ಕೋವಿಡ್ ಲಸಿಕೆ ಅಭಿವೃದ್ಧಿಗೆ ʼಪಿಎಂ ಕೇರ್ಸ್ʼ 100 ಕೋ. ರೂ. ನೀಡಿಲ್ಲ: ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಿಂದ ಬಹಿರಂಗ

Update: 2022-01-18 18:00 GMT

ಹೊಸದಿಲ್ಲಿ, ಜ. 18: ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ ಪಿಎಂ ಕೇರ್ಸ್ ನಿಧಿ ಭರವಸೆ ನೀಡಿದಂತೆ ಲಸಿಕೆ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಮಂಜೂರು ಮಾಡಿಲ್ಲ. ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಸ್ವೀಕರಿಸಲಾದ ಪ್ರತಿಕ್ರಿಯೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. 

ಸಾಮಾಜಿಕ ಹೋರಾಟಗಾರ ಕೊಮೊಡೋರ್ ಲೋಕೇಶ್ ಬಾತ್ರಾ (ನಿವೃತ್ತ) ಅವರು ಸಲ್ಲಿಸಿದ ಅರ್ಜಿಗೆ ಪ್ರತ್ರಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ‘‘ಇದುವರೆಗೆ, ವಿಭಾಗ (ಆರೋಗ್ಯ ಹಾಗೂ ಸಾರ್ವಜನಿಕ ಶಿಕ್ಷಣ) ನೀಡಿದ ಮಾಹಿತಿ ಲಸಿಕೆ ಅಭಿವೃದ್ಧಿಗೆ ಪಿಎಂ ಕೇರ್ಸ್ನ ನಿಧಿಯಿಂದ ಹಣಕಾಸು ನೆರವು ಸ್ವೀಕರಿಸಿಲ್ಲ ಎಂದು ಹೇಳಿದೆ’’ ಎಂದಿದೆ. 2021 ಜುಲೈಯಲ್ಲಿ ಬಾತ್ರಾ ಅವರು ಆರ್ಟಿಐ ಅರ್ಜಿ ಸಲ್ಲಿಸಿದ್ದರು. 

ಅನಂತರ ವಿವಿಧ ಪ್ರಾಧಿಕಾರಕ್ಕೆ ಹಲವು ನೆನಪೋಲೆಗಳನ್ನು ಕಳುಹಿಸಿದ ಬಳಿಕ  ಸುಮಾರು ನಾಲ್ಕು ತಿಂಗಳ ಬಳಿಕ ಅವರು ಪ್ರತಿಕ್ರಿಯೆ ಸ್ವೀಕರಿಸಿದ್ದಾರೆ. ಕೋವಿಡ್ ಲಸಿಕೆ ಅಭಿವೃದ್ಧಿಗೆ ಪಿಎಂ ಕೇರ್ಸ್ನಿಂದಾದ ವೆಚ್ಚದ ಬಗ್ಗೆ ಮಾಹಿತಿ ಕೋರಿ ಬಾತ್ರಾ ಅವರು ಆರ್ಟಿಐ ಕಾಯ್ದೆ ಅಡಿಯಲ್ಲಿ ಆರೋಗ್ಯ ಸಚಿವಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ)ಗೆ 2021 ಜುಲೈ 16ರಂದು ಅರ್ಜಿ ಸಲ್ಲಿಸಿದ್ದರು. 

ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿ ಲಸಿಕೆ ಅಭಿವೃದ್ಧಿಗೊಳಿಸಲು ಕೇಂದ್ರ ಸರಕಾರ ಸ್ವೀಕರಿಸಿದ ಪಿಎಂ ಕೇರ್ಸ್ ನಿಧಿಯ ಆರ್ಥಿಕ ವರ್ಷವಾರು ಒಟ್ಟು ಮೊತ್ತದ ಬಗ್ಗೆ ಮಾಹಿತಿ ನೀಡುವಂತೆ ನಿರ್ದಿಷ್ಟವಾಗಿ ಆರ್ಟಿಐ ಅರ್ಜಿಯಲ್ಲಿ ಕೋರಲಾಗಿತ್ತು. ಅಲ್ಲದೆ, ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಸಾರ್ವಜನಿಕ ಪ್ರಾಧಿಕಾರ, ಕಂಪೆನಿಗಳು, ಸಂಘಟನೆಗಳು ಹಾಗೂ ಸಂಸ್ಥೆಗಳ ಹೆಸರನ್ನು ನೀಡುವಂತೆ ಕೂಡ ಮನವಿ ಮಾಡಲಾಗಿತ್ತು. ಅದೇ ದಿನ ಕೋವಿಡ್ ಲಸಿಕೆ ನೀಡುವ ಘಟಕದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ), ‘‘ಲಸಿಕೆ ಅಭಿವೃದ್ಧಿಗೆ ಈ ಕಚೇರಿ ಪಿಎಂ ಕೇರ್ಸ್ ನಿಧಿಯಿಂದ ಯಾವುದೇ ಹಣಕಾಸು ನೆರವು ಸ್ವೀಕರಿಸಿಲ್ಲ’’ ಎಂದು ಹೇಳಿತ್ತು. ಅಲ್ಲದೆ, ಈ ಅರ್ಜಿಯನ್ನು ಪ್ರಧಾನ ಮಂತ್ರಿ ಕಚೇರಿ (ಪಿಎಂಒ), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗೆ ವರ್ಗಾಯಿಸುವಂತೆ ತಿಳಿಸಿತ್ತು. 

