ಪ್ಲುಟೊಗೆ ಪುನಃ ಗ್ರಹದ ಸ್ಥಾನಮಾನ ಸಿಗಬಹುದೇ?

Update: 2022-01-23 07:07 GMT

1930ರಿಂದ ಗ್ರಹ ಎಂದು ಪರಿಗಣಿಸಲ್ಪಟ್ಟಿದ್ದ ನಮ್ಮ ಸೌರವ್ಯೆಹದ ಪ್ಲುಟೊವನ್ನು 2006ರಲ್ಲಿ ಗ್ರಹದ ಸ್ಥಾನಮಾನದಿಂದ ಕೆಳಗಿಳಿಸಲಾಯಿತು. ಅಂತರ್‌ರಾಷ್ಟ್ರೀಯ ಖಗೋಳ ಒಕ್ಕೂಟವು (IAU) ಅದೊಂದು ಕುಬ್ಜ ಗ್ರಹ ಎಂದು ಹೇಳಿಕೆ ನೀಡುವ ಮೂಲಕ ಪ್ಲುಟೊವನ್ನು ಸೌರವ್ಯೆಹದ ಒಂಭತ್ತನೇ ಗ್ರಹದಿಂದ ಕೆಳಗಿಳಿಸಲಾಯಿತು. ಪ್ಲುಟೊವನ್ನು ಈಗ ‘ಮೈನರ್ ಪ್ಲಾನೆಟ್ 134340 ಪ್ಲುಟೊ’ ಎಂದು ಕರೆಯಲಾಗುತ್ತದೆ. ಪ್ಲುಟೊದ ಅಸ್ತಿತ್ವವನ್ನು ಮೊದಲು 20ನೇ ಶತಮಾನದ ಆರಂಭದಲ್ಲಿ ಪರ್ಸಿವಲ್ ಲೋವೆಲ್ ಪ್ರಸ್ತಾಪಿಸಿದರು. ಅವರ ಲೆಕ್ಕಾಚಾರಗಳು ಯುರೇನಸ್ ಮತ್ತು ನೆಪ್ಚೂನ್‌ನ ಕಕ್ಷೆಗಳಲ್ಲಿನ ಕಂಪನಗಳು ಅಪರಿಚಿತ ಒಂಭತ್ತನೇ ಗ್ರಹದ ಗುರುತ್ವಾಕರ್ಷಣೆಯಿಂದ ಉಂಟಾಗಬೇಕು ಎಂದು ತೋರಿಸಿತು. ನಂತರ ಪ್ಲುಟೊ ಕುರಿತು ಒಂದು ದಶಕದವರೆಗೆ ನಡೆದ ಅಧ್ಯಯನಗಳಿಂದ ಅಂದರೆ ಮಾರ್ಚ್ 13, 1930 ರಂದು ಖಗೋಳಶಾಸ್ತ್ರಜ್ಞ ಕ್ಲೈಡ್ ಡಬ್ಲ್ಯೂ. ಟೊಂಬಾಗ್ ಅವರು ಅರಿಜೋನಾದ ಫ್ಲಾಗ್‌ಸ್ಟಾಫ್‌ನಲ್ಲಿರುವ ಲೋವೆಲ್ ವೀಕ್ಷಣಾಲಯದಲ್ಲಿ ಇದೊಂದು ಗ್ರಹ ಎಂದು ದೃಢಪಡಿಸಿದರು.

ಅಂದಿನಿಂದ ಪ್ಲೂಟೊ ನಮ್ಮ ಸೌರವ್ಯೆಹದ ಒಂಭತ್ತನೇ ಗ್ರಹವಾಯಿತು. 21ನೇ ಶತಮಾನದ ಆರಂಭದಲ್ಲಿ, ಖಗೋಳಶಾಸ್ತ್ರಜ್ಞರು ಪ್ಲುಟೊವನ್ನು ಮೀರಿದ ಗಾತ್ರದ ಆಕಾಶಕಾಯಗಳನ್ನು ಕಂಡುಹಿಡಿಯುತ್ತಿದ್ದರು, ಉದಾಹರಣೆಗೆ ಸೆಡ್ನಾ, ಎರಿಸ್, ಮೇಕ್ಮೇಕ್ ಮುಂತಾದವು. ಅಂತರಿಕ್ಷ ಹಾಗೂ ಸೌರವ್ಯೆಹದಲ್ಲಿನ ನಿರಂತರ ಅ್ಯಯನ ಹಾಗೂ ವೀಕ್ಷಣೆಗಳ ಫಲವಾಗಿ ಖಗೋಳಶಾಸ್ತ್ರಜ್ಞರು ‘2003ಯುಬಿ313’ ಅನ್ನು ಕಂಡುಹಿಡಿದರು. ಇದನ್ನು ‘ಎರಿಸ್’ ಎಂದೂ ಕರೆದರು. ಇದು ಪ್ಲುಟೊದಂತೆಯೇ ದೊಡ್ಡದಾಗಿದ್ದು, ಪ್ಲುಟೊಗಿಂತ ಹೆಚ್ಚು ದ್ರವ್ಯರಾಶಿಯನ್ನು ಹೊಂದಿದೆ.

