ಪ್ರಕರಣಗಳು ಇನ್ನೂ ಬಾಕಿಯಿರುವಾಗ ಜಿಲ್ಲಾಧಿಕಾರಿಗಳು ಕೋರ್ಟ್ ತೀರ್ಪನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದು ಹೇಗೆ?

Update: 2022-01-23 10:14 GMT

ಲಕ್ನೋ,ಜ.22: ಸರ್ವೋಚ್ಚ ನ್ಯಾಯಾಲಯ ಮತ್ತು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದರೂ ಲಕ್ನೋದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಆಸ್ತಿ ಹಾನಿಗಾಗಿ ಪ್ರತಿಭಟನಾಕಾರರಿಂದ ಹಣವನ್ನು ವಸೂಲು ಮಾಡುವ ಉ.ಪ್ರದೇಶ ಸರಕಾರದ ಪ್ರಯತ್ನದ ವಿರುದ್ಧ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು 2020,ಡಿ.3ರಂದು ತಡೆಯಾಜ್ಞೆಯನ್ನು ಹೊರಡಿಸಿತ್ತು. ಮೊದಲ ನೋಟಿಸ್ಗಳನ್ನು ಹೊರಡಿಸಿದ ಹೆಚ್ಚುಕಡಿಮೆ ಒಂದು ವರ್ಷದ ಬಳಿಕ ಈ ಪ್ರಮುಖ ನ್ಯಾಯಾಂಗ ಹಸ್ತಕ್ಷೇಪವು ನಡೆದಿತ್ತು.

ಈ ಪ್ರಕರಣಗಳಲ್ಲಿ ‘ಜಂಟಿ ಮತ್ತು ಹಲವಾರು ಹೊಣೆಗಾರಿಕೆ ’ಯ ನಾಗರಿಕ ಕಾನೂನು ನೀತಿಯ ಕುರಿತು ತನ್ನ ವ್ಯಾಖ್ಯಾನವನ್ನು ಉ.ಪ್ರ.ಸರಕಾರವು ವಿವರಿಸಿದ ಬಳಿಕ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ಹೊರಡಿಸಿತ್ತು. ಹಾನಿಗೆ ಸಂಪೂರ್ಣ ಪರಿಹಾರವನ್ನು ಓರ್ವ ವ್ಯಕ್ತಿಯಿಂದ ವಸೂಲು ಮಾಡಬಹುದು ಮತ್ತು ಆತ ಇತರ ಪ್ರತಿಭಟನಾಕಾರರ ವಿರುದ್ಧ ಸಿವಿಲ್ ಮೊಕದ್ದಮೆಗಳನ್ನು ದಾಖಲಿಸಿ ಅವರಿಂದ ತಾನು ಪಾವತಿಸಿದ ಆಸ್ತಿ ಹಾನಿ ಮೊತ್ತದ ಸಮಾನ ಪಾಲುಗಳನ್ನು ವಸೂಲು ಮಾಡಬಹುದು ಎಂದು ಸರಕಾರವು ತಿಳಿಸಿತ್ತು.

ಶಿಯಾ ಧರ್ಮಗುರು ಸೈಯದ್ ಸೈಫ್ ಅಬ್ಬಾಸ್ ನಕ್ವಿ ಅವರ ಅರ್ಜಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಈ ತಡೆಯಾಜ್ಞೆಯನ್ನು ಹೊರಡಿಸಿತ್ತು. ಹಜರತ್ ಗಂಜ್ ಪ್ರದೇಶದಲ್ಲಿ ಪ್ರತಿಭಟನೆಗಳ ಸಂದರ್ಭ ಉಂಟಾಗಿದ್ದ ಆಸ್ತಿ ಹಾನಿಗಾಗಿ 67.73 ಲ.ರೂ.ಗಳನ್ನು ವಸೂಲು ಮಾಡಲು ಲಕ್ನೋದ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ) 2020,ಮಾ.3ರಂದು ಹೊರಡಿಸಿದ್ದ ಆದೇಶದಲ್ಲಿ ಹೆಸರಿಸಲಾಗಿದ್ದ ಒಂಭತ್ತು ಜನರಲ್ಲಿ ನಕ್ವಿ ಓರ್ವರಾಗಿದ್ದರು.

ಆಸ್ತಿ ನಷ್ಟಕ್ಕೆ ಹೊಣೆಗಾರರು ಕಾನೂನನ್ನು ಕೈಗೆತ್ತಿಕೊಳ್ಳುವ ಸಾಮಾನ್ಯ ಗುರಿಯನ್ನು ಹೊಂದಿದ್ದರಿಂದ ಅವರ ವಿರುದ್ಧ ಜಂಟಿ ಮತ್ತು ಹಲವಾರು ಹೊಣೆಗಾರಿಕೆಯ ಸಿದ್ಧಾಂತವನ್ನು ಅನ್ವಯಿಸಲಾಗಿದೆ ಎಂದು ಎಡಿಎಂ ತನ್ನ ಆದೇಶದಲ್ಲಿ ತಿಳಿಸಿದ್ದರು.