ತರುವಾಯ ಮೊದಲ ಮೇಲ್ಮನವಿ ಪ್ರಾಧಿಕಾರ, ಬಾತ್ರಾ ಅವರ ಅರ್ಜಿಯನ್ನು ಐಸಿಎಂಆರ್ ಆಗಸ್ಟ್ 9ರಂದು ವಿಲೇವಾರಿ ಮಾಡಿದೆ ಎಂದು ಹೇಳಿತ್ತು. ಅಲ್ಲದೆ, ಕೋವಿಡ್ ಲಸಿಕೆ ಅಭಿವೃದ್ಧಿಗೆ ಐಸಿಎಂಆರ್ ಪಿಎಂ ಕೇರ್ಸ್ ನಿಧಿಯಿಂದೆ ಯಾವುದೇ ಹಣಕಾಸಿನ ನೆರವು ಪಡೆದಿಲ್ಲ ಎಂದು ಹೇಳಿತ್ತು. ಪ್ರಧಾನಿ ಮಂತ್ರಿ ಕಾರ್ಯಾಲಯ ಅರ್ಜಿಯನ್ನು ಸೆಪ್ಟಂಬರ್ 10ರಂದು ಪರಿಶೀಲಿಸಿತ್ತು. ಬಾತ್ರಾ ಅವರ ಮನವಿಯನ್ನು ಇತರ ಸಾರ್ವಜನಿಕ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ ಎಂದು ಜೈವಿಕ ತಂತ್ರಜ್ಞಾನ ಇಲಾಖೆ ಆಗಸ್ಟ್ 9ರಂದು ತನ್ನ ಸ್ಟೇಟಸ್ನಲ್ಲಿ ಹೇಳಿತ್ತು. 

ಪಿಎಂಒನ ಅವೈಜ್ಞಾನಿಕ ಪ್ರತಿಕ್ರಿಯೆಗೆ ಪ್ರತಿಯಾಗಿ ಬಾತ್ರಾ ಅವರು 2021 ಸೆಪ್ಟಂಬರ್ 8ರಂದು ಮೊದಲ ಮೇಲ್ಮನವಿ ಸಲ್ಲಿಸಿದ್ದರು. ಎರಡು ದಿನಗಳ ಬಳಿಕ ಕಚೇರಿಯ ಸಿಪಿಐಒ, ಪಿಎಂ ಕೇರ್ಸ್ ನಿಧಿ ಆರ್ಟಿಐ ಕಾಯ್ದೆಯ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು. 2021 ಅಕ್ಟೋಬರ್ 1ರಂದು ಪಿಎಂಒ ಮೇಲ್ಮನವಿ ಪ್ರಾಧಿಕಾರದ ಪೋರ್ಟಲ್ ಮನವಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಿತ್ತು. ಅದೇ ದಿನ ಪಿಎಂಒನ ಸಿಪಿಐಒನಿಂದ ಅವರು ಪತ್ರ ಸ್ವೀಕರಿಸಿದ್ದರು. 

ಅದರಲ್ಲಿ ಕಾಯ್ದೆಯ ಪ್ರಕಾರ ಪಿಎಂ ಕೇರ್ಸ್ ನಿಧಿ ಸಾರ್ವಜನಿಕ ಪ್ರಾಧಿಕಾರ ಅಲ್ಲ. ಆದುದರಿಂದ ಇನ್ನಷ್ಟು ಮಾಹಿತಿಯನ್ನು ನಿಮ್ಮಾಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅರ್ಜಿಯನ್ನು ನೀತಿ ಆಯೋಗಕ್ಕೆ ಹಾಗೂ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ)ಗೆ ಕಳುಹಿಸಿಕೊಡಲಾಗಿದೆ ಎಂದು ಕೂಡ ಬಾತ್ರಾ ಅವರಿಗೆ ಮಾಹಿತಿ ನೀಡಲಾಗಿತ್ತು. ಸೆಪ್ಟಂಬರ್ 14ರಂದು ಸಿಡಿಎಸ್ಸಿಒ ತನ್ನ ವೆಬ್ಸೈಟ್ನಲ್ಲಿ, ಬಾತಾ್ರ ಅರ್ಜಿಗೆ ಮಾಹಿತಿ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News