ಗಣರಾಜ್ಯೋತ್ಸವ ಪರೇಡ್: ನಾರಾಯಣ ಗುರು ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರವನ್ನು ಟೀಕಿಸಿದ ಪುದುಚೇರಿ ಮಾಜಿ ಸಿಎಂ

Update: 2022-01-18 16:31 GMT

ಪುದುಚೇರಿ,ಜ.18: ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶವನ್ನು ನಿರಾಕರಿಸಿದ್ದಕಾಗಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪುದುಚೇರಿಯ ಮಾಜಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾರಾಯಣ ಗುರುಗಳು ಮಹಾನ್ ಸಮಾಜ ಸುಧಾರಕರಾಗಿದ್ದರು. ಸಾಮಾಜಿಕ ಚಿಂತಕ ಮತ್ತು ಜಾತಿರಹಿತ ಸಮಾಜದ ಹೋರಾಟಗಾರರಾಗಿದ್ದ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರದರ್ಶಿಸುವ ಕೇರಳ ಸರಕಾರದ ನಿರ್ಧಾರ ಸರಿಯಾಗಿಯೇ ಇತ್ತು.

ಅದಕ್ಕೆ ಕೇಂದ್ರವು ಅನುಮತಿಯನ್ನು ನಿರಾಕರಿಸಿರುವುದು ಕಳವಳದ ವಿಷಯವಾಗಿದೆ. ಕೇಂದ್ರವು ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸಬೇಕು ಮತ್ತು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶವನ್ನು ಕಲ್ಪಿಸಬೇಕು ಎಂದು ಕೋವಿಡ್ ಸೋಂಕಿನಿಂದಾಗಿ ಮನೆಯಲ್ಲಿ ಕ್ವಾರಂಟೈನ್ನಲ್ಲಿರುವ ನಾರಾಯಣಸ್ವಾಮಿ ಸೋಮವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಿರಿಯ ಸ್ಯಾತಂತ್ರ ಹೋರಾಟಗಾರ ವಿ.ಒ.ಚಿದಂಬರಂ (ಕಪ್ಪಲೊಟ್ಟಿಯಾ ತಮಿಳನ್),ರಾಷ್ಟ್ರೀಯ ಕವಿ ಸುಬ್ರಹ್ಮಣ್ಯ ಭಾರತಿ ಮತ್ತು ರಾಣಿ ವೇಲು ನಟ್ಚಿಯಾರ್ ಅವರ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲು ತಮಿಳುನಾಡು ಸರಕಾರಕ್ಕೆ ಅವಕಾಶ ನಿರಾಕರಿಸಿದ್ದಕ್ಕಾಗಿಯೂ ಕೇಂದ್ರ ಸರಕಾರದ ವಿರುದ್ಧ ಅವರು ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಇಬ್ಬಗೆ ನಿಲುವು ಹೊಂದಿದ್ದಾರೆ ಎಂದು ಆರೋಪಿಸಿದ ಅವರು,ಪ್ರಧಾನಿ ತಮಿಳುನಾಡು ಅಥವಾ ಪುದುಚೇರಿಗೆ ಭೇಟಿ ನೀಡಿದಾಗೆಲ್ಲ ತಮಿಳು ಕವಿ ಭಾರತಿಯಾರ್ ಅವರ ಉಕ್ತಿಗಳನ್ನು ಉಲ್ಲೇಖಿಸಲು ಮರೆಯುವುದಿಲ್ಲ. ಆದರೆ ತಾನು ಮುಖ್ಯಮಂತ್ರಿಯಾಗಿದ್ದಾಗ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾರತಿಯಾರ್ ಮತ್ತು ಅರಬಿಂದೋ ಅವರ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಅವರ ಸರಕಾರವು ಅವಕಾಶ ನೀಡಿರಲಿಲ್ಲ ಎಂದು ಕಿಡಿ ಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News