ಶೇ.30ರಷ್ಟು ಜನರು ಆರು ತಿಂಗಳ ಬಳಿಕ ಕೋವಿಡ್ ವಿರುದ್ಧ ಪ್ರತಿರೋಧಕತೆಯನ್ನು ಕಳೆದುಕೊಳ್ಳುತ್ತಾರೆ: ಅಧ್ಯಯನದಲ್ಲಿ ಬಹಿರಂಗ

Update: 2022-01-19 17:33 GMT

ಹೈದರಾಬಾದ್,ಜ.19: ಇಲ್ಲಿಯ ಎಐಜಿ ಹಾಸ್ಪಿಟಲ್ಸ್ ಮತ್ತು ಏಷ್ಯನ್ ಹೆಲ್ತ್‌ಕೇರ್ ಫೌಂಡೇಷನ್ ಜಂಟಿಯಾಗಿ ನಡೆಸಿದ ಮಹತ್ವದ ಸಂಶೋಧನೆಯೊಂದರ ಫಲಿತಾಂಶಗಳನ್ನು ಬುಧವಾರ ಪ್ರಕಟಿಸಿದ್ದು, ಆ್ಯಂಟಿಬಾಡಿ ಅಥವಾ ಪ್ರತಿಕಾಯ ಮಟ್ಟಗಳಿಗೆ ಸಂಬಂಧಿಸಿದಂತೆ ಲಸಿಕೆ ಪ್ರತಿರಕ್ಷೆಯ ದೀರ್ಘಾವಧಿಯ ಬಾಳಿಕೆಯನ್ನು ಈ ಸಂಶೋಧನೆಯಲ್ಲಿ ಮೌಲ್ಯಮಾಪನ ಮಾಡಲಾಗಿದೆ.

ಲಸಿಕೆಯನ್ನು ಪಡೆದುಕೊಂಡವರಲ್ಲಿ ಸುಮಾರು ಶೇ.30ರಷ್ಟು ಜನರು ಆರು ತಿಂಗಳ ಬಳಿಕ 100 ಎಯು/ಎಂಎಲ್‌ನ ರಕ್ಷಣಾತ್ಮಕ ಪ್ರತಿರಕ್ಷೆ ಮಟ್ಟಕ್ಕಿಂತ ಕಡಿಮೆ ಪ್ರತಿಕಾಯ ಮಟ್ಟವನ್ನು ಹೊಂದಿದ್ದು ಈ ಅಧ್ಯಯನದಲ್ಲಿ ಕಂಡುಬಂದಿದೆ.

ಸಂಪೂರ್ಣ ಲಸಿಕೆ ಡೋಸ್‌ಗಳನ್ನು ತೆಗೆದುಕೊಂಡಿದ್ದ 1,636 ಆರೋಗ್ಯ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಈ ಅಧ್ಯಯನವನ್ನು ನಡೆಸಲಾಗಿತ್ತು.

ದೀರ್ಘಾವಧಿಯಲ್ಲಿ ಪ್ರಸ್ತುತ ಲಸಿಕೆಗಳ ಪರಿಣಾಮಕಾರಿತ್ವವನ್ನು ತಿಳಿದುಕೊಳ್ಳುವುದು ಮತ್ತು ಶೀಘ್ರ ಬೂಸ್ಟರ್ ಡೋಸ್ ಪಡೆಯುವುದು ಅಗತ್ಯವಾಗಿರುವ ನಿರ್ದಿಷ್ಟ ಜನಸಂಖ್ಯೆ ವರ್ಗವಿದೆಯೇ ಎನ್ನುವುದನ್ನು ಕಂಡುಕೊಳ್ಳುವುದು ಅಧ್ಯಯನದ ಉದ್ದೇಶವಾಗಿತ್ತು ಎಂದು ಎಐಜಿ ಹಾಸ್ಪಿಟಲ್ಸ್‌ನ ಅಧ್ಯಕ್ಷ ಡಾ.ಡಿ.ನಾಗೇಶ್ವರ ರೆಡ್ಡಿ ವಿವರಿಸಿದರು.

ಅಧ್ಯಯನದಲ್ಲಿ ತೊಡಗಿಕೊಂಡಿದ್ದ ಸಂಶೋಧಕರು 1,636 ವ್ಯಕ್ತಿಗಳಲ್ಲಿ ಸಾರ್ಸ್-ಕೋವ್-2ಗೆ ಐಜಿಜಿ ಆ್ಯಂಟಿ-ಎಸ್1 ಮತ್ತು ಐಜಿಜಿ ಆ್ಯಂಟಿ-ಎಸ್2 ಪ್ರತಿಕಾಯ ಮಟ್ಟಗಳನ್ನು ಅಳೆದಿದ್ದರು.

