ಕೋವಿಡ್ ನಿಯಂತ್ರಣದ ನೆಪದಲ್ಲಿ ಜನರ ಓಡಾಟ, ಪ್ರಯಾಣ ನಿರ್ಬಂಧಿಸಬಾರದು: ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ

Update: 2022-01-18 13:52 GMT

ಕೋಲ್ಕತಾ,ಜ.18: ಭಾರತದಂತಹ ದೇಶದಲ್ಲಿ ಕೋವಿಡ್ ನಿಯಂತ್ರಿಸಲು ಜನರ ಚಲವಲನಗಳು ಮತ್ತು ಪ್ರವಾಸಗಳ ಮೇಲೆ ಸಂಪೂರ್ಣ ಪ್ರತಿಬಂಧದಂತಹ ಸಾರಾಸಗಟು ನಿಷೇಧಗಳು ಪ್ರತಿಕೂಲವನ್ನುಂಟು ಮಾಡುತ್ತವೆ ಎಂದು ಹೇಳಿರುವ ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯ ಪ್ರತಿನಿಧಿ ರಾಡೆರಿಕೊ ಎಚ್.ಆಫ್ರಿನ್ ಅವರು, ಸಾಂಕ್ರಾಮಿಕವನ್ನು ಎದುರಿಸಲು ಗುರಿ ನಿರ್ದೇಶಿತ,ಅಪಾಯ ಆಧಾರಿತ ಕಾರ್ಯತಂತ್ರಗಳನ್ನು ಪ್ರತಿಪಾದಿಸಿದ್ದಾರೆ.

ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದಲ್ಲಿ ಜನರ ಬದುಕುಗಳು ಮತ್ತು ಜೀವನೋಪಾಯಗಳನ್ನು ರಕ್ಷಿಸುವ ಅಗತ್ಯಕ್ಕೆ ಒತ್ತು ನೀಡಿದ ಅವರು, ವೈರಸ್ನ ರೂಪಾಂತರವು ಹೇಗೆ ಹರಡುತ್ತದೆ,ಅದು ಉಂಟು ಮಾಡುವ ಕಾಯಿಲೆಯ ತೀವ್ರತೆ,ಲಸಿಕೆಗಳು ಮತ್ತು ಮೊದಲಿನ ಸಾರ್ಸ್-ಕೋವ್ -2 ಸೋಂಕು ಹೇಗೆ ರಕ್ಷಣೆ ನೀಡುತ್ತವೆ ಹಾಗೂ ಜನಸಾಮಾನ್ಯರು ಹೇಗೆ ಅಪಾಯವನ್ನು ಗ್ರಹಿಸುತ್ತಾರೆ ಮತ್ತು ನಿಯಂತ್ರಣ ಕ್ರಮಗಳನ್ನು ಹೇಗೆ ಅನುಸರಿಸುತ್ತಾರೆ ಎಂಬ ನಾಲ್ಕು ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳು ಭಾರತದಲ್ಲಿ ಮತ್ತು ವಿಶ್ವಾದ್ಯಂತ ಸಾರ್ವಜನಿಕ ಆರೋಗ್ಯ ಕ್ರಮಕ್ಕೆ ನಿರಂತರ ಮಾರ್ಗದರ್ಶಕವಾಗಿರಬೇಕು ಎಂದರು.

ಪ್ರವಾಸಗಳನ್ನು ಸಾರಾಸಗಟಾಗಿ ನಿಷೇಧಿಸಬೇಕು ಅಥವಾ ಜನರ ಚಲನವಲನಗಳನ್ನು ಸಂಪೂರ್ಣವಾಗಿ ಪ್ರತಿಬಂಧಿಸಬೇಕು ಎಂದು ಡಬ್ಲುಎಚ್ಒ ಶಿಫಾರಸು ಮಾಡುವುದಿಲ್ಲ. ಇಂತಹ ಸಂಪೂರ್ಣ ನಿಷೇಧಗಳು ಹಲವಾರು ರೀತಿಗಳಲ್ಲಿ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತವೆ. ಜನಸಂಖ್ಯಾ ವೈವಿಧ್ಯತೆ ಮತ್ತು ಭೌಗೋಳಿಕ ವಿಸ್ತಾರಗಳಿಂದಾಗಿ ಭಾರತದಲ್ಲಿ ಸಾಂಕ್ರಾಮಿಕವನ್ನು ಎದುರಿಸಲು ಅಪಾಯ ಆಧಾರಿತ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಬುದ್ಧಿವಂತ ನಡೆಯಾಗುತ್ತದೆ ಎಂದರು.

