ಸಂಕ್ರಾಂತಿಯ ಹೆಸರಿನಲ್ಲಿ ನಿರುದ್ಯೋಗದ ಉಡುಗೊರೆ?

Update: 2022-01-17 19:30 GMT

ರಾಜ್ಯದ ವಿವಿಧ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೆರಿಟ್ ಆಧಾರದಲ್ಲಿ ನೇಮಕಗೊಂಡು ಬೋಧನಾ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 14,500 ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿಯ ಗಿಫ್ಟ್ ಎಂಬಂತೆ ಬಿಂಬಿತವಾಗಿ ವೇತನವನ್ನೇನೋ ರಾಜ್ಯ ಸರಕಾರ ಘೋಷಿಸಿ ಆದೇಶಿಸಿದೆ. ಆದರೆ, ಇದೇ ಆದೇಶದಿಂದ ನೇರವಾಗಿ ಅಂದಾಜು 50 ಶೇಕಡಾ ಅತಿಥಿ ಉಪನ್ಯಾಸಕರು ತಮ್ಮ ಕೆಲಸ ಕಳೆದುಕೊಳ್ಳುವುದು ಬಹುತೇಕ ಖಚಿತಗೊಂಡಿದೆ. ಅರ್ಥಾತ್ ಇದು ರಾಜ್ಯ ಸರಕಾರವು ಸಂಕ್ರಾಂತಿಗೆ ನಿರುದ್ಯೋಗವನ್ನೇ ಗಿಫ್ಟ್ ನೀಡಿದಂತಾಗಿದೆ.