ಎರಿಸ್‌ನ ಆವಿಷ್ಕಾರವು ಖಗೋಳಶಾಸ್ತ್ರಜ್ಞರಲ್ಲಿ ಉರಿಯುತ್ತಿರುವ ಚರ್ಚೆಯನ್ನು ಹುಟ್ಟುಹಾಕಿತು. ಪ್ಲುಟೊ ಒಂದು ಗ್ರಹವಾಗಿದ್ದರೆ, ಎರಿಸ್ ಕೂಡ ಗ್ರಹವಾಗಿರಬೇಕು ಎಂಬ ಚರ್ಚೆ ಶುರುವಾಯಿತು. ಅಂತಿಮವಾಗಿ, IAU ಗ್ರಹಕ್ಕೆ ಇರಬೇಕಾದ ಮಾನದಂಡಗಳನ್ನು ರೂಪಿಸಿತು. ಹೊಸ ಮಾನದಂಡಗಳ ಪ್ರಕಾರ ಎರಡನ್ನೂ ಕುಬ್ಜ ಗ್ರಹಗಳೆಂದು ವರ್ಗೀಕರಿಸಲಾಯಿತು. ಮೂಲಭೂತವಾಗಿ, ಒಂದು ಗ್ರಹವು ಹೀಗೆ ಮಾಡಬೇಕು ಎಂದು IAU ಹೇಳುತ್ತದೆ. ಒಂದು ಗ್ರಹವನ್ನು ಗೊತ್ತುಪಡಿಸಲು ಆಕಾಶಕಾಯವು ಮೂರು ಅವಶ್ಯಕತೆಗಳನ್ನು ಪೂರೈಸಬೇಕು. ಮೊದಲನೆಯದಾಗಿ ಅದು ಸೂರ್ಯನ ಸುತ್ತ ಸ್ಥಿರವಾದ ಕಕ್ಷೆಯನ್ನು ಸ್ಥಾಪಿಸಬೇಕು. ಈಗಾಗಲೇ ಸಾವಿರಾರು ಆಕಾಶಕಾಯಗಳು ತಮ್ಮದೇ ಕಕ್ಷೆಯನ್ನು ಸ್ಥಾಪಿಸಿಕೊಂಡಿವೆ. ಎರಡನೆಯದಾಗಿ ಆಕಾಶಕಾಯವು ಗೋಳಾಕಾರದ ಆಕಾರವನ್ನು ಹೊಂದಿರಬೇಕು. ಇಂತಹ ಅದೆಷ್ಟೋ ಆಕಾಶಕಾಯಗಳು ಅಂತರಿಕ್ಷದಲ್ಲಿವೆ. ಆಕಾಶಕಾಯದ ಗಾತ್ರವು ಬೃಹತ್ ಪ್ರಮಾಣದಲ್ಲಿದ್ದಾಗ, ಗುರುತ್ವಾಕರ್ಷಣೆಯು ಅದನ್ನು ಗೋಳಾಕಾರದಂತೆ ರೂಪಿಸುತ್ತದೆ. ಪ್ಲುಟೊ ಈ ಸ್ಥಿತಿಯನ್ನು ಪೂರೈಸುತ್ತದೆ. ಮೂರನೆಯದಾಗಿ ಆಕಾಶಕಾಯವು ತನ್ನ ಶಿಲಾಖಂಡರಾಶಿಗಳ ಕ್ಷೇತ್ರವನ್ನು ತೆರವುಗೊಳಿಸಬೇಕು. ತನ್ನ ಎಲ್ಲಾ ಸಮೀಪದ ವಸ್ತುಗಳನ್ನು ಅದರೊಳಗೆ ಸೇರಿಸಲು ಇದು ಸಾಕಷ್ಟು ಬೃಹತ್ ಪ್ರಮಾಣದಲ್ಲಿರಬೇಕು. ಪ್ಲುಟೊ ಈ ಸ್ಥಿತಿಯಲ್ಲಿ ವಿಫಲಗೊಂಡಿದೆ. ಏಕೆಂದರೆ ಅದರ ಕಕ್ಷೆಯು