರಾತ್ರಿ 10ಗಂಟೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ತಿಳಿಸಿದ್ದು, ಜನರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ. 10 ಗಂಟೆಯ ಮೇಲೆ ಉಡುಪಿ ರಸ್ತೆಗಳಲ್ಲಿ ಯಾರಿಗೂ ಸಂಚರಿಸಲು ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಬೆಳಗ್ಗೆ ಮೆರವಣಿಗೆಯಲ್ಲಿ ಸೀಮಿತ ಸಂಖ್ಯೆಯ ಜನರು ಮಾತ್ರ ಸಂಚರಿಸಲು ಅವಕಾಶವಿದೆ. ಸಾಂಪ್ರದಾಯಿಕವಾಗಿ ಸ್ವಾಮೀಜಿಯವರನ್ನು ಕರೆತರುವ ಜನರು ಮಾತ್ರ ಭಾಗವಹಿಸಬಹುದಾಗಿದೆ. ಜನರು ಈ ಮೆರವಣಿಗೆಯನ್ನು ಲೈವ್ ಆಗಿ ನೋಡಬಹುದಾಗಿದೆ ಎಂದೂ ರಘುಪತಿ ಭಟ್ ತಿಳಿಸಿದರು.

ಪರ್ಯಾಯವನ್ನು ಸಾಂಪ್ರದಾಯಿಕವಾಗಿ ನಡೆಸುವುದು ಎಷ್ಟು ಮುಖ್ಯವೋ, ಜನರ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ ಎಂದು ಕೃಷ್ಣಾಪುರ ಮಠ ಸ್ವಾಮೀಜಿ ಅವರು ತಿಳಿಸಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ, ಪೊಲಿಸ್ ವರಿಷ್ಠಾಧಿಕಾರಿಗಳಾದ ಎನ್ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಪರ್ಯಾಯೋತ್ಸವ ಮಿತಿ ಸದಸ್ಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News