ಕುಸಿಯುವ ಭೀತಿಯಲ್ಲಿ ಸರಕಾರಿ ಶಾಲಾ ಕಟ್ಟಡ; ಭಯದಿಂದ ಕಲಿಯುತ್ತಿದ್ದಾರೆ ಪುತ್ತೂರಿನ ಭಕ್ತಕೋಡಿ ಶಾಲಾ ವಿದ್ಯಾರ್ಥಿಗಳು

Update: 2022-01-23 18:04 GMT

ಪುತ್ತೂರು, ಜ.23: ಶಿಕ್ಷಣವು ಮಕ್ಕಳ ಹಕ್ಕುಗಳ ಭಾಗವಾಗಿದ್ದು, ಕಲಿಕೆಯ ಸಮಯದಲ್ಲಿ ಮಕ್ಕಳ ಸುರಕ್ಷತೆಗಾಗಿ ಶಾಲೆಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಬೇಕಾಗಿರುವುದು ಸರಕಾರ ಮತ್ತು ಇಲಾಖೆಗಳ ಜವಾಬ್ದಾರಿಯಾಗಿದೆ. ಆದರೆ ಪುತ್ತೂರಿನ ಭಕ್ತಕೋಡಿ ಎಂಬಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಸ್ಥಿತಿಯು ಮಕ್ಕಳ ಸುರಕ್ಷತೆಯನ್ನು ಅಣಕಿಸುವ ರೀತಿಯಲ್ಲಿದೆ. ತೀರಾ ದುಸ್ಥಿತಿಯಲ್ಲಿರುವ ಕಟ್ಟಡದಲ್ಲೇ ಪಾಠಗಳನ್ನು ಕೇಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಗ್ರಾಮೀಣ ಭಾಗದಲ್ಲಿರುವ ಭಕ್ತಕೋಡಿ ಸರಕಾರಿ ಶಾಲೆಗೆ ಬಡ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು, ಹೆಚ್ಚಿನ ಸಂಖ್ಯೆಯ ಮಕ್ಕನ್ನು ಹೊಂದಿರುವ ಈ ಶಾಲೆಯ ದುಸ್ಥಿತಿಯನ್ನು ಶಿಕ್ಷಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ, ಯಾರೊಬ್ಬರೂ ಪರಿಹರಿಸುವ ಕೆಲಸ ಮಾಡಿಲ್ಲ.

53 ವರ್ಷಗಳ ಇತಿಹಾಸ ಹೊಂದಿರುವ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಕುಸಿದು ಬೀಳುವ ಹಂತದಲ್ಲಿದೆ. ಗ್ರಾಮೀಣ ಭಾಗದಲ್ಲಿರುವ ಕಾರಣ ಈ ಸರಕಾರಿ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಸರಕಾರಿ ಶಾಲೆಯೆನ್ನುವ ಹೆಸರೂ ಇದಕ್ಕಿದೆ. ಶಾಲೆಯ ಮೇಲ್ಫಾವಣಿಗೆ ಹಾಕಿದ ಮರದ ರೀಪುಗಳು ಬಹುತೇಕ ಹಾಳಾಗಿದ್ದು, ಕೆಲವೊಂದು ಭಾಗದಲ್ಲಿ ಹಂಚುಗಳು ಕೆಳಕ್ಕೆ ಬಿದ್ದಿದೆ. ಯಾವುದೇ ಸಮಯದಲ್ಲಿ ತರಗತಿಯಲ್ಲಿ ಪಾಠ ಕೇಳುವ ಪುಟ್ಟ ಮಕ್ಕಳ, ಶಿಕ್ಷಕರ ಮೇಲೆ ಶಾಲೆಯ ಮೇಲ್ಚಾವಣಿ ಬೀಳುವ ಸ್ಥಿತಿಯಲ್ಲಿದೆ.

