ಭಾರೀ ಮೊತ್ತದ ಅಕ್ರಮ ಹಣ ವರ್ಗಾವಣೆ ಆರೋಪ: ಬಿಎಸ್‍ವೈ, ಪುತ್ರರು ಸೇರಿ ಎಂಟು ಜನರ ವಿರುದ್ಧ ಎಸಿಬಿಗೆ ದೂರು

Update: 2022-01-19 17:13 GMT
ಫೈಲ್ ಚಿತ್ರ-  ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜ.19: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಮೀನು ಖರೀದಿಯಲ್ಲಿ ಭಾರಿ ಮೊತ್ತದ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಬಳಿಯಿರುವ ಕಪ್ಪು ಹಣವನ್ನು ಮರೆ ಮಾಚುವ ಯತ್ನ ಮಾಡಿದ್ದಾರೆ. ಹಾಗಾಗಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅವರ ಪುತ್ರರು ಸೇರಿ ಎಂಟು ಜನರ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ. ತನಿಖೆ ಹಾದಿ ತಪ್ಪದಂತೆ ಎಚ್ಚರ ವಹಿಸಿ, ಕಾನೂನು ಕ್ರಮ ವಹಿಸಬೇಕು ಎಂದು ಸಾಮಾಜಿಕ ಕಾಯರ್ಕರ್ತ ಟಿ.ಜೆ.ಅಬ್ರಹಾಂ ಆಗ್ರಹಿಸಿದ್ದಾರೆ. 

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಯಲಹಂಕ ಹೋಬಳಿಯ ಗಂಟಿಗಾನಹಳ್ಳಿಯಲ್ಲಿ ಒಟ್ಟು 23.25 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು ಎ. ರಾಮಕೃಷ್ಣ ಖರೀದಿಸಿದ್ದು, ದಯಾನಂದ ಪೈ ಬೇನಾಮಿ ವ್ಯಕ್ತಿಯಿಂದ ಒಟ್ಟು ಹಣದಲ್ಲಿ 10.20 ಕೋಟಿ ರು.ಗಳನ್ನು ಚೆಕ್ ಮೂಲಕ ನೀಡಲಾಗಿದೆ. ಇನ್ನುಳಿದ 20.05 ಕೋಟಿ ರು.ಗಳ ವರ್ಗಾವಣೆಯಲ್ಲಿ ಅಕ್ರಮ ಹಣ ಬಳಕೆ ಮಾಡಲಾಗಿದೆ. ಈ ಅಕ್ರಮ ಹಣದಲ್ಲಿ 9.20 ಕೋಟಿ ರೂ. ರಾಮಕೃಷ್ಣ ಖಾತೆಗೆ ವರ್ಗಾವಣೆ ಮಾಡಿರುತ್ತಾರೆ. ಇನ್ನುಳಿದ 1 ಕೋಟಿ ರು.ಗಳನ್ನು ಸತೀಶ್ ಪೈ ಅವರ ಖಾತೆಗೆ ವರ್ಗಾವಣೆ ಮಾಡಿ, ನಂತರ ಬಿ.ಎಸ್.ಯಡಿಯೂರಪ್ಪ ಒಡೆತನದ ಪ್ರೇರಣಾ ಎಜುಕೇಷನಲ್ ಟ್ರಸ್ಟ್‍ಗೆ ವರ್ಗಾವಣೆ ಮಾಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಜಮೀನು ಖರೀದಿಸಿದ್ದ ಗ್ರಾಮದ ವಿವಿಧ ಸರ್ವೇ ನಂಬರ್‍ಗಳಲ್ಲಿ ಕೇವಲ 8.03 ಎಕರೆ ಮಾತ್ರ ಖರೀದಿ ಮಾಡಲಾಗಿದ್ದರೂ, 9.23 ಎಕರೆ ಜಮೀನನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಹಾಗಾಗಿ 1 ಎಕರೆ 20 ಗುಂಟೆ ಗುಂಡುತೋಪು ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಕ್ರಮ ಕೈಗೊಳ್ಳಬೇಕು. ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿದೆ. ಆದ್ದರಿಂದ ಈ ಪ್ರಕರಣವನ್ನು ಸೂಕ್ತವಾಗಿ ತನಿಖೆ ನಡೆಸಬೇಕು ಅವರು ಮನವಿ ಮಾಡಿದರು.

ಗಂಟಿಗಾನಹಳ್ಳಿಯಲ್ಲಿ ವಿವಿಧ ಸರ್ವೇ ಸಂಖ್ಯೆಗಳಲ್ಲಿ ಫಿರೋಜ್ ಸತ್ತಾರ್ ಎಂಬುವರಿಂದ ಎ. ರಾಮಕೃಷ್ಣ ಎಂಬುವರು 2006ರಲ್ಲಿ ಜಮೀನನ್ನು ಖರೀದಿಸಿದ್ದರು. ಆದರೆ, ಈ ಜಮೀನಿಗೆ ರಾಮಕೃಷ್ಣ ಪರವಾಗಿ ದಯಾನಂದ ಪೈ ದಿನಾಂಕವನ್ನು ನಮೂದಿಸದ ಚೆಕ್ ನೀಡಿರುತ್ತಾರೆ. ಅಲ್ಲದೆ, ಇದೇ ಜಮೀನಿಗೆ 1995ರಲ್ಲಿ ಕ್ರಯ ಆಗಿರುವಂತೆ ಕರಾರು ಪತ್ರಗಳನ್ನು ಕಾರ್ಯಗತಗೊಳಿಸಿರುವಂತೆ ಮಾಡಿದ್ದು, ಜಮೀನನ್ನು ದಯಾನಂದ ಪೈ ಸ್ವಾಧೀನಕ್ಕೆ ನೀಡಿರುತ್ತಾರೆ ಎಂದು ಅವರು ಹೇಳಿದರು.

ಇದನ್ನೆಲ್ಲಾ ಪರಿಶೀಲಿಸಿದಾಗ ರಾಮಕೃಷ್ಣ ದಯಾನಂದ ಪೈ ಬೇನಾಮಿಯಾಗಿದ್ದು, ಈ ಎಲ್ಲ ಬೆಳವಣಿಗೆಗಳು ನಡೆದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ. ಇದಾದ ಬಳಿಕ 2021ರಲ್ಲಿ ಇದೇ ಜಮೀನನ್ನು ದವಳಗಿರಿ ಪ್ರಾಪರ್ಟೀಸ್ ಡೆವಲಪರ್ಸ್ ಖರೀದಿಸಿದೆ. ಈ ಸಂದರ್ಭದಲ್ಲಿ 8.23 ಎಕರೆ ಬದಲಿಗೆ 9.23 ಎಕರೆ ಎಂಬುದಾಗಿ ನೋಂದಣಿ ಮಾಡಿಕೊಂಡಿರುತ್ತಾರೆ. ಇದರಲ್ಲಿ 1.20 ಎಕರೆ ಅಕ್ರಮವಾಗಿ ಪಡೆದುಕೊಂಡಿರುತ್ತಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News