ಕೈಪರ್ ಬೆಲ್ಟ್‌ನ ಹತ್ತಿರ ಅಥವಾ ಅದರೊಳಗೆ ಹಾದುಹೋಗುತ್ತದೆ. ಇದು ಅಲ್ಪಾವಧಿಯ ಧೂಮಕೇತುಗಳು ಹುಟ್ಟುವ ಪ್ರದೇಶವಾಗಿದೆ. ಪ್ಲುಟೊ ಮೂರನೇ ಅಂಶವನ್ನು ಹೊಂದಿಲ್ಲ ಎಂಬ ಕಾರಣಕ್ಕೆ ಆಗಸ್ಟ್ 2006ರಲ್ಲಿ, ಪ್ಲುಟೊವನ್ನು ಇನ್ನು ಮುಂದೆ ಗ್ರಹವೆಂದು ಪರಿಗಣಿಸಲಾಗುವುದಿಲ್ಲ, ಇದು ಕೇವಲ ಒಂದು ಕುಬ್ಜಗ್ರಹ ಎಂದು IAU ತೀರ್ಪು ನೀಡಿತು ಮತ್ತು ಅದನ್ನು ಗ್ರಹಳ ಪಟ್ಟಿಯಿಂದ ಹೊರಹಾಕಲಾಯಿತು.

IAU ಗ್ರಹದ ವ್ಯಾಖ್ಯಾನವನ್ನು ಅನೇಕರು ಟೀಕಿಸಿದರು. ಮಾನದಂಡಗಳು ಅನಿಯಂತ್ರಿತವಾಗಿವೆ ಎಂದು ಹೇಳಿಕೊಂಡರು. ಈ ಕುರಿತು ನಾಸಾ ನಿರ್ವಾಹಕ ಜಿಮ್ ಬ್ರಿಡೆನ್‌ಸ್ಟೈನ್, 2019 ರ ಅಂತರ್‌ರಾಷ್ಟ್ರೀಯ ಆಸ್ಟ್ರೋನಾಟಿಕಲ್ ಕಾಂಗ್ರೆಸ್‌ನ ಮುಖ್ಯ ಭಾಷಣದಲ್ಲಿ ಹೀಗೆ ಹೇಳಿದರು: ‘‘ನಾಸಾ ನಿರ್ವಾಹಕನಾಗಿ ನಾನು ನಿಮಗೆ ಹೇಳಲು ಇಲ್ಲಿದ್ದೇನೆ. ಈಗಲೂ ಪ್ಲುಟೊ ಒಂದು ಗ್ರಹ ಎಂದು ನಾನು ನಂಬುತ್ತೇನೆ’’ ಎಂದು ಹೇಳಿದರು. ಗ್ರಹದ ವ್ಯಾಖ್ಯಾನ ಕುರಿತ ಮೂರನೇ ಅಂಶವನ್ನು ಮರು ಪರಿಶೀಲಿಸುವ ಬಗ್ಗೆ ಉಲ್ಲೇಖಿಸಿದರು. ‘‘ಇದು ಅವ್ಯವಸ್ಥೆಯ ವ್ಯಾಖ್ಯಾನ ಎಂದು ನಾನು ಭಾವಿಸುತ್ತೇನೆ’’ ಎಂದು ಬ್ರಿಡೆನ್‌ಸ್ಟೈನ್ ಹೇಳಿದರು. ‘‘ನೀವು ಗ್ರಹವನ್ನು ವ್ಯಾಖ್ಯಾನಿಸಬೇಕಾದ ವಿಧಾನವು ಅದರ ಆಂತರಿಕ ಮೌಲ್ಯವನ್ನು ಆಧರಿಸಿದೆ ಎಂದು ನಾನು ಭಾವಿಸುತ್ತೇನೆ. ಕಕ್ಷೀಯ ಡೈನಾಮಿಕ್ಸ್‌ನಂತೆ ನಿರಂತರವಾಗಿ ಬದಲಾಗುವ ಮೌಲ್ಯಗಳಲ್ಲ.’’

ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾನಿಲಯದ ಪ್ಲಾನೆಟರಿ ಸೈನ್ಸ್ ಅಧ್ಯಾಪಕರಾದ ಫಿಲಿಪ್ ಮೆಟ್ಜ್‌ಗರ್ ಬ್ರಿಡೆನ್‌ಸ್ಟ್ಟೈನ್ ಅವರ ನಿಲುವನ್ನು ಬೆಂಬಲಿಸಿದ್ದಾರೆ. ಫಿಲಿಪ್ ಮೆಟ್ಜ್‌ಗರ್ ನೇತೃತ್ವದ ಸಂಶೋಧಕರ ತಂಡವು ಇಕಾರ್ಸ್ ಜರ್ನಲ್‌ನ 2019ರ ಆವೃತ್ತಿಯಲ್ಲಿ ಪ್ರಕಟವಾದ ಲೇಖನದಲ್ಲಿ ಅದನ್ನು ಸಾಬೀತುಗೊಳಿಸಿದ್ದಾರೆ. ಪ್ಲುಟೊವನ್ನು ಗ್ರಹ ಪಟ್ಟಯಿಂದ ಕೈಬಿಡಲು ಕೆಲವರು ಮಾಡಿದ ಕಿತಾಪತಿ ಎಂಬುದು ಸ್ಪಷ್ಟ. 2006ರಲ್ಲಿ IAU ತನ್ನ ಹೊಸ ನಿಯಮಗಳಿಗೆ ಅಂಟಿಕೊಳ್ಳದಿದ್ದರೆ, ಈಗ ಸೌರವ್ಯೆಹದಲ್ಲಿ ಕನಿಷ್ಠ 13 ಗ್ರಹಗಳನ್ನು ಹೊಂದಿರುತ್ತಿದ್ದವು ಎಂಬುದು ಸ್ಪಷ್ಟವಾಗಿದೆ. ಗ್ರಹ ಮತ್ತು ಕ್ಷುದ್ರಗ್ರಹಗಳ ಕುರಿತ ಅನೇಕ ತತ್ವ, ಸಿದ್ಧಾಂತಗಳು ನಮ್ಮ ಮುಂದಿವೆ. ಆದರೆ ಪ್ಲುಟೊವನ್ನು ಗ್ರಹಗಳ ಪಟ್ಟಿಯಿಂದ ಕೈಬಿಟ್ಟ ಪದ್ಧತಿ ಸರಿಯಿರಲಿಲ್ಲ ಎಂಬುದನ್ನು ಬಹುತೇಕ ಖಗೋಳಶಾಸ್ತ್ರಜ್ಞರ ಆರೋಪ. ಭೌಗೋಳಿಕ ಕಾರಣ ನೀಡಿ ಗ್ರಹಗಳ ಪಟ್ಟಿಯಿಂದ ಕೈಬಿಟ್ಟಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಇದನ್ನು ಮತದಾನದ ಮೂಲಕ ಅಲ್ಲಗಳೆದದ್ದು ಬಹುತೇಕರಿಗೆ ಸರಿ ಕಾಣಲಿಲ್ಲ. ಅದನ್ನು ಮೆಟ್ಜಗರ್ ಈ ರೀತಿ ಹೇಳುತ್ತಾರೆ. ‘‘IAU ಹಲವಾರು ಆಳವಾದ ತಪ್ಪುಗಳನ್ನು ಮಾಡಿದೆ ಎಂದು ನಾನು ನಂಬುತ್ತೇನೆ ಮತ್ತು ಆದ್ದರಿಂದ ವ್ಯಾಖ್ಯಾನವು ಮಾನ್ಯವಾಗಿಲ್ಲ ಹಾಗೂ ವೈಜ್ಞಾನಿಕವಾಗಿ ಉಪಯುಕ್ತವಲ್ಲ ಮತ್ತು ತಿರಸ್ಕರಿಸಬೇಕು. ಮೊದಲನೆಯದಾಗಿ, ಗ್ರಹದಂತಹ ವರ್ಗೀಕರಣದ ಪರಿಕಲ್ಪನೆಗಳಿಗೆ ವ್ಯಾಖ್ಯಾನಗಳನ್ನು ಎಂದಿಗೂ ಮತಕ್ಕೆ ಹಾಕಬಾರದು. ಏಕೆಂದರೆ ಟ್ಯಾಕ್ಸಾನಮಿ ವಿಜ್ಞಾನದ ಅವಿಭಾಜ್ಯ ಅಂಗವಾಗಿ ವಿಕಸನಗೊಳ್ಳಬೇಕು ಮತ್ತು ಅಭಿವೃದ್ಧಿಪಡಿಸಬೇಕು. ನಿರ್ದಿಷ್ಟ ಟ್ಯಾಕ್ಸಾನಮಿಕಲ್ ಆಯ್ಕೆಯ ಮೇಲೆ ಮತ ಹಾಕುವ ಮೂಲಕ ಅವರು ವೈಜ್ಞಾನಿಕ ಪ್ರಕ್ರಿಯೆಯ ಆ ಭಾಗವನ್ನು ಮುಚ್ಚುತ್ತಾರೆ. ಆದ್ದರಿಂದ ಇಡೀ ಮತವು ವಿಜ್ಞಾನ್ಕೆ ವಿರುದ್ಧವಾಗಿತ್ತು’’ ಎನ್ನುತ್ತಾರೆ.