ದಶಕಗಳಿಂದ ಕೇವಲ ರೂ.11,000ದಿಂದ ರೂ.13,000 ಮಾಸಿಕ ವೇತನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ನಾತಕೋತ್ತರ ಪದವಿ, ಎನ್‌ಇಟಿ/ಎಸ್‌ಎಲ್‌ಇಟಿ ಅರ್ಹತೆ, ಎಂಫಿಲ್ ಹಾಗೂ ಪಿಎಚ್‌ಡಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರು, ಉದ್ಯೋಗ ಖಾಯಮಾತಿ, ಸಕ್ರಮಾತಿ, ವೇತನ ಹೆಚ್ಚಳ, ಉದ್ಯೋಗ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಡಿಸೆಂಬರ್ 10ರಿಂದ ರಾಜ್ಯವ್ಯಾಪಿಯಾಗಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ತರಗತಿ ಬಹಿಷ್ಕಾರದಿಂದ ಎಚ್ಚೆತ್ತ ರಾಜ್ಯ ಸರಕಾರ ಸಂಕ್ರಾಂತಿಯ ಗಿಫ್ಟ್ ನೆಪದಲ್ಲಿ ವೇತನ ಹೆಚ್ಚಳ ಮಾಡಿ ಹೊರಡಿಸಿರುವ ಆದೇಶದಿಂದಾಗಿ ಹಲವಾರು ಸಂಕಷ್ಟಗಳು ಎದುರಾಗಿದೆ.
ಡಬಲ್ ಮೊತ್ತದ ವೇತನ ಹೆಚ್ಚಳದ ಆದೇಶವು ಜನಸಾಮಾನ್ಯರಿಗೆ ಮತ್ತು ಮಾಧ್ಯಮಗಳಿಗೆ ಆಶ್ಚರ್ಯವನ್ನು ಉಂಟುಮಾಡಿದ್ದರೂ, ಇಬ್ಬರು ಅತಿಥಿ ಉಪನ್ಯಾಸಕರ ಕಾರ್ಯಭಾರವನ್ನು ಒಬ್ಬರಿಗೇ ನೀಡಿ, ಇಬ್ಬರಿಗೆ ನೀಡಲಾಗುತ್ತಿದ್ದ ವೇತನವನ್ನು ಅತ್ಯಲ್ಪಹೆಚ್ಚಳ ಮಾಡಿ ಒಬ್ಬರಿಗೇ ನೀಡುವ ಆದೇಶದ ಪರಿಣಾಮಗಳು, ಕೇವಲ ಅತ್ಯಲ್ಪಉಪನ್ಯಾಸಕರಿಗೆ ಉಪಕಾರಿಯೆನಿಸಿದರೂ, ಭಾರೀ ಮಟ್ಟದ ನಿರುದ್ಯೋಗ ಸೃಷ್ಟಿ ಮಾಡುವುದು ನಿಸ್ಸಂದೇಹವಾಗಿದ್ದು, ಹಲವಾರು ಅತಿಥಿ ಉಪನ್ಯಾಸಕರ ಭವಿಷ್ಯ ಡೋಲಾಯಮಾನವಾಗಲಿದೆ.
ಅತಿಥಿ ಉಪನ್ಯಾಸಕರಿಗೆ ಈ ಹಿಂದೆ ಇದ್ದ ವಾರದಲ್ಲಿ 8 ಅಥವಾ 10 ಗಂಟೆಗಳ ಅವಧಿಯ ಕಾರ್ಯಭಾರವನ್ನು ಹೊಸ ಆದೇಶದಲ್ಲಿ 15 ಗಂಟೆಗಳಿಗೆ ಏರಿಸಲಾಗಿದೆ. ಇದರಿಂದಾಗಿ ಇಬ್ಬರು ಅತಿಥಿ ಉಪನ್ಯಾಸಕರು ನಿರ್ವಹಿಸುತ್ತಿದ್ದ ಕಾರ್ಯಭಾರವನ್ನು ಒಬ್ಬರೇ ಅತಿಥಿ ಉಪನ್ಯಾಸಕರು ನಿರ್ವಹಿಸಬೇಕಾಗಿದ್ದು, ಮತ್ತೊಬ್ಬರು ಕಾರ್ಯಭಾರವಿಲ್ಲದೆ ಕೆಲಸ ಕಳೆದುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಈಗಾಗಲೇ ಹೊಸ ಶಿಕ್ಷಣ ನೀತಿಯನ್ನು ಆತುರವಾಗಿ ಅಳವಡಿಸಿಕೊಂಡಿರುವ ರಾಜ್ಯ ಸರಕಾರದ ಕ್ರಮದಿಂದಾಗಿ ಹಲವು ಅತಿಥಿ ಉಪನ್ಯಾಸಕರ ಕಾರ್ಯಭಾರ ಕುಂಟಿತಗೊಂಡಿದ್ದು ಹಲವರು ಕೆಲಸವನ್ನೂ ಕಳೆದುಕೊಂಡಿದ್ದರು. ರಾಜ್ಯ ಸರಕಾರದ ಸಂಕ್ರಾತಿಯ ಗಿಫ್ಟ್ ರೂಪದ ಈ ಹೊಸ ಆದೇಶ 50 ಶೇಕಡಾ ಅತಿಥಿ ಉಪನ್ಯಾಸಕರಲ್ಲಿ ಕೆಲಸ ಕಳೆದುಕೊಳ್ಳುವ ಆತಂಕವನ್ನು ತಂದೊಡ್ಡಿದೆ.
ಈ ಮೊದಲು 8 ಅಥವಾ 10 ಗಂಟೆಗಳ ಕಾರ್ಯಭಾರವಿದ್ದಾಗ, ಅತಿಥಿ ಉಪನ್ಯಾಸಕರನ್ನು ದಿನಪೂರ್ತಿ ಕಾಲೇಜಿನ ಬೋಧನೇತರ ಕಾರ್ಯಗಳನ್ನೂ ನಿರ್ವಹಿಸಲು ತೊಡಗಿಸಿಕೊಳ್ಳುತ್ತಿದ್ದ ಹಲವಾರು ಕಾಲೇಜುಗಳು, ಬೋಧನೆ ಹೊರತುಪಡಿಸಿ ಖಾಯಂ ಉಪನ್ಯಾಸಕರಷ್ಟೇ ಕಾರ್ಯವನ್ನು ಯಾವುದೇ ಹೆಚ್ಚಿನ ವೇತನ ನೀಡದೆ ಮಾಡಿಸುತ್ತಿದ್ದವು. ಆದರೆ ಇವುಗಳೆಲ್ಲವನ್ನೂ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು, ಖಾಯಂ ಉಪನ್ಯಾಸಕರಂತೆಯೇ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬಂತೆ ವೇತನ ಹೆಚ್ಚಳಕ್ಕೆ ರಾಜ್ಯ ಸರಕಾರದ ಮುಂದೆ ಬೇಡಿಕೆ ಇರಿಸಿದ್ದರು.
