ಪಲಿಮಾರುಶ್ರೀಗಳ ಹಾದಿಯಲ್ಲಿ ಸಾಗುವೆ: ಪರ್ಯಾಯ ಕೃಷ್ಣಾಪುರಶ್ರೀ

Update: 2022-01-18 14:56 GMT

ಉಡುಪಿ, ಜ.18: ಎರಡು ವರ್ಷಗಳ ತಮ್ಮ ಪರ್ಯಾಯ ಅವಧಿಯ ಎಲ್ಲಾ ಪ್ರಯತ್ನಗಳು ಸಾಕಾರಗೊಳ್ಳಲು ಎಲ್ಲರ ಪ್ರಾರ್ಥನೆ ಹಾಗೂ ಬೆಂಬಲ ಬೇಕಾಗಿದೆ. ಈ ಅವಧಿಯಲ್ಲಿ ತಾವು ಪಲಿಮಾರುಶ್ರೀಗಳು ಈ ಹಿಂದೆ ನಡೆಸಿದ ತುಳಸಸಿ ಅರ್ಚನೆ, ನಿರಂತರ ಭಜನಾ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಇಂದು ಮುಂಜಾನೆ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರಿಂದ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣನ ಪೂಜಾ ಅಧಿಕಾರವನ್ನು ಸ್ವೀಕರಿಸಿದ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಹೇಳಿದ್ದಾರೆ.

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಇಂದು ಮುಂಜಾನೆ ಸರ್ವಜ್ಞ ಪೀಠಾರೋಹಣದ ಬಳಿಕ ನಡೆದ ಪರ್ಯಾಯ ದರ್ಬಾರು ಸಭಾ ಕಾರ್ಯಕ್ರಮದ ಕೊನೆಯಲ್ಲಿ ಆಶೀರ್ವಚನ ನೀಡಿ ಮಾತನಾಡುತಿದ್ದರು.

ಕೊರೋನ ಸಾಂಕ್ರಾಮಿಕದ ಈ ಧುರಿತ ಕಾಲದಲ್ಲಿ ಜನರ ನಿರೀಕ್ಷೆಗಳು ತುಂಬಾ ಇವೆ. ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವೇ ಎಂಬ ಆತಂಕವಿದೆ. ಇದಕ್ಕೆ ನನ್ನದೇ ರೀತಿಯಲ್ಲಿ ಪರಿಹಾರ ಕಾಣುವ ವಿಶ್ವಾಸವಿದೆ ಎಂದರು. ನಾನು ನನಗಾಗಿ ದೇವರಲ್ಲಿ ಯಾವುದನ್ನೂ ನೇರವಾಗಿ ಕೇಳುವುದಿಲ್ಲ. ಜನರಿಗಾಗಿ ನನ್ನ ಗುರುಗಳ ಮೂಲಕ (ಮಧ್ವಾಚಾರ್ಯರು, ವಾದಿರಾಜರು) ಕೇಳುತ್ತೇನೆ. ಗುರುಗಳ ಮೂಲಕ ಲೋಕಕಲ್ಯಾಣಕ್ಕೆ ಪ್ರಯತ್ನಿಸುತ್ತೇನೆ ಎಂದರು.

ನಿರ್ಗಮನ ಪರ್ಯಾಯ ಪೀಠಾಧಿಪತಿ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು, ಕಿರಿಯ ಯತಿ ಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಹಾಗೂ ಶಿರೂರು ಮಠದ ಶ್ರೀವೇದವರ್ಧನ ತೀರ್ಥರು ಸಹ ಆಶೀರ್ವಚನ ನೀಡಿದರು.

ದರ್ಬಾರ್ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಹೈಕೋರ್ಟ್ ನ್ಯಾಯಾಧೀಶ ಟಿ.ಎಸ್.ದಿನೇಶ್ ಕುಮಾರ್, ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಮಹಾಬಲೇಶ್ವರ ಎಂ.ಎಸ್., ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಎಸ್‌ಬಿಐನ ಪ್ರಾದೇಶಿಕ ಮ್ಯಾನೇಜರ್ ಸುನಿಲ್ ಪರಾಂಜಪೆ, ಎಲ್‌ಐಸಿಯ ಉಡುಪಿ ವಿಭಾಗಾಧಿಕಾರಿ ಬಿಂದು ರಾಬರ್ಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ‘ಶ್ರೀವಾದಿರಾಜ ವಾಙ್ಮಯನಿಧಿ’ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಪರ್ಯಾಯ ದರ್ಬಾರ್ ಪ್ರಶಸ್ತಿಗಳನ್ನು ದಿ. ಪಿ.ವ್ಯಾಸಾಚಾರ್ಯರ ಪರವಾಗಿ ಅವರ ಪುತ್ರ ಪಿ.ವೃಜನಾತ ಆಚಾರ್ಯರಿಗೆ, ವಿದ್ವಾನ್ ಕೆ.ಹರಿದಾಸ ಉಪಾಧ್ಯಾಯ ಹಾಗೂ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಇವರಿಗೆ ಪ್ರದಾನ ಮಾಡಲಾಯಿತು. ಎರಡು ವರ್ಷಗಳ ಅವಧಿಗೆ ಮಠದ ವಿವಿಧ ಅಧಿಕಾರವರ್ಗವನ್ನು ಘೋಷಿಸಲಾಯಿತು.

ಪರ್ಯಾಯೋತ್ಸವ ಸಮಿತಿಯ ಗೌರವಾದ್ಯಕ್ಷ ಶಾಸಕ ಕೆ.ರಘುಪತಿ ಭಟ್ ಅತಿಥಿಗಳನ್ನು ಸ್ವಾಗತಿಸಿದರೆ, ಅಧ್ಯಕ್ಷ ಸೂರ್ಯಾನಾರಾಯಣ ಉಪಾಧ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ವಂದಿಸಿದರೆ, ಪ್ರೊ.ಎಂ.ಎಲ್.ಸಾಮಗ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News