‘‘1950ರ ದಶಕದಲ್ಲಿ, ಗ್ರಹಗಳ ರಚನೆಯ ಸಿದ್ಧಾಂತದಲ್ಲಿನ ಬೆಳವಣಿಗೆಗಳು ಕ್ಷುದ್ರಗ್ರಹಗಳು ಮತ್ತು ಗ್ರಹಗಳ ನಡುವೆ ಟ್ಯಾಕ್ಸಾನಮಿಕ್ ಗುರುತನ್ನು ನಿರ್ವಹಿಸಲು ಇನ್ನು ಮುಂದೆ ಉಪಯುಕ್ತವಲ್ಲ ಎಂದು ಕಂಡುಕೊಂಡರು, ಸೆರೆಸ್ ಪ್ರಾಥಮಿಕ ಅಪವಾದವಾಗಿದೆ. ಸರಿಸುಮಾರು ಅದೇ ಸಮಯದಲ್ಲಿ, ಕ್ಷುದ್ರಗ್ರಹಗಳ ಭೌಗೋಳಿಕ ಸ್ವರೂಪದ ಕುರಿತು ಪ್ರಕಟಣೆಗಳ ಪ್ರವಾಹವು ದೊಡ್ಡ ಗ್ರಹಗಳಿಗಿಂತ ಭೌಗೋಳಿಕವಾಗಿ ವಿಭಿನ್ನವಾಗಿದೆ ಎಂದು ತೋರಿಸುತ್ತದೆ. ಗ್ರಹಗಳೆಂದು ಕರೆಯುವ ಕ್ಷುದ್ರಗ್ರಹ ಪ್ರಕಟಣೆಗಳಲ್ಲಿನ ಪರಿಭಾಷೆಯು 1801-1957ರ ಅವಧಿಯಲ್ಲಿ ಉನ್ನತ ಮಟ್ಟದ ಬಳಕೆಯಿಂದ ಥಟ್ಟನೆ ಕುಸಿದು ನಂತರ ಸ್ಥಿರವಾಗಿ ಕಡಿಮೆ ಮಟ್ಟಕ್ಕೆ ಇಳಿಯಿತು’’ ಎಂದು ವಿಜ್ಞಾನಿಗಳು ಬರೆದಿದ್ದಾರೆ.

ಪರಿಣಾಮವಾಗಿ ಕ್ಷುದ್ರಗ್ರಹಗಳನ್ನು ಅವುಗಳ ಭೌಗೋಳಿಕ ಗುಣಲಕ್ಷಣಗಳ ಆಧಾರದ ಮೇಲೆ ಗ್ರಹಗಳಲ್ಲದವುಗಳಾಗಿ ಮರುವರ್ಗೀಕರಿಸಲಾಯಿತು. ವಿಸ್ತರಣೆಯ ಮೂಲಕ, ಎಲ್ಲಾ ಆಕಾಶಕಾಯಗಳನ್ನು ಅವುಗಳ ಭೌಗೋಳಿಕ ಗುಣಲಕ್ಷಣಗಳಿಂದ ವರ್ಗೀಕರಿಸಬೇಕು ಮತ್ತು ಫಲಕದಿಂದ ಮತದಾನದ ಮೂಲಕ ನಿರಂಕುಶವಾಗಿ ಅಲ್ಲ ಎಂಬುದು ಮೆಟ್ಜಗರ್ ಅವರ ವಾದ.

