ಅಭಿವೃದ್ಧಿ ದೃಷ್ಟಿಯಿಂದ ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನೀಲ್ ಕುಮಾರ್

Update: 2022-01-21 12:06 GMT
ಸುನೀಲ್ ಕುಮಾರ್

ಬೆಂಗಳೂರು, ಜ.21: ‘ಭವಿಷ್ಯದಲ್ಲಿ ಇಂಧನ ಇಲಾಖೆ ಸದೃಢಗೊಳಿಸಲು ಹಾಗೂ ಮಾರ್ಗಗಳ ಆಧುನಿಕರಣ ಮತ್ತು ಅಭಿವೃದ್ಧಿ ದೃಷ್ಟಿಯಿಂದ ವಿದ್ಯುತ್ ದರ ಏರಿಕೆ ಮಾಡುವುದು ಅನಿವಾರ್ಯ' ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೂರು ದಿನಗಳ ಸಾಧನೆ ಕುರಿತ ‘ಸ್ಪಷ್ಟ ಗುರಿ ಸಾರ್ಥಕ ಹಾದಿ ಮತ್ತು ಕಲರವ' ಕಿರು ಪುಸ್ತಕ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಹೊಸ ಉಪ ವಿಭಾಗಗಳ ನಿರ್ಮಾಣ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದು ಅನಿವಾರ್ಯವಾಗಿದೆ' ಎಂದು ವಿವರಣೆ ನೀಡಿದರು.

‘ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ) ಒಪ್ಪಿಗೆ ನೀಡಿದ ಬಳಿಕ ವಿದ್ಯುತ್ ವಿತರಣಾ ಕಂಪೆನಿಗಳು ದರ ಪರಿಷ್ಕರಣೆ ಮಾಡಲಿವೆ. ಇಂಧನ ಇಲಾಖೆ ಎಲ್ಲವನ್ನು ಭರಿಸಲು ಸಾಧ್ಯವಿಲ್ಲ' ಎಂದ ಅವರು, ‘ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 4ಸಾವಿರ ಕೋಟಿ ರೂ.ಸೇರಿದಂತೆ ಜಲ ಮಂಡಳಿ, ನಗರಾಭಿವೃದ್ಧಿ, ಜಲಸಂಪನ್ಮೂಲ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ 12ಸಾವಿರ ಕೋಟಿ ರೂ.ವಿದ್ಯುತ್ ಬಿಲ್ ಬಾಕಿ ಬರಬೇಕಿದ್ದು, ಶೀಘ್ರದಲ್ಲೆ ಬಾಕಿ ಹಣ ಕೊಡಿಸಲು ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ' ಎಂದರು.

ಬೇಸಿಗೆಯಲ್ಲಿ ಸಮಸ್ಯೆ ಇಲ್ಲ: ‘ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ಇಲ್ಲ. ಅಲ್ಲದೆ, ಉತ್ತಮ ಮಳೆಯಾಗಿದ್ದು ಜಲಾಶಯಗಳಲ್ಲಿ ನೀರಿನ ಸಂಗ್ರಹವಿದ್ದು, ಈ ಬಾರಿಯ ಬೇಸಿಗೆಯಲ್ಲಿ ಯಾವುದೇ ಸಂದರ್ಭದಲ್ಲಿಯೂ ವಿದ್ಯುತ್ ಸಮಸ್ಯೆ ಆಗುವುದಿಲ್ಲ. ಒಟ್ಟು 15 ಸಾವಿರ ಮೆ.ವ್ಯಾಟ್‍ನಷ್ಟು ವಿದ್ಯುತ್ ಬೇಡಿಕೆ ಇದ್ದು, ಅದನ್ನು ಸರಿದೂಗಿಸಲಾಗುವುದು' ಎಂದು ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.

‘ಟ್ರಾನ್ಸ್‍ಫಾರ್ಮರ್ ಗಳು ಸುಟ್ಟು ಹೋದರೆ 24ಗಂಟೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಟಿಸಿಗಳು ಸುಟ್ಟು ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ ಕೇವಲ 30 ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಶಾಲೆ-ಕಾಲೇಜುಗಳ ಆವರಣದಲ್ಲಿನ ವಿದ್ಯುತ್‍ಕಂಬ ಮತ್ತು ಮಾರ್ಗಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ' ಎಂದು ಅವರು ತಿಳಿಸಿದರು.

‘ರಾಜ್ಯದಲ್ಲಿ ಇಂಧನ ಇಲಾಖೆಯಲ್ಲಿ ಖಾಲಿ ಇದ್ದ 1,872 ಕಿರಿಯ ಪವರ್ ಮ್ಯಾನ್ ಮತ್ತು ಕಿರಿಯ ಪರಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಆಯ್ಕೆ ಪಟ್ಟಿ ಪ್ರಕಟವಾಗಿದೆ. ಇನ್ನೂ 15 ದಿನಗಳಲ್ಲಿ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುವುದು' ಎಂದು ಸುನೀಲ್ ಕುಮಾರ್ ಮಾಹಿತಿ ನೀಡಿದರು.

ವರಿಷ್ಠರ ತೀರ್ಮಾನಕ್ಕೆ ಬದ್ಧ

‘ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟದ್ದು. ಪುನಾರಚನೆ ಅಥವಾ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಗಳಿಗೆ ನಾನು ಬದ್ಧ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ'

-ವಿ.ಸುನೀಲ್ ಕುಮಾರ್ ಇಂಧನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News