​ಬೆಳ್ಳಾರೆ; ಮಹಿಳೆಯ ಮಾನಭಂಗ ಯತ್ನ ಆರೋಪ: ಪ್ರಕರಣ ದಾಖಲು

Update: 2022-01-20 05:22 GMT

ಸುಳ್ಯ : ಮನೆಗೆ ಅಕ್ರಮ ಪ್ರವೇಶಗೈದು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲ್ತಾಡಿ ಸಮೀಪದ ಮಣಿಕ್ಕರ ಕೊಡ್ಯಕ್ಕ ನಿವಾಸಿ ಅಜಿತ್ ಎಂಬಾತ ಆರೋಪಿ.

ಈತ ಜ.16ರಂದು ರಾತ್ರಿ ಬೆಳ್ಳಾರೆ ವೆಂಕಟರಮಣ ದೇವಸ್ಥಾನದ ಬಳಿ ಇರುವ ಮನೆಯೊಂದಕ್ಕೆ ಪ್ರವೇಶಿಸಿ, ಮನೆಯೊಳಗಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾನೆನ್ನಲಾಗಿದೆ. ಈ ಘಟನೆಯನ್ನು ಬೆಳ್ಳಾರೆ ಠಾಣೆಯಲ್ಲಿ ಮಾತುಕತೆಯ ಮೂಲಕ ರಾಜಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಲಾಯಿತು.

ಅದೇ ವ್ಯಕ್ತಿಯ ವಿರುದ್ಧ ಜ.14ರಂದು ರಾತ್ರಿ ಮಾರ್ಷಲ್ ಡಿಸೋಜ ಎಂಬವರಿಗೆ ಹಲ್ಲೆ ನಡೆಸಿದ ಬಗ್ಗೆ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಜ.16ರಂದು ಮಹಿಳೆಯ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ನಮ್ಮನ್ನು ಮುಂದಕ್ಕೆ ಬೆಳ್ಳಾರೆಯಲ್ಲಿ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಅದರಂತೆ ಅಜಿತ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನೆವಾಣೆ ತಿಳಿಸಿದ್ದಾರೆ.

ಪೊಲೀಸ್ ದೌರ್ಜನ್ಯದ ಆರೋಪ: ವೀಡಿಯೊ ವೈರಲ್ 

ಈ ನಡುವೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿ ಅಜಿತ್ ತನ್ನನ್ನು ಬೆಳ್ಳಾರೆ ಪೊಲೀಸ್ ಠಾಣೆ ಸಿಬ್ಬಂದಿ ಠಾಣೆಗೆ ಕರೆಸಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಿವಿ ರಿಪೇರಿ ಕೆಲಸ ಮಾಡಿಕೊಂಡಿರುವ ತನ್ನನ್ನು ಬೆಳ್ಳಾರೆ ಪೊಲೀಸ್ ಠಾಣೆಯ ಸಿಬ್ಬಂದಿ ಕರೆದೊಯ್ದು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಠಾಣೆಯಲ್ಲಿ ಆ ದಿನದ ಸಿಸಿಟಿವಿ ಕ್ಯಾಮರಾದ ಫೂಟೇಜ್‌ನ್ನು ಪರಿಶೀಲಿಸಿದರೆ ತನ್ನ ಮೇಲೆ ನಡೆದಿರುವ ದೌರ್ಜನ್ಯ ತಿಳಿಯಬಹುದು ಎಂದು ಅಜಿತ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News