ಗ್ರಹ ಮತ್ತು ಆಕಾಶಕಾಯಗಳ ಟ್ಯಾಕ್ಸಾನಮಿ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಕೆಲ ಜನರು ಸೂರ್ಯ ಮತ್ತು ಚಂದ್ರನನ್ನು ಇನ್ನೂ ಗ್ರಹಗಳೆಂದು ಭಾವಿಸಿದ್ದಾರೆ. ಅಲ್ಲದೆ ಇಲ್ಲದೇ ಇರುವ ರಾಹು ಮತ್ತು ಕೇತುಗಳು ಗ್ರಹ ಎಂದುಕೊಂಡಿರುವುದು ದುರಂತ. ಮಾತ್ರವಲ್ಲದೆ ಭೂಮಿಯೇ ಕೇಂದ್ರ ಎಂದು ನಂಬುವ ಜನ ಇನ್ನೂ ಇದ್ದಾರೆ. ಹಾಗಾಗಿ ಜನರಿಗೆ ಗ್ರಹ, ಉಪಗ್ರಹ, ಆಕಾಶಕಾಯಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಾದ ಅಂತರ್‌ರಾಷ್ಟ್ರೀಯ ಖಗೋಳ ಒಕ್ಕೂಟ ಜನರನ್ನು ದಾರಿ ತಪ್ಪಿಸುತ್ತಿರುವುದು ಎಷ್ಟು ಸರಿ ಎಂದು ಕೆಲ ಖಗೋಳಶಾಸ್ತ್ರಜ್ಞರು ವಾದಿಸುತ್ತಿದ್ದಾರೆ. ‘‘ಸಾರ್ವಜನಿಕರಿಗೆ ಈ ಸತ್ಯದ ಬಗ್ಗೆ ಇನ್ನೂ ತಿಳಿದಿಲ್ಲವಾದರೂ, ಗ್ರಹಗಳ ವಿಜ್ಞಾನಿಗಳು ಉಪಗ್ರಹಗಳನ್ನು ಗ್ರಹ ಎಂದು ಉಲ್ಲೇಖಿಸುತ್ತಿದ್ದಾರೆ ಎಂಬುದು ನಿಜ. ಟೈಟಾನ್ ಉಪಗ್ರಹವು ಗ್ರಹಕ್ಕೆ ಇರುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ತಿರುಳು, ಹೊರಪದರ, ತ್ರಿಜ್ಯ ಇತ್ಯಾದಿಗಳನ್ನು ಹೊಂದಿದೆ ಎಂದು ನಾವು ಹೇಳುತ್ತೇವೆ. ಏಕೆಂದರೆ ಅವು ಗ್ರಹಗಳ ಲಕ್ಷಣಗಳಾಗಿವೆ. ಉಪಗ್ರಹವಾಗಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಈ ವಿಷಯಗಳನ್ನು ಹೊಂದಿರುವುದು ಗ್ರಹಗಳ ವಿಶಿಷ್ಟ ಲಕ್ಷಣವಾಗಿದ್ದರೆ ಮತ್ತು ಪ್ರಾಥಮಿಕ ಮತ್ತು ದ್ವಿತೀಯ ಕಕ್ಷೆಗಳಲ್ಲಿರುವ ದೇಹಗಳು ಸಮಾನವಾಗಿ ಹೊಂದಿದ್ದರೆ, ನಾವು ಗ್ರಹಗಳು ಎಂದು ಹೇಳಿದಾಗ ಪ್ರತಿ ಬಾರಿಯೂ ನಾವು ಅಂಗೀಕರಿಸುತ್ತೇವೆ, ಆಕಾಶಕಾಯವು ಹೊಂದಿರುವ ಕಕ್ಷೆಯ ಪ್ರಕಾರವು ಅದು ಗ್ರಹವೋ ಅಲ್ಲವೋ ಅಪ್ರಸ್ತುತವಾಗುತ್ತದೆ’’ ಎನ್ನುತ್ತಾರೆ ಬ್ರಿಡೆನ್‌ಸ್ಟ್ಟೈನ್.