ಜಂಟಿ ಮತ್ತು ಹಲವಾರು ಹೊಣೆಗಾರಿಕೆಯ ತತ್ತ್ವವು ಪಾಲುದಾರಿಕೆಯನ್ನು ಬಣ್ಣಿಸಲು ಬಳಸಲಾಗುವ ಕಾನೂನು ಪದಗಳಾಗಿದ್ದು,ಪ್ರತಿಯೊಬ್ಬ ಪಾಲುದಾರನೂ ಪ್ರತ್ಯೇಕ,ಆದರೆ ಸಮಾನವಾದ ಬಾಧ್ಯತೆಯನ್ನು ಹೊಂದಿರುತ್ತಾನೆ. ಅಂದರೆ ಜಂಟಿ ಬಾಧ್ಯತೆಯು ಪ್ರತಿ ಪಾಲುದಾರನಿಗೆ ಪ್ರತ್ಯೇಕವಾಗಿ,ಆದರೆ ಸಮಾನವಾಗಿ ವಿಭಜಿಸಲ್ಪಡುತ್ತದೆ.

ಎಡಿಎಂ ಆದೇಶವನ್ನು ಅನುಸರಿಸಿ ಲಕ್ನೋ ತಹಶೀಲ್ದಾರರು ಸಂಪೂರ್ಣ ಹಾನಿಯ ಮೊತ್ತವನ್ನು ಪಾವತಿಸುವಂತೆ 2020,ಜೂ.20ರಂದು ನಕ್ವಿಯವರಿಗೆ ವಸೂಲಿ ನೋಟಿಸನ್ನು ಹೊರಡಿಸಿದ್ದರು. ಒಂದು ವಾರದೊಳಗೆ ಮೊತ್ತವನ್ನು ಪಾವತಿಸದಿದ್ದರೆ ನಕ್ವಿಯವರ ಚರ ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗುವುದು ನೋಟಿಸಿನಲ್ಲಿ ಎಚ್ಚರಿಕೆ ನೀಡಲಾಗಿತ್ತು.

ಇದು ರಾಜ್ಯಾದ್ಯಂತದ ಜಿಲ್ಲಾಧಿಕಾರಿಗಳು ಸಿಎಎ ವಿರೋಧಿ ಪ್ರತಿಭಟನಾಕಾರರೆಂದು ಗುರುತಿಸಲಾದ 500ಕ್ಕೂ ಅಧಿಕ ಜನರಿಗೆ ವಸೂಲಿ ನೋಟಿಸ್ಗಳನ್ನು ಹೊರಡಿಸಲು ಮುಹಮ್ಮದ್ ಶುಜಾವುದ್ದೀನ್ ವಿರುದ್ಧ ಉ.ಪ್ರ.ಸರಕಾರ ಪ್ರಕರಣದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ 2010ರ ತೀರ್ಪನ್ನು ನೆಚ್ಚಿಕೊಂಡಿದ್ದರು ಎನ್ನುವುದನ್ನು ಬೆಳಕಿಗೆ ತಂದಿತ್ತು.

ಅಲಹಾಬಾದ್ ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠದ ನ್ಯಾ.ಸುಧೀರ್ ಅಗರವಾಲ್ ಅವರು 2010ರಲ್ಲಿ ನೀಡಿದ್ದ ತೀರ್ಪು ರಾಜಕೀಯ ಪಕ್ಷಗಳಿಂದ ಪ್ರತಿಭಟನೆಗಳಿಗೆ ಸಂಬಂಧಿಸಿತ್ತು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ. ಸಾರ್ವಜನಿಕ ಆಸ್ತಿಗೆ ನಷ್ಟದ ಮೌಲ್ಯಮಾಪನವನ್ನು ಸರಕಾರವು ನಡೆಸಬೇಕು ಮತ್ತು ಅದಕ್ಕೆ ಕಾರಣರಾದವರಿಂದ ನಷ್ಟದ ಹಣವನ್ನು ವಸೂಲು ಮಾಡಬೇಕು ಎನ್ನುವುದು ಸೇರಿದಂತೆ ತನ್ನ ನಿರ್ದೇಶಗಳಿಗೆ ಉತ್ತರಿಸುವಂತೆ ಪೀಠವು ಉ.ಪ್ರ.ಸರಕಾರಕ್ಕೆ ಸೂಚಿಸಿತ್ತು.

