ಉತ್ತರಾಖಂಡ: ಪಠಾಣ್‌ ಕೋಟ್ ಸ್ಫೋಟ ಸಂಚಿನ ರೂವಾರಿಗೆ ಆಶ್ರಯ ನೀಡಿದ್ದ ನಾಲ್ವರ ಬಂಧನ

Update: 2022-01-23 17:25 GMT

ಡೆಹ್ರಾಡೂನ್, ಜ.24: 2021ರ ನ ನವೆಂಬರ್ ನಲ್ಲಿ ಪಂಜಾಬ್ ನ ಪಠಾಣ್ಕೋಟ್ ಜಿಲ್ಲೆಯಲ್ಲಿ ನಡೆದ ಬಾಂಬ್ ಸ್ಫೋಟ ಸಂಚಿನ ರೂವಾರಿಗಳಲ್ಲೊಬ್ಬನಿಗೆ ಆಶ್ರಯ ನೀಡಿದ್ದರೆನ್ನಲಾದ ನಾಲ್ವರನ್ನು ಉತ್ತರಾಖಂಡ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ರವಿವಾರ ಬಂಧಿಸಿದೆ. ಈ ನಾಲ್ವರು ಆರೋಪಿಗಳಿಗೂ ಭಾರತದಿಂದ ಹೊರಗೆ ಕಾರ್ಯಾಚರಿಸುತ್ತಿರುವ ಖಾಲಿಸ್ತಾನಿ ಪರ ಸಂಘಟನೆಯ ಜೊತೆ ನಂಟಿದೆಯೆಂದು ಪೊಲೀಸರು ತಿಳಿಸಿದ್ದಾರೆ. 

ಬಂಧಿತರನ್ನು ಶಂಶೇರ್ ಸಿಂಗ್ ಅಲಿಯಾಸ್ ‘ಶೇರಾ’ ಅಥವಾ ‘ಸಬಿ’, ಆತನ ಸಹೋದರ ಹರಪ್ರೀತ್ ಸಿಂಗ್ ಯಾನೆ ‘ಹ್ಯಾಪಿ’, ಅಜ್ಮೇರ್ ಸಿಂಗ್ ಯಾನೆ ‘ಲಾಡಿ ’ ಹಾಗೂ ಗುರುಪ್ರೀತ್ ಸಿಂಗ್ ಯಾನೆ ‘ಗುರ್ರಿ ಧಿಲ್ಲೋನ್’ ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಸಂಚಿನ ರೂವಾರಿಯಾದ ಸುಖಪ್ರೀತ್ಸಿಂಗ್ ಯಾನೆ ಸುಖ್ಗೆ ಇತರ ನಾಲ್ವರು ಆರೋಪಿಗಳು ಆಶ್ರಯ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
 
ಕಳೆದ ವರ್ಷದ ನವೆಂಬರ್ ಹಾಗೂ ಡಿಸೆಂಬರ್ಗಳಲ್ಲಿ ಪಠಾಣ್ಕೋಟ್ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗಳು ನಡೆದಿದ್ದವು. ನವೆಂಬರ್ 11ರಂದು ಜಿಲ್ಲೆಯ ಚುಕ್ಲಿ ಪುರಿ ಪ್ರದೇಶದಲ್ಲಿ ಹ್ಯಾಂಡ್ ಗ್ರೆನೇಡ್ಗಳನ್ನು ಎಸೆಯಲಾಗಿತ್ತು. ನವೆಂಬರ್ 21ರಂದು ಸೇನಾ ದಂಡುಪ್ರದೇಶದ ಮೇಲೂ ಗ್ರೆನೇಡ್ ಎಸೆಯಲಾಗಿತ್ತಾದರೂ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.
 
ನವೆಂಬರ್ 7ರಂದು ನವಾನ್ಶಹರ್ ಜಿಲ್ಲಾ ಪೊಲೀಸ್ ಠಾಣೆಯ ಮೇಲೆ ಸ್ಫೋಟಕವನ್ನು ಎಸೆಯಲಾಗಿತ್ತು. ಡಿಸೆಂಬರ್ 23ರಂದು ಲುಧಿಯಾನಾ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟಿಸಿ ಓರ್ವ ಮೃತಪಟ್ಟಿದ್ದನು ಹಾಗೂ 6 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News