ಪ್ಲುಟೊವನ್ನು ಪೂರ್ಣ ಪ್ರಮಾಣದ ಗ್ರಹವಾಗಿ ಮರುಸ್ಥಾಪಿಸಿದರೆ, ಇತರ ನಾಲ್ಕು ಕುಬ್ಜ ಗ್ರಹಗಳು ಸಹ ಈ ಪಟ್ಟಿಗೆ ಸೇರಬೇಕು, ಸೌರವ್ಯೆಹದ ಒಟ್ಟು ಗ್ರಹಗಳ ಸಂಖ್ಯೆಯನ್ನು 13ಕ್ಕೆ ತರಬೇಕು. ಆದಾಗ್ಯೂ, ವೈಜ್ಞಾನಿಕ ವರ್ಗೀಕರಣದ ಮೂಲಕ ಗ್ರಹವನ್ನು ರೂಪಿಸುವ ಮೆಟ್ಜಗರ್ ಪ್ರಕಾರ ನಮ್ಮ ಸೌರವ್ಯೆಹದಲ್ಲಿ ಕನಿಷ್ಠ 150 ಗ್ರಹಗಳು ಇರಬೇಕು. ‘‘ಅದರಲ್ಲಿ ಹೆಚ್ಚಿನ ಉಪಗ್ರಹಗಳು ಕೂಪರ್ ಬೆಲ್ಟ್‌ನಲ್ಲಿವೆ. ಕ್ಷುದ್ರಗ್ರಹ ಪಟ್ಟಿಯಲ್ಲಿರುವ ಸೆರೆಸ್ ಕೂಡ ಒಂದು ಗ್ರಹವಾಗುತ್ತದೆ. ಆದರೆ ದೊಡ್ಡ ಉಪಗ್ರಹಗಳು ಗ್ರಹಗಳಾಗುತ್ತವೆ’’ ಎಂದು ಅವರು ಹೇಳಿದರು.

ಕಳೆದ ವರ್ಷ, ಖ್ಯಾತ ಖಗೋಳ ಶಾಸ್ತ್ರಜ್ಞ ಸ್ಟರ್ನ್ ಅವರು ವಾಶಿಂಗ್ಟನ್‌ನ ಫಿಲಾಸಫಿಕಲ್ ಸೊಸೈಟಿಗಾಗಿ ಆನ್‌ಲೈನ್ ಚರ್ಚೆಯನ್ನು ಆಯೋಜಿಸಿದರು. ಇದರಲ್ಲಿ ಅವರು ಪ್ಲುಟೊವನ್ನು ಗ್ರಹವಾಗಿ ಮರುಸ್ಥಾಪಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಮತ ಚಲಾಯಿಸುವಂತೆ ಜನರನ್ನು ಕೇಳಿದರು. ಮತದಾನವನ್ನು ತೆರೆಯುವ ಮೊದಲು, ಗ್ರಹವನ್ನು ಅದರ ಭೌಗೋಳಿಕ ಗುಣಲಕ್ಷಣಗಳಿಂದ ವ್ಯಾಖ್ಯಾನಿಸಬೇಕು ಎಂಬ ತಮ್ಮ ವಾದವನ್ನು ಸ್ಟರ್ನ್ ವಿವರಿಸಿದರು. ಒಂದು ಆಕಾಶಕಾಯವು ಸುಮಾರು ದುಂಡಗಿನ ಆಕಾರವನ್ನು ಪಡೆದುಕೊಳ್ಳುವಷ್ಟು ದೊಡ್ಡದಾದರೆ ನಕ್ಷತ್ರದಂತೆ ಅದರ ಒಳಭಾಗದಲ್ಲಿ ಪರಮಾಣು ಸಮ್ಮಿಲನವನ್ನು ಪ್ರಚೋದಿಸುವಷ್ಟು ಬೃಹತ್ ಪ್ರಮಾಣದಲ್ಲಿರದಿದ್ದರೆ, ಅದು ಗ್ರಹ. ಪ್ಲುಟೊವನ್ನು ಮತ್ತೆ ಗ್ರಹವನ್ನಾಗಿ ಮಾಡುವ ಪರವಾಗಿ 130 ಮತಗಳು ಮತ್ತು ಅದರ ವಿರುದ್ಧ 30 ಮತಗಳೊಂದಿಗೆ ಮತದಾನ ಮುಕ್ತಾಯವಾಯಿತು.

