ದೇಶದ ಸಂಸ್ಕೃತಿ ಉಳಿಸಲು ಪ್ರಧಾನಿ ಮೋದಿ ಶ್ರೀರಾಮ, ಶ್ರೀಕೃಷ್ಣರ ಅವತಾರವಾಗಿ ಜನ್ಮ ತಾಳಿದ್ದಾರೆ ಎಂದ ಮ.ಪ್ರ ಸಚಿವ

Update: 2022-01-18 12:37 GMT

ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯನ್ನು `ದೇವರ ಅವತಾರ' ಎಂದು ವರ್ಣಿಸಿರುವ ಮಧ್ಯಪ್ರದೇಶ ಕೃಷಿ ಸಚಿವ ಹಾಗೂ ಬಿಜೆಪಿ ನಾಯಕ ಕಮಲ್ ಪಟೇಲ್, ಅವರು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದಿಂದ ಹಾಗೂ ದೇಶದ ಸಂಸ್ಕೃತಿಯ ವಿನಾಶದಿಂದ ಉಂಟಾಗಿರುವ ಹತಾಶೆಯ ವಾತಾವರಣವನ್ನು ಅಂತ್ಯಗೊಳಿಸಲು ಶ್ರೀ ರಾಮ ಮತ್ತು ಶ್ರೀ ಕೃಷ್ಣರಂತೆ  ಜನ್ಮ ತಾಳಿದ್ದಾರೆ ಎಂದು ಹೇಳಿದ್ದಾರೆ.

ಹರ್ದಾ ಎಂಬಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು "ಭಾರತವನ್ನು ವಿಶ್ವ ಗುರು ಆಗುವೆಡೆಗೆ ಸಾಗಿಸಲು ಮೋದಿ ಮುನ್ನಡೆಸಿದ ರೀತಿ, ದೇಶದಲ್ಲಿ ಭ್ರಷ್ಟಾಚಾರವನ್ನು ಅಂತ್ಯಗೊಳಿಸಲು ಹಾಗೂ ಸಮಾಜ ಕಲ್ಯಾಣಕ್ಕೆ ಅವರು ಶ್ರಮಿಸಿದ ರೀತಿಯನ್ನು ಸಾಮಾನ್ಯ ಜನರಿಗೆ ಸಾಧಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

"ದೇಶದಲ್ಲಿ ಬಿಕ್ಕಟ್ಟು ತಲೆದೋರಿದಾಗ ಹಾಗೂ ದೌರ್ಜನ್ಯಗಳು ತಾಂಡವವಾಡಿದಾಗ  ದೇವರು ಮಾನವ ರೂಪದ ಅವತಾರ ತಾಳುತ್ತಾರೆ ಎಂದು ನಮ್ಮ ಧರ್ಮ ಮತ್ತು ಸಂಸ್ಕೃತಿ ಹೇಳುತ್ತದೆ" ಎಂದು ಅವರು ಹೇಳಿದರು.

"ಶ್ರೀರಾಮ ಮಾನವ ರೂಪದಲ್ಲಿ ರಾಕ್ಷಸ ರಾವಣನ ಹತ್ಯೆ ನಡೆಸಿದ ಹಾಗೆ ಹಾಗೂ ಕಂಸನ ಅನಾಚಾರ ಹೆಚ್ಚಾದಾಗ ಶ್ರೀ ಕೃಷ್ಣ ಜನಿಸಿದ ರೀತಿಯಲ್ಲಿಯೇ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ, ಜಾತೀಯತೆ ಹೆಚ್ಚಾದಾಗ ಹಾಗೂ ಹತಾಶೆಯ ವಾತಾವರಣ ಎಲ್ಲೆಡೆ ಮೂಡಿದಾಗ ಅದನ್ನು ಅಂತ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಜನ್ಮ ತಾಳಿದ್ದಾರೆ" ಎಂದು ಪಟೇಲ್ ಹೇಳಿದರು.

"ಸಾಮಾನ್ಯ ಮನುಷ್ಯ ಸಾಧಿಸಲು ಸಾಧ್ಯವಾಗದ ಕೆಲಸಗಳನ್ನು ಮೋದಿ ಮಾಡಿದ್ದಾರೆ. ಅವುಗಳು ಸಾಧ್ಯವಿದ್ದರೆ 60 ವರ್ಷಗಳಲ್ಲಿ ಆಗಬಹುದಾಗಿತ್ತು. ಆದುದರಿಂದ ಪ್ರಧಾನಿ ಮೋದಿ 'ಅವತಾರ ಪುರುಷ'ರಾಗಿ ಅಸಾಧ್ಯವಾದ ಕೆಲಸಗಳನ್ನು ಮಾಡಿದ್ದಾರೆ. ಅವರು ದೇವರ ಅವತಾರ" ಎಂದು ಪಟೇಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News