ಇದರ ಹೊರತಾಗಿ ಈ ಹಿಂದೆ ಒಂದೇ ಸೆಮಿಸ್ಟರ್‌ಗೆ ಸೀಮಿತಗೊಂಡು ಅತಿಥಿ ಉಪನ್ಯಾಸಕರನ್ನು ನೇಮಿಸುತ್ತಿದ್ದರೆ, ಹೊಸ ಆದೇಶದಿಂದಾಗಿ ವಾರ್ಷಿಕವಾಗಿ 10 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳುವಂತೆ ಮಾರ್ಪಾಡು ಮಾಡಲಾಗಿದೆ. ವೇತನ ಹೆಚ್ಚಳವು ಸ್ಥಿರವಾಗಿದ್ದು, ಯಾವುದೇ ವಾರ್ಷಿಕ ವೇತನ ಹೆಚ್ಚುವರಿಗೆ ಅವಕಾಶ ನೀಡಲಾಗಿಲ್ಲ. ನಿವೃತ್ತಿ ನಂತರ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನೂ ಅತಿಥಿ ಉಪನ್ಯಾಸಕರಿಗೆ ನೀಡಲಾಗಿಲ್ಲ. ಪಿಎಫ್, ಇಎಸ್‌ಐಗಳಂತಹ ಯಾವುದೇ ಸವಲತ್ತುಗಳನ್ನೂ ನೀಡದೆ, ವಿದ್ಯಾದಾನ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ರಾಜ್ಯ ಸರಕಾರದ ಈ ಕ್ರಮ ಅಮಾನವೀಯ.
ಅಲ್ಲದೆ, ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಯುಜಿಸಿ ನಿಯಮಾವಳಿಯಂತೆ ಎನ್‌ಇಟಿ/ಎಸ್‌ಎಲ್‌ಇಟಿ ಅರ್ಹತೆಯನ್ನು ಕಡ್ಡಾಯವಾಗಿ ಪಡೆಯಲು ಗರಿಷ್ಠ 3 ವರ್ಷಗಳ ಅವಧಿಯ ಅವಕಾಶವನ್ನು ನೀಡಿರುವ ರಾಜ್ಯ ಸರಕಾರದ ಹೊಸ ಆದೇಶ, ಯುಜಿಸಿ ನಿಗದಿಪಡಿಸಿ ಸೂಚಿಸಿದ ಕನಿಷ್ಠ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡದೆ ತಾರತಮ್ಯ ಎಸಗಿದೆ.
ಈ ನಡುವೆ, ಸಂಕ್ರಾಂತಿಯ ಕೊಡುಗೆಯಂತೆ ಬಿಂಬಿಸಿ ಮುಖ್ಯಮಂತ್ರಿಗಳ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಜನವರಿ 15ರಂದು ಪ್ರಕಟಿಸಲಾದ ಸರಕಾರದ ಸಾಧನೆಗಳ ಪೋಸ್ಟರ್‌ಗೆ, ರಾಜ್ಯ ಸರಕಾರದ ಹೊಸ ಆದೇಶವನ್ನು ಒಪ್ಪಿಕೊಳ್ಳದಿರುವ ಹಲವಾರು ಅತಿಥಿ ಉಪನ್ಯಾಸಕರು ತಮ್ಮ ಆಕ್ರೋಶವನ್ನು ಹೊರಹಾಕಿ ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದು, ಈಗಾಗಲೇ ನೇಮಕಗೊಂಡಿರುವ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಯಾವುದೇ ತೊಂದರೆಯಾಗದಂತೆ ಆದೇಶವನ್ನು ಮಾರ್ಪಡಿಸಲು ಮನವಿ ಮಾಡಿರುತ್ತಾರೆ. ಕೆಲಸವನ್ನು ಕಳೆದುಕೊಳ್ಳಲಿರುವ ಅತಿಥಿ ಉಪನ್ಯಾಸಕರಿಗೆ ಬದಲಿ ವ್ಯವಸ್ಥೆಯನ್ನೂ ಕಲ್ಪಿಸದಿರುವ ಸಮಿತಿಯ ನಿರ್ಧಾರವನ್ನು ಒಕ್ಕೊರಲಿನಿಂದ ಟೀಕಿಸಲಾಗಿದೆ ಮತ್ತು ಜನವರಿ 14ನ್ನು ಅತಿಥಿ ಉಪನ್ಯಾಸಕರ ಪಾಲಿನ ಕರಾಳ ದಿನವನ್ನಾಗಿ ಪರಿಗಣಿಸಲಾಗಿದೆ. ಸೂಕ್ತ ನ್ಯಾಯ ಸಿಗುವವರೆಗೆ ಈಗಾಗಲೇ ನಡೆಸಲಾಗುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರಿಸಲಾಗುವುದು ಎಂದು ಈಗಾಗಲೇ ಅತಿಥಿ ಉಪನ್ಯಾಸಕರ ಒಕ್ಕೂಟಗಳು ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಸರಕಾರ ಕೂಡಲೇ ಅತಿಥಿ ಉಪನ್ಯಾಸಕರಿಗೆ ನ್ಯಾಯ ದೊರಕಿಸಲು ಮುಂದಾಗಬೇಕಾಗಿದೆ

Writer - ಶರತ್ ಆಳ್ವ ಕರಿಂಕ, ಸುಳ್ಯ

contributor

Editor - ಶರತ್ ಆಳ್ವ ಕರಿಂಕ, ಸುಳ್ಯ

contributor

Similar News