ಬೆಂಗಳೂರಿನ ಎಜ್ಯು ಟೆಕ್ ಸ್ಟಾರ್ಟಪ್‌ನಿಂದ ವಿಶ್ವದ ಮೊಟ್ಟಮೊದಲ ನಿಯೊಸ್ಕೂಲ್ !

Update: 2022-01-21 02:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೂಲದ ಎಜ್ಯು ಟೆಕ್ ಸ್ಟಾರ್ಟಪ್ ಕಂಪನಿ ಸ್ಟೇಕ್ಯೂರಿಯಸ್, ವಿಶ್ವದ ಮೊಟ್ಟಮೊದಲ ನಿಯೊಸ್ಕೂಲ್‌ಗೆ ಚಾಲನೆ ನೀಡಿದೆ. ಈ ಶಾಲೆ ಬಳಿಕದ ಆನ್‌ಲೈನ್ ಉಪಕ್ರಮವು ವಿದ್ಯಾರ್ಥಿಗಳು ಸಾಮಾನ್ಯ ಶಾಲೆಗಳಲ್ಲಿ ಕಲಿಯಲು ಸಾಧ್ಯವಾಗದ ಅಂಶಗಳನ್ನು ಕಲಿಸುವ ಉದ್ದೇಶ ಹೊಂದಿದೆ.

ಈ ಉಪಕ್ರಮವು ಮಕ್ಕಳಿಗೆ ದುಬಾರಿ ಇಂಟರ್‌ ನ್ಯಾಷನಲ್ ಸ್ಕೂಲ್‌ಗಳಿಗೆ ಹೋಗದೇ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿದೆ. ಈ ನಿಯೊಸ್ಕೂಲ್‌ನ ಪ್ರಮುಖ ಉದ್ದೇಶವೆಂದರೆ, ಮಕ್ಕಳಿಗೆ ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿ ಬೋಧಿಸದಂಥ ಅಸಂಪ್ರದಾಯಿಕ ವಿಷಯಗಳನ್ನು ಬೋಧಿಸುವುದು.

"ಲಕ್ಷಾಂತರ ಮಂದಿ ಪೋಷಕರು ತಮ್ಮ ಮಕ್ಕಳಿಗೆ ಬೌದ್ಧಿಕ ಕ್ಷೇಮವನ್ನು ಗೌರವಿಸುವ ವಾತಾವರಣದಲ್ಲಿ ಪ್ರಗತಿಪರ ಬೋಧನಾ ವಿಧಾನ ಲಭ್ಯವಾಗಬೇಕು ಎಂದು ಬಯಸುತ್ತಾರೆ ಮತ್ತು ಇದೇ ವೇಳೆ ಅಂಕಗಳಿಗೆ ಸಂಬಂಧಿಸಿದಂತೆ ಅಲ್ಪಾವಧಿ ಪ್ರಯೋಜನಗಳ ಜತೆಯೂ ರಾಜಿ ಮಾಡಿಕೊಳ್ಳಲಾರರು. ಇದಕ್ಕೆ ಅತ್ಯಂತ ಸಮಂಜಸ ಪರಿಹಾರವೆಂದರೆ ಅಂತರರಾಷ್ಟ್ರೀಯ ಮಟ್ಟದ ಶಾಲೆಗಳು; ಆದರೆ ಇದಕ್ಕೆ ಸೇರಲು ಹಲವು ಅಡೆ ತಡೆಗಳಿವೆ" ಎಂದು ಸ್ಟಾರ್ಟಪ್ ಸಂಸ್ಥಾಪಕ ಮತ್ತು ಖಾನ್ ಅಕಾಡಮಿಯ ಮಾಜಿ ವಿಷಯ ಮುಖ್ಯಸ್ಥ ಆನಂದ ಶ್ರೀನಿವಾಸ್ ಹೇಳುತ್ತಾರೆ.

ಈ ಶಾಲೆಯ ಆರಂಭದೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಶಾಲಾ ಶಿಕ್ಷಣವನ್ನು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಒದಗಿಸುವುದು ಮತ್ತು ಕಡಿಮೆ ವೆಚ್ಚದಲ್ಲಿ ಇದು ಕೈಗೆಟುಕುವಂತೆ ಮಾಡುವ ಗುರಿ ಹೊಂದಿರುವುದಾಗಿ ಅವರು ವಿವರಿಸುತ್ತಾರೆ.

ನಿಯತ ಶಾಲಾ ಅವಧಿಯ ಬಳಿಕ ಕೆಲ ಗಂಟೆಗಳ ಕಾಲ ವಿದ್ಯಾರ್ಥಿಗಳು ಈ ನಿಯೊಸ್ಕೂಲ್ ಬೋಧನೆಗೆ ಹಾಜರಾಗ ಬೇಕಾಗುತ್ತದೆ. ಇದು ಮಕ್ಕಳಿಗೆ ತಮ್ಮ ಸಾಮಾಜಿಕ ಮತ್ತು ನೈಜ ಜಗತ್ತಿನ ಕೌಶಲಗಳನ್ನು ಬೆಳೆಸಿಕೊಳ್ಳಲು ನೆರವಾಗಲಿದೆ. ವಿದ್ಯಾರ್ಥಿಗಳು ಒಮ್ಮೆ ಬೋಧಿಸಲ್ಪಟ್ಟ ವಿಷಯಗಳನ್ನೇ ಮತ್ತೆ ಬೋಧಿಸುವ ಟ್ಯೂಷನ್‌ಗೆ ಪರ್ಯಾಯವಾಗಿ ಇಂಥ ತರಗತಿಗೆ ಸೇರಿಕೊಳ್ಳಬಹುದಾಗಿದೆ.

ಇಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವುದು, ತಂಡವಾಗಿ ಕೆಲಸ ಮಾಡುವುದು ಮತ್ತು ಪರಿಣಾಮಕಾರಿ ಸಂವಹನ ಕಲೆಗಳ ಬಗ್ಗೆ ಇಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಜತೆಗೆ ವಿಮರ್ಶಾತ್ಮಕ, ವೈಜ್ಞಾನಿಕ ಮತ್ತು ವಿನ್ಯಾಸ ಯೋಚಜೆ ಹಾಗೂ ಸಮಸ್ಯೆ ಬಗೆಹರಿಸುವ ಕೌಶಲದ ಬಗ್ಗೆಯೂ ಹೇಳಿಕೊಡಲಾಗುವುದು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News