ಸ್ತಬ್ದ ಚಿತ್ರ ವಿವಾದ: ಬಂಗಾಳ, ತಮಿಳುನಾಡು ಮುಖ್ಯಮಂತ್ರಿಗಳಿಗೆ ರಾಜನಾಥ್ ಸಿಂಗ್ ಪತ್ರ

Update: 2022-01-18 09:23 GMT

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ  ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದು, ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಸ್ತಬ್ದ ಚಿತ್ರ   ಆಯ್ಕೆ ಮಾಡುವ ನಿರ್ಧಾರಗಳನ್ನು ವಿವರವಾದ ಮಾರ್ಗಸೂಚಿಗಳ ಪ್ರಕಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದು, ಇಬ್ಬರೂ  ಭವ್ಯ ಸಮಾರಂಭದಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.

ಎರಡು ರಾಜ್ಯಗಳಿಂದ ಬಂದಿದ್ದ ಸ್ತಬ್ದ ಚಿತ್ರ ಪ್ರಸ್ತಾಪಗಳನ್ನು ತಿರಸ್ಕರಿಸಿದ ನಂತರ ಉಂಟಾದ ರಾಜಕೀಯ ಗದ್ದಲದ ನಡುವೆ ರಕ್ಷಣಾ ಸಚಿವರಿಂದ ಪತ್ರಗಳು ಬಂದಿವೆ.

ಬಂಗಾಳವು ನೇತಾಜಿ ಸುಭಾಸ್ ಚಂದ್ರ ಬೋಸ್ ಹಾಗೂ  ಸ್ವಾತಂತ್ರ್ಯ ಚಳುವಳಿಗೆ ಭಾರತೀಯ ರಾಷ್ಟ್ರೀಯ ಸೇನೆಯ ಕೊಡುಗೆಯನ್ನು ಪ್ರದರ್ಶಿಸಿದ್ದರೆ, ತಮಿಳುನಾಡು ಸಲ್ಲಿಸಿದ ಸ್ತಬ್ದ ಚಿತ್ರವು  ವಿ.ಒ.ಚಿದಂಬರನಾರ್ ಅವರಂತಹ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಒಳಗೊಂಡಿತ್ತು.

ಗಣರಾಜ್ಯೋತ್ಸವ ಪರೇಡ್‌ಗಾಗಿ ಸ್ತಬ್ದ ಚಿತ್ರ ಆಯ್ಕೆ ಮಾಡುವ ಪ್ರಕ್ರಿಯೆಯು ಪಾರದರ್ಶಕವಾಗಿದೆ ಹಾಗೂ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ. ಕಲೆ, ಸಂಸ್ಕೃತಿ, ಸಂಗೀತ ಮತ್ತು ನೃತ್ಯ ಕ್ಷೇತ್ರಗಳ ವ್ಯಕ್ತಿಗಳನ್ನು ಒಳಗೊಂಡ ಸಮಿತಿಯು ರಾಜ್ಯಗಳು ಕಳುಹಿಸಿರುವ ವಿನ್ಯಾಸ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತದೆ ಹಾಗೂ ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುತ್ತದೆ ಎಂದು ಸಿಂಗ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ವರ್ಷ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಳುಹಿಸಿದ ವಿನ್ಯಾಸ ಪ್ರಸ್ತಾವನೆಗಳಲ್ಲಿ 12 ವಿನ್ಯಾಸ ಪ್ರಸ್ತಾವನೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News