ಮಂಗಳೂರು: ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪದಲ್ಲಿ ದಂಪತಿ ಸೆರೆ

Update: 2022-01-21 10:15 GMT

ಮಂಗಳೂರು : ನಗರದ ಪದವಿನಂಗಡಿಯ ಬಾಡಿಗೆ ಮನೆಯೊಂದಕ್ಕೆ ಪೂಜೆ ನೆಪದಲ್ಲಿ ಪುರೋಹಿತರೊಬ್ಬರನ್ನು ಕರೆಸಿಕೊಂಡು ಹನಿಟ್ರ್ಯಾಪ್ ಗೊಳಪಡಿಸಿ ಸುಮಾರು 49 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಇಬ್ಬರನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮೂಲತ: ಕೊಡಗು ಜಿಲ್ಲೆಯ ಸೋಮವಾರ ಪೇಟೆ ನಿವಾಸಿ ಭವ್ಯ (30) ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕುಮಾರ್ ರಾಜು ಎಂದು ಗುರುತಿಸಲಾಗಿದೆ.

ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಕುಮಾರ್ ರಾಜು ಹಾಗೂ ಭವ್ಯ ನಗರದ ಮೇರಿಹಿಲ್‌ನ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಒಂದರಲ್ಲಿ ಜತೆಯಾಗಿ ವಾಸವಾಗಿದ್ದರೆನ್ನಲಾಗಿದೆ. ಬಂಧಿತರಿಂದ 37,000 ರೂ. ಮೌಲ್ಯದ ಎರಡು ಚ್ನಿದ ರಿಂಗ್, 31,000 ರೂ. ನಗದು, 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯ ಪುರೋಹಿತ ಹಾಗೂ ಜ್ಯೋತಿಷ್ಯ ಶಾಸ್ತ್ರ ವೃತ್ತಿಯ ವ್ಯಕ್ತಿಯೋರ್ವರನ್ನು ಭೇಟಿಯಾಗಿದ್ದ ಈ ಆರೋಪಿಗಳು ತಾವು ದಂಪತಿ ಎಂದು ಹೇಳಿಕೊಂಡು ತಮ್ಮ ಮನೆಯಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಮನೆಯಲ್ಲಿ ಪೂಜೆಯನ್ನು ಮಾಡಿಕೊಡಬೇಕೆಂದು ಪುರೋಹಿತರನ್ನು ಮನೆಗೆ ಕರೆಯಿಸಿಕೊಂಡಿದ್ದರು. ಮನೆಯಲ್ಲಿ ಪುರೋಹಿತರ ಜೊತೆ ಫೋಟೋ ಮತ್ತು ವೀಡಿಯೋವನ್ನು ತೆಗೆದು ನಂತರ ಈ ವೀಡಿಯೋ ಹಾಗೂ ಫೋಟೋವನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹಲವು ಬಾರಿ ಪಿರ್ಯಾದಿದಾರರನ್ನು ಹೆದರಿಸಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತರು ಆರೋಪಿಸಿದ್ದರು. ಸುಮಾರು 15 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಹಾಗೂ 34 ಲಕ್ಷ ರೂಪಾಯಿಗಳನ್ನು ಬೇರೆ ಬೇರೆ ಖಾತೆಗಳಿಂದ ಸಂತ್ರಸ್ತರು ಆರೋಪಿಗಳಿಗೆ ನೀಡಿರುವುದು ಬ್ಯಾಂಕ್ ಖಾತೆ ವರ್ಗಾವಣೆಯಿಂದ ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರಪಡಿಸಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಆರೋಪಿಗಳು ಇನ್ನಷ್ಟು ಹಣಕ್ಕಾಗಿ ಪೊಲೀಸರ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಬೆದರಿಕೆ ಹಾಕಿರುವುದಲ್ಲದೆ ಇನ್ನಷ್ಟು ಹಣವನ್ನು ನೀಡದೇ ಇದ್ದರೆ ಸುದ್ದಿ ಮಾಧ್ಯಮಗಳಲ್ಲಿ ಫೋಟೋ ಮತ್ತು ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಆರೋಪಿಗಳ ಪೈಕಿ ಕುಮಾರ್ ತನ್ನ ಹೆಸರನ್ನು ರಾಜು ಎಂದು ತಿಳಿಸಿ ಮಧ್ಯವರ್ತಿಯಾಗಿ ಫಿರ್ಯಾದಿದಾರರ ಜೊತೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ಲಾನ್ ಮಾಡಿಕೊಂಡು ಹಣ ವಸೂಲಿ ಮಾಡಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್‌ಐ ಯವರಾದ ರಾಜೇಂದ್ರ ಬಿ, ಪ್ರದೀಪ ಟಿ ಆರ್ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು. ಸದ್ಯ ಆರೋಪಿಗಳ ಬಗ್ಗೆ ಈ ಹಿಂದೆ ಈ ರೀತಿಯ ವಂಚನೆ, ಸುಲಿಗೆ ಮಾಡಿರುವ ಆರೋಪ ಕಂಡು ಬಂದಿಲ್ಲ. ಆದರೆ ಆರೋಪಿಗಳ ಈ ಕೃತ್ಯವನ್ನು ಗಮನಿಸಿದಾಗ ಅವರು ಇದೇ ರೀತಿ ಇನ್ನಷ್ಟು ಮಂದಿಯನ್ನು ಹನಿಟ್ರ್ಯಾಪ್ ಗೆ ಒಳಪಡಿಸಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ಮುಂದುವರಿಸಲಾಗುವುದು. ಯಾರಾದರೂ ಈ ರೀತಿ ಸುಲಿಗೆ, ವಂಚನೆಗೆ ಒಳಗಾಗಿದ್ದಲ್ಲಿ ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಆರೋಪಿಗಳಿಂದ ಐಷಾರಾಮಿ ಜೀವನ!

ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನವನ್ನು ಸಾಗಿಸುತ್ತಿದ್ದರು. ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದ ಆರೋಪಿಗಳು ಈ ಕೃತ್ಯವೆಸಗಿದ ನಂತರ ಫಿರ್ಯಾದಿದಾರರಿಂದ ಸುಲಿಗೆ ಮಾಡಿದ ಹಣದಲ್ಲಿ 10 ಲಕ್ಷ ರೂ.ನಲ್ಲಿ ಫ್ಲ್ಯಾಟ್ ಲೀಸ್ ಗೆ ಪಡೆದುಕೊಂಡಿರುವುದಲ್ಲದೇ, ಈ ಫ್ಲ್ಯಾಟ್ ಗೆ ಸುಮಾರು 7 ಲಕ್ಷ ರೂ. ಮೌಲ್ಯದ ಮನೆ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಅಲ್ಲದೇ ಹೊಸ ದ್ವಿಚಕ್ರ ವಾಹನವೊಂದನ್ನು ಖರೀದಿಸಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News