ಸಾಂಕ್ರಾಮಿಕದ ಸ್ಥಿತಿ,ಲಭ್ಯ ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಗಳನ್ನು ಅವಲಂಬಿಸಿ ಸರಕಾರಗಳು ಸೋಂಕು ಪ್ರಸರಣವನ್ನು ತಡೆಯಲು ಮತ್ತು ನಿಯಂತ್ರಿಸಲು ತಮ್ಮ ಕ್ರಮಗಳನ್ನು ರೂಪಿಸಬೇಕು ಎಂದ ಆಫ್ರಿನ್,ಮಾಡಬೇಕಾದ್ದು ಮತ್ತು ಮಾಡಬಾರದು ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಅನುಸರಿಸಿದರೆ ಲಾಕ್ಡೌನ್ಗಳ ಅಗತ್ಯವಿರುವುದಿಲ್ಲ ಎಂದರು.

ಪ್ರಸಕ್ತ ಸನ್ನಿವೇಶದಲ್ಲಿ ಹಾಲಿ ಪರಿಹಾರ ಕ್ರಮಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಬೇಕು. ಲಸಿಕೆ ನೀಡಿಕೆಯ ವ್ಯಾಪ್ತಿಯನ್ನು ಹೆಚ್ಚಿಸುವುದು,ಮಾಸ್ಕ್ಗಳ ಬಳಕೆ,ಕೈಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು,ಸುರಕ್ಷಿತ ಅಂತರ,ಒಳಾಂಗಣಗಳಲ್ಲಿ ಸೂಕ್ತ ಗಾಳಿಯ ವ್ಯವಸ್ಥೆ ಮತ್ತು ಜನಸಂದಣಿಗಳನ್ನು ತಪ್ಪಿಸುವುದು ಇತ್ಯಾದಿ ಕ್ರಮಗಳು ಸೋಂಕು ಹರಡುವಿಕೆ ಸರಪಳಿಯನ್ನು ತುಂಡರಿಸಲು ನೆರವಾಗುತ್ತವೆ. ಇವುಗಳನ್ನು ಪಾಲಿಸಿದರೆ ಲಾಕ್ಡೌನ್ಗಳು ಅಗತ್ಯವಾಗುವುದಿಲ್ಲ ಎಂದು ಪ್ರತಿಪಾದಿಸಿದ ಅವರು,ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊರೋನವೈರಸ್ ನ ಹೊಸ ಪ್ರಭೇದವು ಹರಡುತ್ತಿರುವುದು ನಿರೀಕ್ಷೆಗೂ ಮೀರಿದ್ದಾಗಿದೆ ಎಂದರು.

ಕೇಂದ್ರ ಗೃಹಸಚಿವಾಲಯದ ಅಂಕಿಅಂಶಗಳಂತೆ ಮಂಗಳವಾರ ಭಾರತದಲ್ಲಿ 2,38,018 ಹೊಸ ಕರೋನಾವೈರಸ್ ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 17,36,628ಕ್ಕೇರಿದೆ. ಇದು ಕಳೆದ 230 ದಿನಗಳಲ್ಲಿ ಗರಿಷ್ಠ ಪ್ರಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ 310 ಹೊಸ ಸಾವುಗಳು ವರದಿಯಾಗುವುದರೊಂದಿಗೆ ಈವರೆಗಿನ ಸಾವುಗಳ ಸಂಖ್ಯೆ 4,86,761ಕ್ಕೇರಿದೆ.

ಪ್ರತಿಯೊಂದೂ ಸ್ಯಾಂಪಲ್ ಅನ್ನು ಜೆನೋಮ್ ಸೀಕ್ವೆನ್ಸಿಂಗ್ ಗೆ ಒಳಪಡಿಸಲು ಸಾಧ್ಯವಿಲ್ಲ. ಆದರೆ ಒಮೈಕ್ರಾನ್ ಪ್ರಭೇದವು ಪ್ರಸಕ್ತ ಅಲೆಗೆ ಪ್ರಮುಖ ಕಾರಣವಾಗಿದೆ ಎನ್ನುವುದನ್ನು ತಜ್ಞರು ಒಪ್ಪಿಕೊಂಡಿದ್ದಾರೆ.