ಸರ್ವೋಚ್ಚ ನ್ಯಾಯಾಲಯವು 2009ರಲ್ಲಿ ಪ್ರತಿಭಟನೆಗಳ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯ ವಿಷಯದಲ್ಲಿ ನೀಡಿದ್ದ ಮಹತ್ವದ ತೀರ್ಪಿಗೆ 2010ರ ಉಚ್ಚ ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿತ್ತು.

 ಸರಕಾರಿ ಮತ್ತು ಖಾಸಗಿ ಆಸ್ತಿ ನಾಶ ವಿರುದ್ಧ ಆಂಧ್ರಪ್ರದೇಶ ಸರಕಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಾನಿಯ ಮೊತ್ತವನ್ನು ಅದಕ್ಕೆ ಕಾರಣರಾದವರಿಂದ ವಸೂಲು ಮಾಡಬೇಕು,ಆದರೆ ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಹೊರತು ಸರಕಾರದ ಮೂಲಕವಲ್ಲ ಎಂದು ಎತ್ತಿ ಹಿಡಿದಿತ್ತು. 2018ರಲ್ಲಿ ಇತರ ಎರಡು ಪ್ರಕರಣಗಳಲ್ಲಿಯೂ ಸರ್ವೋಚ್ಚ ನ್ಯಾಯಾಲಯವು ಈ ಪೂರ್ವನಿದರ್ಶನವನ್ನು ಎತ್ತಿ ಹಿಡಿದಿತ್ತು.

ಸ್ಥಾಪಿತ ನಿಯಮವನ್ನು ಉ.ಪ್ರ.ಸರಕಾರವು ವ್ಯಾಖ್ಯಾನಿಸಿರುವ ರೀತಿಯು ಸೂಕ್ತವಲ್ಲ ಮತ್ತು ಅದಕ್ಕೆ ಕಾನೂನಿನ ಆಧಾರವೂ ಇಲ್ಲ. ಹಲವಾರು ವ್ಯಕ್ತಿಗಳಿಂದ ಚಿಲ್ಲರೆ ಮೊತ್ತಗಳನ್ನು ವಸೂಲು ಮಾಡುವುದಕ್ಕಿಂತ ಒಬ್ಬನೇ ವ್ಯಕ್ತಿಯಿಂದ ಹಾನಿಗೆ ಪರಿಹಾರವನ್ನು ವಸೂಲಿ ಮಾಡುವದು ಬಹುಶಃ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ,ಆದರೆ ಇದಕ್ಕೆ ಕಾನೂನಿನ ಯಾವುದೇ ಬೆಂಬಲವಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಿಸಿದ್ದಾರೆ.

1984ರ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯು ಸಾರ್ವಜನಿಕ ಆಸ್ತಿಗೆ ಹಾನಿಯೊಂದಿಗೆ ವ್ಯವಹರಿಸುವ ಪ್ರಸ್ತುತ ಕಾನೂನಾಗಿದೆ. ಈ ಕಾಯ್ದೆಯಡಿ ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡುವವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.

ಆದರೆ ಕ್ರಿಮಿನಲ್ ಕಾನೂನು ಕ್ರಮಗಳಡಿ ಅಪರಾಧವನ್ನು ಸಂಶಯಾತೀತವಾಗಿ ಸಾಬೀತುಗೊಳಿಸಲು ಉನ್ನತ ಮಟ್ಟದ ಪುರಾವೆಗಳು ಅಗತ್ಯವಾಗಿರುವುದರಿಂದ ಈ ಕಾನೂನನ್ನು ಅನ್ವಯಿಸಲಾಗಿರಲಿಲ್ಲ. ಜೊತೆಗೆ ಈ ಕಾಯ್ದೆಯಡಿ ವಿಚಾರಣೆಯಲ್ಲಿ ಪ್ರತಿವಾದಿಯ ವಾದವನ್ನೂ ಆಲಿಸುವುದು ಕಡ್ಡಾಯವಾಗಿದೆ ಮತ್ತು ತೀರ್ಪು ಹೊರಬೀಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಬದಲಿಗೆ ಹಜರತ್ಗಂಜ್ನಲ್ಲಿ ಸಿಎಎ ಪ್ರತಿಭಟನೆಗಳಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿದ್ದ ಎಡಿಎಂ ಆದೇಶಗಳು ಏಳೇ ದಿನಗಳಲ್ಲಿ ಹೊರಬಿದ್ದಿದ್ದವು ಮತ್ತು ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಅಂತಿಮ ಆದೇಶಗಳನ್ನು ಹೊರಡಿಸಲಾಗಿತ್ತು.