ಸ್ಟರ್ನ್ ತನ್ನ ಪ್ರಸ್ತುತಿಯ ಸಮಯದಲ್ಲಿ, ಪ್ಲುಟೊದ ಪರ್ವತಗಳು, ಹಿಮನದಿಗಳು, ಹಿಮಕುಸಿತಗಳು, ಅದರ ಹಿಮಾವೃತ ಹೊರಪದರದ ಕೆಳಗೆ ದ್ರವ ಸಾಗರ ಮತ್ತು ಸಂಕೀರ್ಣ ವಾತಾವರಣವನ್ನು ಹೊಂದಿದೆ ಎಂದು ತೋರಿಸುವ ನ್ಯೂ ಹೊರೈಜನ್ಸ್‌ನ ಸಂಶೋಧನೆಗಳನ್ನು ವಿವರಿಸಿದರು. ಇವೆಲ್ಲವೂ ಗ್ರಹ ಪ್ರಕ್ರಿಯೆಗಳ ಲಕ್ಷಣಗಳಾಗಿವೆ. ಅದಕ್ಕಿಂತ ಹೆಚ್ಚಾಗಿ, ಗ್ರಹಗಳ ಅರ್ಹತೆಯ ಮೂರನೇ ಮಾನದಂಡ ಗ್ರಹವು ಕ್ಷುದ್ರಗ್ರಹಗಳಂತಹ ಇತರ ಕಾಯಗಳ ಕಕ್ಷೆಯನ್ನು ತೆರವುಗೊಳಿಸಬೇಕು ಎಂಬುದು ಸೂರ್ಯನಿಂದ ತುಂಬಾ ದೂರದಲ್ಲಿ ಪರಿಭ್ರಮಿಸುವ ಕಾಯಗಳಿಗೆ ನ್ಯಾಯೋಚಿತವಲ್ಲ. ನೀವು ಸೂರ್ಯನಿಂದ ಹೆಚ್ಚು ದೂರ ಹೋದಂತೆ, ಸಣ್ಣ ವಸ್ತುಗಳನ್ನು ಕಕ್ಷೆಯನ್ನು ತೆರವುಗೊಳಿಸಲು ಕಷ್ಟವಾಗುತ್ತದೆ. ಏಕೆಂದರೆ ಸೂರ್ಯನಿಗೆ ಹತ್ತಿರವಿರುವ ವಸ್ತುಗಳಿಗಿಂತ ಕಕ್ಷೆಯು ತುಂಬಾ ನಿಧಾನವಾಗಿರುತ್ತದೆ. ಇದರರ್ಥ ಸೌರವ್ಯೆಹದ ಹೊರಭಾಗಗಳಲ್ಲಿ ವಸ್ತುಗಳನ್ನು ತೆರವುಗೊಳಿಸಲು ಗ್ರಹವು ಹೆಚ್ಚು ಬೃಹತ್ ಪ್ರಮಾಣದಲ್ಲಿರಬೇಕು. ವಾಸ್ತವವಾಗಿ, ಪ್ಲುಟೊದ ಕಕ್ಷೆಯಲ್ಲಿದ್ದರೆ ಭೂಮಿಯು ಸಹ ಗ್ರಹವಾಗಿ ಅರ್ಹತೆ ಪಡೆಯುವುದಿಲ್ಲ ಎಂದು ಸ್ಟರ್ನ್ ಪ್ರತಿಪಾದಿಸುತ್ತಾರೆ.

ಮೇಲಿನ ವಾದ ಪ್ರತಿವಾದಗಳನ್ನು ಗಮನಿಸಿದರೆ ಗ್ರಹಗಳ ಕುರಿತ ನಮ್ಮ ಆಲೋಚನೆಗಳು, ಟ್ಯಾಕ್ಸನಮಿಗಳು ಇನ್ನಷ್ಟು ವಿಸ್ತೃತವಾಗಬೇಕು. ಗ್ರಹಕ್ಕೆ ಇರುವ ಭೌತಿಕ ಲಕ್ಷಣಗಳ ಕುರಿತು ಇನ್ನಷ್ಟು ಚರ್ಚೆಗಳು ಅಗತ್ಯ ಎನಿಸುತ್ತದೆ. ಈ ಚರ್ಚೆಗಳು ಆಕಾಶಕಾಯಗಳ ಭೌತಿಕ ಲಕ್ಷಣಗಳನ್ನು ಆಧರಿಸಿ ಇರಬೇಕೇ ವಿನಹ, ಸರ್ವಾಧಿಕಾರಿ ಧೋರಣೆಯಿಂದ ಅಲ್ಲ ಎಂಬುದು ಸರ್ವವಿಧಿತ. ಈ ಹಿನ್ನೆಲೆಯಲ್ಲಿ ಪ್ಲುಟೊ ಸೇರಿದಂತೆ ಇನ್ನಷ್ಟು ಗ್ರಹಗಳು ಸೌರವ್ಯೆಹಕ್ಕೆ ಸೇರ್ಪಡೆಯಾಗಬಹುದೇ? ಕಾದು ನೋಡಬೇಕಿದೆ.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News