ಪ್ರಸಕ್ತ ಕೋವಿಡ್ ಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾದ ಮಾರ್ಗಗಳನ್ನು ವಿವರಿಸಿದ ಆಫ್ರಿನ್,ಅದು ಕೇವಲ ಸರಕಾರದ ಹೊಣೆಗಾರಿಕೆಯಾಗಿಲ್ಲ,ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯೂ ಆಗಿದೆ ಎಂದರು.

ವೈದ್ಯರು,ಇತರ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ಗಳನ್ನು ನೀಡುವ ಭಾರತ ಸರಕಾರದ ನಿರ್ಧಾರ ವಿಳಂಬವಾಗಿದೆಯೇ ಎಂಬ ಪ್ರಶ್ನೆಗೆ ಆಫ್ರಿನ್,ದುರ್ಬಲರಿಗೆ ಮತ್ತು ಈವರೆಗೆ ಎರಡೂ ಡೋಸ್ಗಳನ್ನು ಪೂರ್ಣಗೊಳಿಸದವರಿಗೆ ಲಸಿಕೆಯನ್ನು ಲಭ್ಯವಾಗಿಸಲು ಆದ್ಯತೆಯನ್ನು ನೀಡಬೇಕು ಎನ್ನುವುದು ಈಗಲೂ ಡಬ್ಲುಎಚ್ಒದ ಮುಖ್ಯ ಶಿಫಾರಸಾಗಿದೆ ಮತ್ತು ಬೂಸ್ಟರ್ ಡೋಸ್ ನಂತರದ ವಿಷಯವಾಗಿದೆ ಎಂದು ಉತ್ತರಿಸಿದರು.

  ಜನಸಂಖ್ಯೆಯ ಹೆಚ್ಚಿನ ಭಾಗ ಲಸಿಕೆಯನ್ನು ಪಡೆಯದಿರುವಾಗ ಬೂಸ್ಟರ್ ಡೋಸ್ ನೀಡಿಕೆಯನ್ನು ಆರಂಭಿಸುವುದು ಸಾಂಕ್ರಾಮಿಕ ಅವಧಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಮತ್ತು ಸರಕಾರವು ರಕ್ಷಿಸಲು ಉದ್ದೇಶಿಸಿರುವ ದೊಡ್ಡ ಜನಸಂಖ್ಯೆಯು ಅದರಿಂದ ವಂಚಿತಗೊಳ್ಳುತ್ತದೆ ಎಂದು ಆಫ್ರಿನ್ ಹೇಳಿದರು.

ಭಾರತದ ಸಾಂಕ್ರಾಮಿಕ ಸ್ಥಿತಿ ಮತ್ತು ಸಾಮಾಜಿಕ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಅಧ್ಯಯನದ ಬಳಿಕ ಮಕ್ಕಳಿಗೆ ಲಸಿಕೆ ನೀಡಿಕೆಯನ್ನು ಆರಂಭಿಸಬೇಕು ಎಂದು ಅವರು ತಿಳಿಸಿದರು.

ಸಾಂಕ್ರಾಮಿಕದ ವಿರುದ್ಧ ಭಾರತ ಸರಕಾರದ ಹೋರಾಟಕ್ಕೆ ನೆರವಾಗುವಲ್ಲಿ ಡಬ್ಲುಎಚ್ಒ ಪಾತ್ರವನ್ನು ಚರ್ಚಿಸಿದ ಆಫ್ರಿನ್,2,600 ಕ್ಷೇತ್ರಾಧಿಕಾರಿಗಳು ಮತ್ತು 23 ರಾಜ್ಯಗಳಲ್ಲಿರುವ ಸಿಬ್ಬಂದಿಗಳ ಮೂಲಕ ಡಬ್ಲುಎಚ್ಒ ತಾಂತ್ರಿಕ ಮತ್ತು ತಳಮಟ್ಟದಲ್ಲಿ ಬೆಂಬಲವನ್ನು ಒದಗಿಸುತ್ತಿದೆ ಮತ್ತು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ತಲುಪುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News