 ಉ.ಪ್ರದೇಶದಲ್ಲಿನ ಎಡಿಎಂಗಳ ಆದೇಶಗಳು ಮತ್ತು ವಸೂಲು ಪ್ರಕ್ರಿಯೆಯನ್ನು ಸಾರ್ವಜನಿಕ ಹಿತಾಸಕ್ತಿಯ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿಯನ್ನು ಅಂಗೀಕರಿಸಲು 2020,ಜ.31ರಂದು ಒಪ್ಪಿಕೊಂಡಿದ್ದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಕೆ.ಎಂ.ಜೋಸೆಫ್ ಅವರ ಪೀಠವು ರಾಜ್ಯ ಸರಕಾರಕ್ಕೆ ನೋಟಿಸನ್ನು ಹೊರಡಿಸಿತ್ತು,ಆದರೆ ವಸೂಲಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಈ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ.

ಈ ನಡುವೆ ಪ್ರತಿಭಟನೆಗಳ ಸಂದರ್ಭ ಆಸ್ತಿಪಾಸ್ತಿಗಳಿಗೆ ನಷ್ಟವನ್ನುಂಟು ಮಾಡಿದವರ ಭಾವಚಿತ್ರಗಳು ಮತ್ತು ಹೆಸರುಗಳನ್ನು ಪ್ರದರ್ಶಿಸಿದ್ದ ಪೋಸ್ಟರ್ ಗಳನ್ನು ತೆಗೆಯುವಂತೆ ಉ.ಪ್ರ.ಸರಕಾರಕ್ಕೆ ನಿರ್ದೇಶ ನೀಡಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶವನ್ನು ತಡೆಹಿಡಿಯಲು ಸರ್ವೋಚ್ಚ ನ್ಯಾಯಾಲಯವು 2020,ಮಾ.12ರಂದು ನಿರಾಕರಿಸಿತ್ತು. ನಾಲ್ಕು ದಿನಗಳ ಬಳಿಕ ರಾಜ್ಯ ಸರಕಾರವು ಪ್ರಕ್ರಿಯೆಯ ಕಾನೂನು ಆಧಾರದ ಅಗತ್ಯವನ್ನು ನಿವಾರಿಸಲು ಉ.ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಹಾನಿಗೆ ನಷ್ಟ ವಸೂಲಾತಿ ಸುಗ್ರೀವಾಜ್ಞೆಯನ್ನು ತಂದಿತ್ತು.

ಉ.ಪ್ರ.ಸರಕಾರದ ವಸೂಲಿ ನೋಟಿಸಿನ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳನ್ನು ಜು.16ರಂದು ಅಂತಿಮ ವಿಚಾರಣೆಗಾಗಿ ಕೈಗೆತ್ತಿಕೊಳ್ಳಲಾಗುವುದು ಮತ್ತು ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳುವಂತಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು 2020,ಜು.6ರಂದು ತನ್ನ ಮಧ್ಯಂತರ ಆದೇಶದಲ್ಲಿ ಹೇಳಿತ್ತು. ಆದಾಗ್ಯೂ ಪ್ರಕರಣಗಳನ್ನು ಅಂತಿಮ ವಿಚಾರಣೆಗಾಗಿ ಇನ್ನಷ್ಟೇ ಪಟ್ಟಿ ಮಾಡಬೇಕಿದೆ.

ನಕ್ವಿ ಪ್ರಕರಣದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠದ 2020,ಡಿ.3ರ ತಡೆಯಾಜ್ಞೆಯ ಬಳಿಕ ಕನಿಷ್ಠ 35 ಅರ್ಜಿಗಳು ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿವೆ. ಈ ಎಲ್ಲ ಅರ್ಜಿಗಳಲ್ಲಿ ಉ.ಪ್ರದೇಶದಾದ್ಯಂತ ತಹಶೀಲ್ದಾರ್ಗಳು ಹೊರಡಿಸಿರುವ ವಸೂಲಿ ಆದೇಶಗಳಿಂದ ಇಂತಹುದೇ ರಕ್ಷಣೆಯನ್ನು ಕೋರಲಾಗಿದೆ. ಉಚ್ಚ ನ್ಯಾಯಾಲಯವು ಈ ಪ್ರತಿಯೊಂದೂ ಪ್ರಕರಣದಲ್ಲಿ ತಡೆಯಾಜ್ಞೆಯನ್ನು ವಿಸ್ತರಿಸಿದೆ. ತದನಂತರ ಯಾವುದೇ ಪ್ರಕರಣದಲ್ಲಿ ವಿವರವಾದ ವಿಚಾರಣೆ ನಡೆದಿಲ್ಲ.

ಕೃಪೆ: Indianexpress.com

Similar News