15 ಎಯು/ಎಂಎಲ್‌ಗಿಂತ ಕಡಿಮೆ ಪ್ರತಿಕಾಯ ಮಟ್ಟಗಳನ್ನು ಹೊಂದಿರುವವರನ್ನು ಪ್ರತಿಕಾಯ ಋಣಾತ್ಮಕರೆಂದು ಪರಿಗಣಿಸಲಾಗುತ್ತದೆ,ಅಂದರೆ ಅವರು ವೈರಸ್‌ನ ವಿರುದ್ಧ ಯಾವುದೇ ರಕ್ಷಣಾತ್ಮಕ ಪ್ರತಿರಕ್ಷೆಯನ್ನು ಬೆಳೆಸಿಕೊಂಡಿರಲಿಲ್ಲ ಎಂದು ಡಾ.ರೆಡ್ಡಿ ತಿಳಿಸಿದರು.

 ವೈರಸ್ ವಿರುದ್ಧ ರಕ್ಷಣೆಗಾಗಿ ಕನಿಷ್ಠ 100 ಎಯು/ಎಂಎಲ್ ಪ್ರತಿಕಾಯ ಮಟ್ಟವನ್ನು ಹೊಂದಿರುವುದು ಅಗತ್ಯವೆಂದು ಅಧ್ಯಯನವು ಅಂದಾಜಿಸಿದೆ. ಇದಕ್ಕಿಂತ ಕಡಿಮೆ ಪ್ರತಿಕಾಯ ಮಟ್ಟವನ್ನು ಹೊಂದಿರುವ ವ್ಯಕ್ತಿಗಳು ಸೋಂಕಿಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು. ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಶೇ.93ರಷ್ಟು ಜನರು ಕೋವಿಶೀಲ್ಡ್,ಶೇ.6.2ರಷ್ಟು ಜನರು ಕೋವ್ಯಾಕ್ಸಿನ್ ಮತ್ತು ಶೇ.1ಕ್ಕೂ ಕಡಿಮೆ ಜನರು ಸ್ಪುಟ್ನಿಕ್ ಲಸಿಕೆಗಳನ್ನು ಪಡೆದಿದ್ದರು.

ಇವರಲ್ಲಿ ಹೆಚ್ಚಿನವರು 40 ವರ್ಷಕ್ಕೆ ಮೇಲಿನವರಾಗಿದ್ದು,ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಇತರ ಅನಾರೋಗ್ಯಗಳನ್ನು ಹೊಂದಿದ್ದರು. ಶೇ.6ರಷ್ಟು ಜನರಲ್ಲಿ ಯಾವುದೇ ಪ್ರತಿರೋಧಕತೆಯು ಅಭಿವೃದ್ಧಿಯಾಗಿರಲೇ ಇಲ್ಲ ಎಂದು ಡಾ.ರೆಡ್ಡಿ ತಿಳಿಸಿದರು.

ಯುವಜನರು ಹಿರಿಯರಿಗಿಂತ ಹೆಚ್ಚು ಸುಸ್ಥಿರ ಪ್ರತಿಕಾಯ ಮಟ್ಟಗಳನ್ನು ಹೊಂದಿರುತ್ತಾರೆ. 40ವರ್ಷಕ್ಕೆ ಮೇಲ್ಪಟ್ಟ,ಇತರ ಅನಾರೋಗ್ಯಗಳನ್ನು ಹೊಂದಿರುವವರು ಲಸಿಕೆಯ ಸಂಪೂರ್ಣ ಡೋಸ್‌ಗಳನ್ನು ಪಡೆದುಕೊಂಡ ಆರು ತಿಂಗಳ ಬಳಿಕ ಗಮನಾರ್ಹವಾಗಿ ಕಡಿಮೆ ಪ್ರತಿರಕ್ಷೆ ಪ್ರತಿಕ್ರಿಯೆಯನ್ನು ಹೊಂದಿರುತ್ತಾರೆ ಎನ್ನುವುದನ್ನು ಸಂಶೋಧನೆಯ ಫಲಿತಾಂಶಗಳು ಸ್ಪಷ್ಟವಾಗಿ ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News