ಪಂಚಗಂಗಾ ಎಕ್ಸ್‌ಪ್ರೆಸ್ ಮಡ್ಗಾಂವ್‌ಗೆ ವಿಸ್ತರಿಸಿ; ರೈಲ್ವೆಗೆ ನಷ್ಟ ತಪ್ಪಿಸಿ

Update: 2022-01-18 09:25 GMT

ನಮಗೆ ಯಾವುದೇ ರೈಲು ಸೇವೆ ಬೇಕೆಂದು ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರತಿಪಾದನೆ ಮಾಡುವಾಗ ಕೇವಲ ಒಂದು ಪ್ರದೇಶದ ಪ್ರಯಾಣಿಕರ ಹಿತಾಸಕ್ತಿಯನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು ರೈಲ್ವೆ ಇಲಾಖೆಗೆ ಪ್ರತಿ ದಿನ ಲಕ್ಷಗಟ್ಟಲೆ ನಷ್ಟವಾಗುವಂತೆ ನೋಡಿಕೊಳ್ಳುವುದು ಸರಿಯಲ್ಲ. ಬೆಂಗಳೂರು ಸಿಟಿ-ಕಾರವಾರ ರಾತ್ರಿ ರೈಲು (ರೈಲು ಸಂಖ್ಯೆ 16595/16596) ಪಂಚಗಂಗಾ ಎಕ್ಸ್‌ಪ್ರೆಸ್ ಇದಕ್ಕೊಂದು ಉದಾಹರಣೆ.

ಬೆಂಗಳೂರಿನಿಂದ ಸಂಜೆ 6:40ಕ್ಕೆ ಹೊರಡುವ ಈ (16595)ರೈಲು ಮರುದಿನ ಬೆಳಗ್ಗೆ 8:25ಕ್ಕೆ ಕಾರವಾರ ತಲುಪುತ್ತದೆ. ಕಾರವಾರ ಈ ರೈಲಿನ ಗಮ್ಯಸ್ಥಾನವಾಗಿದೆ. ಆದರೆ ಡಿಸೇಲ್ ಹಾಗೂ ನೀರು ತುಂಬಿಸಲು ಈ ರೈಲು 70 ಕಿ.ಮೀ. ದೂರದ ಮಡ್ಗಾಂವ್ ತನಕ ಹೋಗಿ ವಾಪಸ್ ಬರುತ್ತದೆ ಅಂದರೆ 140 ಕಿ.ಮೀ. ಅನವಶ್ಯಕವಾಗಿ ಪ್ರತಿದಿನ ಓಡಾಡುತ್ತಿದೆ. 1ಕಿ.ಮೀ. ದೂರ ಕ್ರಮಿಸಲು 4 ಲೀಟರ್ ಡಿಸೇಲ್‌ನಂತೆ 140 ಕಿ.ಮೀ. ಹೋಗಿ ಬರಲು 560 ಲೀಟರ್ ಡಿಸೇಲ್ ವೃಥಾ ಖರ್ಚಾಗುತ್ತಿದೆ. ಲೀಟರ್‌ಗೆ ಕನಿಷ್ಠ ರೂ. 85ರಂತೆ ಪ್ರತಿದಿನ ರೈಲು ನಷ್ಟ 47,600ರೂಪಾಯಿಗಳು. ತಿಂಗಳಿಗೆ ರೂ. 14,28,000 ಮತ್ತು ವಾರ್ಷಿಕ 1,71,36,000 ರೂಪಾಯಿಗಳು. ಈ ನಷ್ಟವನ್ನು ತಡೆಯುವವರು ಯಾರೂ ಇಲ್ಲವೇ?

ಪ್ರಜ್ಞಾವಂತ ನಾಗರಿಕನಾಗಿ ನನ್ನದೊಂದು ಸಲಹೆ. ದಯವಿಟ್ಟು ಈ ರೈಲನ್ನು ಮಡ್ಗಾಂವ್‌ನಿಂದಲೇ ಆರಂಭಿಸಿ. ಹೇಗಿದ್ದರೂ ಈ ರೈಲು ಬೆಳಗ್ಗೆ 8:25ಕ್ಕೆ ಕಾರವಾರ ತಲುಪಿ ಅದು ಪುನಃ ಅಲ್ಲಿಂದ ಹೊರಡುವುದು ಸಂಜೆ 6ಗಂಟೆಗೆ. ಅಂದರೆ 9ಗಂಟೆ 35ನಿಮಿಷ ಅದು ಕಾರವಾರದಲ್ಲಿ ನಿಲ್ಲುವ ಬದಲು ಕೇವಲ ಒಂದು ಗಂಟೆ ದೂರದ ಮಡ್ಗಾಂವ್‌ಗೆ ಹೋಗಲಿ ಮತ್ತು ಈಗಿರುವ ವೇಳಾಪಟ್ಟಿಯಂತೆಯೇ ಮುಂದುವರಿಯಲಿ.

ಇದರಿಂದ ರೈಲ್ವೆ ಇಲಾಖೆಗೆ ವಾರ್ಷಿಕ ಕೋಟಿಗಟ್ಟಲೆ ರೂ. ನಷ್ಟ ತಪ್ಪಿಸಬಹುದು. ಮಡ್ಗಾಂವ್‌ನಿಂದಲೇ ಪ್ರಯಾಣಿಕರು ಸಿಗುವುದರಿಂದ ಅಧಿಕ ವರಮಾನ ಬಂದು ಖಾಲಿ ಹೋಗುವುದನ್ನು ತಪ್ಪಿಸಬಹುದು. ಕೇವಲ ಸಾಮಾಜಿಕ ಕಳಕಳಿಯಿಂದ ಇದನ್ನು ಬರೆಯುತ್ತಿದ್ದೇನೆ. ನಮ್ಮಲ್ಲಿ ಕರಾವಳಿ ಪ್ರದೇಶದಲ್ಲಿ ಸಾವಿರಾರು ಸಂಘಸಂಸ್ಥೆಗಳು, ಹತ್ತು ರೈಲು ಯಾತ್ರಿಗಳು ಸಂಘಗಳು ಇದ್ದು ಅವರೆಲ್ಲ ಈ ರೈಲನ್ನು ಕಾರವಾರದಿಂದ ಮಡಗಾಂವ್ ವಿಸ್ತರಣೆಗೆ ಕೈಜೋಡಿಸಬೇಕಾಗಿದೆ.

Writer - ಪದ್ಮನಾಭ ಆಚಾರ್ಯ, ಅಸ್ನೋಟಿ

contributor

Editor - ಪದ್ಮನಾಭ ಆಚಾರ್ಯ, ಅಸ್ನೋಟಿ

contributor

Similar News