ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಸಾಮಾಜಿಕ ಸಿದ್ಧಾಂತಕ್ಕೆ ಮಾಡಿದ ರಾಷ್ಟ್ರೀಯ ಅವಮಾನ: ಡಿ.ಆರ್. ರಾಜು

Update: 2022-01-18 05:05 GMT
ಡಿ.ಆರ್. ರಾಜು

ಕಾರ್ಕಳ: ಗಣರಾಜ್ಯೋತ್ಸವ ಪರೇಡಿನಲ್ಲಿ‌ ನಡೆಯುವ ಸ್ತಬ್ಧ ಚಿತ್ರ ಪ್ರದರ್ಶನಕ್ಕಾಗಿ ಕೇರಳ ಸರಕಾರ ಕಳುಹಿಸಿದ ಜಟಾಯುಪ್ಪಾರ ಹಿನ್ನೆಲೆಯುಳ್ಳ ಶ್ರೀ ನಾರಾಯಣ ಗುರು ಪ್ರತಿಕೃತಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ವಿಶ್ವದ ಒಬ್ಬ  ಮಹಾ ಮಾನವತಾವಾದಿ ಹಾಗೂ ಅವರು ಪ್ರತಿಪಾದನೆ ಮಾಡಿಕೊಂಡು ಬಂದ ಸಾಮಾಜಿಕ ಸಿದ್ಧಾಂತಕ್ಕೆ ಮಾಡಿದ ರಾಷ್ಟ್ರೀಯ ಅವಮಾನ ಎಂದು ಸಾಮಾಜಿಕ ಮುಂದಾಳು, ಕಾರ್ಕಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಡಿ .ಆರ್.ರಾಜು ತಿಳಿಸಿದ್ದಾರೆ.

ಬ್ರಹ್ಮ ಶ್ರೀ ನಾರಾಯಣ ಗುರುಗಳು 19ನೇ ಶತಮಾನದ ಕೇರಳದ ಅಮಾನವೀಯ ಜಾತಿಪದ್ಧತಿ, ಶೂದ್ರ ಜನಾಂಗದ ಮಹಿಳೆಯರ ಮೂಲಭೂತವಾದಿ ಆರ್ಥಿಕ ನೀತಿಯೇ ಮೊದಲಾದ ಸಾಮಾಜಿಕ ಶೋಷಣೆಯ ವಿರುದ್ಧ ಹೋರಾಡಿದವರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಪ್ರತಿಪಾದನೆಯ ಬ್ರಹ್ಮ ಶ್ರೀ ನಾರಾಯಣ ಗುರುಗಳು ತನ್ನ ಸಾಮಾಜಿಕ ಕ್ರಾಂತಿಯ ಸಾಧನೆಯ ಗರಡಿಯಲ್ಲಿ  ಆದಿ  ಶಂಕರಾಚಾರ್ಯರ ಅದ್ವೈತ ಸಿದ್ಧಾಂತಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದವರೂ ಆಗಿದ್ದರು. ದೇಶ ಕಂಡ ಅದ್ಭುತ ದಾರ್ಶನಿಕ, ಚಿಂತಕ ಹಾಗೂ ಮಾನವತವಾದಿ ಬ್ರಹ್ಮಶ್ರೀ. ಪ್ರಜ್ಞಾ ಪೂರಿತ ವಿದ್ಯೆ ಹಾಗೂ ಸಾತ್ವಿಕ ಸಂಘಟಿತ ಶಕ್ತಿಯಿಂದ ಸರ್ವತೋಮುಖ ಏಳಿಗೆಯನ್ನು ಸಾಧಿಸಿರಿ ಎಂಬ ತತ್ವ ವಿಚಾರಗಳನ್ನು ನೀಡಿದವರು.

ಅಪಮಾನ ಮತ್ತು ಅವಮಾನಗಳ ದಳ್ಳುರಿಯಲ್ಲಿ ಬೆಂದು, ನಿರಾಶೆ ಎಂಬ ಕಗ್ಗತ್ತಲಿನಲ್ಲಿ ನಲುಗಿ ಹೋದಂತಹ ದಮನಿತರ  ಹಾಗೂ ಶೋಷಿತರ ಪರವಾಗಿ ಹೋರಾಡಿದವರು. ಧಾರ್ಮಿಕ ಸಿದ್ಧಾಂತಗಳು ಸರ್ವರ ಸಮನ್ವಯ ಜೀವನಕ್ಕೆ ಜೀವಾಳ ವಾಗಬೇಕು ಎಂದು ಸಾರಿ, ಆಚರಿಸಿ ತೋರಿದವರು.  ಧಾರ್ಮಿಕ, ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ರಾಂತಿಯ ಪ್ರತೀಕ ಇಂತಹ ಶ್ರೇಷ್ಠ ಮಾನವತವಾದಿಯ ಸ್ತಬ್ಧಚಿತ್ರವನ್ನು ನಿರಾಕರಿಸಿರುವುದು ಖಂಡನಾರ್ಹ. ಸ್ತಬ್ಧ ಚಿತ್ರ ಆಯ್ಕೆ ಸಮಿತಿ ಈ ಪ್ರತಿಕೃತಿಯನ್ನು ಪುರಸ್ಕರಿದ್ದರ ಹೊರತಾಗಿಯೂ ಸರಕಾರ ಈ ಅಪ್ರತಿಮ ಮಾನವತಾವಾದಿಯ ಪ್ರತಿಕೃತಿಯನ್ನು ತಿರಸ್ಕರಿಸಿ ಆದಿ ಶಂಕರಾಚಾರ್ಯರ ಪ್ರತಿಕೃತಿಯ ಸ್ತಬ್ಧ ಚಿತ್ರವನ್ನು ಕಳುಹಿಸುವಂತೆ ಕೇರಳ ಸರಕಾರಕ್ಕೆ ಸೂಚಿಸಿರುವುದು ಖಂಡನೀಯ. ಈ ಪ್ರಕ್ರಿಯೆಯ ಔಚಿತ್ಯದ ಹಿಂದೆ ಮನುವಾದಿ ಸಂಸ್ಕ್ರತಿಯ ಪುರೋಹಿತಶಾಹಿ ವ್ಯವಸ್ಥೆಯ ಕೈವಾಡವಿದೆ. ಇದು  ದೇಶದ   ಪ್ರಜಾತಂತ್ರಕ್ಕೆ ಮಾರಕವಷ್ಟೇ ಅಲ್ಲ ಎಂದ ಅವರು ಶಾಸಕರು, ಮಂತ್ರಿಗಳು, ಹಾಗೂ ಘನವೆತ್ತ ಸರ್ಕಾರ ಈ ಬಗ್ಗೆ ಸೂಕ್ತ ಪ್ರಕ್ರಿಯೆಯನ್ನು ಕೈಗೊಳ್ಳುವ ಮೂಲಕ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News