ಕಟ್ಟಡದ ನಾಲ್ಕು ಗೋಡಗಳ ನಡುವೆ ಭಾರೀ ಗಾತ್ರದ ಬಿರುಕು ಕಾಣಿಸಿಕೊಂಡಿದ್ದು, ನಾಲ್ಕು ಗೋಡೆಗಳಿಗೂ ಪರಸ್ಪರ ಸಂಬಂಧವೇ ಇಲ್ಲದಂತಾಗಿದೆ. ಈ ಕಟ್ಟಡದಲ್ಲಿ ನಾಲ್ಕು ತರಗತಿಗಳು ಪ್ರತಿನಿತ್ಯ ನಡೆಯುತ್ತಿದ್ದು, ಒಟ್ಟು 130 ಮಕ್ಕಳು ಕಲಿಯುತ್ತಿದ್ದಾರೆ. ಮಳೆಗಾಲವನ್ನು ಪ್ರಾಣ ಕೈಯಲ್ಲಿಟ್ಟೇ ಕಳೆಯುವ ಈ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿ, ಬೇಸಿಗೆ ಕಾಲದಲ್ಲಿ ಸಣ್ಣ ಗಾಳಿ ಬಂದರೂ, ತರಗತಿ ಬಿಟ್ಟು ಹೊರಗಡೆ ಓಡಿ ತಮ್ಮನ್ನು ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಮಳೆಗಾಲದಲ್ಲಿ ಈ ಶಾಲೆಯ ಎಲ್ಲಾ ತರಗತಿಗಳಲ್ಲಿ ಮಳೆ ನೀರು ಸೋರುವ ಕಾರಣಕ್ಕಾಗಿ ತರಗತಿಯಲ್ಲಿ ಮಕ್ಕಳ ಜೊತೆಗೆ ಮೇಲ್ಫಾವಣಿಯಿಂದ ಬೀಳುವ ನೀರು ಸಂಗ್ರಹಿಸಲು ದೊಡ್ಡ ಗಾತ್ರದ ಪಾತ್ರೆಗಳನ್ನೂ ಮಕ್ಕಳ ಜೊತೆ ಇಡಬೇಕಾಗುತ್ತದೆ ಎನ್ನುತ್ತಾರೆ ಶಾಲೆಯ ಶಿಕ್ಷಕರು. ಬಡ ಕುಟುಂಬದ ಪೋಷಕರು ತಮ್ಮ ಮಕ್ಕಳು ಕಲಿತು, ಉತ್ತಮ ನೆಲೆಯನ್ನು ಕಂಡುಕೊಳ್ಳಲಿ ಎನ್ನುವ ಕಾರಣಕ್ಕೆ ಶಾಲೆಗೆ ಕಳುಹಿಸುತ್ತಿದ್ದು, ಮಕ್ಕಳ ಜವಾಬ್ದಾರಿ ಹೊತ್ತ ಶಿಕ್ಷಕರಿಗೆ ಪಠ್ಯದ ಜೊತೆಗೆ ಮಕ್ಕಳ ಪ್ರಾಣವನ್ನೂ ಕಾಯಬೇಕಾದ ಸ್ಥಿತಿಯಿದೆ.

ಶಾಲೆಯ ಬಗ್ಗೆ ಸಾರ್ವಜನಿಕರು ಈಗಾಗಲೇ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಆ ಮೂಲಕ ಶಾಸಕರ ಗಮನಕ್ಕೂ ತಂದಿದ್ದಾರೆ. ಕಳೆದ 4 ವರ್ಷಗಳಿಂದ ಈ ಶಾಲೆಯ ದುಸ್ಥಿತಿ ಮತ್ತಷ್ಟು ಹೆಚ್ಚಾಗಿದ್ದು, ಪುಟ್ಟ ಮಕ್ಕಳನ್ನು ಸೇರಿಸಿ ತರಗತಿ ಮಾಡುವುದಾದರೂ ಹೇಗೆ ಎನ್ನುವ ತಲೆನೋವು ಶಾಲೆಯ ಸಿಬ್ಬಂದಿ ಹಾಗೂ ಸಾರ್ವಜನಿಕರದ್ದಾಗಿದೆ. ಅಲ್ಲದೆ ತರಗತಿಯಲ್ಲಿ ಪಾಠ ಕೇಳುವ ಮಕ್ಕಳಲ್ಲೂ ಪ್ರಾಣ ಭಯ ಕಾಡಲಾರಂಭಿಸಿದೆ.

ತೀರಾ ನಾದುರಸ್ತಿಯಲ್ಲಿರುವ ಈ ಕಟ್ಟಡ ಕುಸಿದು ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಮಕ್ಕಳ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಬೇಕಾಗಿರುವುದು ಇಲಾಖೆಯ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ.

ಸ್ಪಂದನ ಸಿಗದಿದ್ದಲ್ಲಿ ಪ್ರತಿಭಟನೆ

ಶಾಲೆಯ ದುರಸ್ತಿಗಾಗಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದಿ ರುವ ಹಿನ್ನೆಲೆಯಲ್ಲಿ ಇದೀಗ ಶಾಲೆಯಲ್ಲಿ ನಡೆದ ಶಾಲಾಭಿವೃದ್ಧಿ ಮತ್ತು ಮೇಲು ಸ್ತುವಾರಿ ಸಮಿತಿ ಸಭೆಯಲ್ಲಿ ದುರಸ್ತಿಗಾಗಿ ಅಧಿಕಾರಿಗಳಿಗೆ 10 ದಿನಗಳ ಗಡುವು ನೀಡಲಾಗಿದ್ದು, ಇದರ ಒಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದೆ.

''ಶಾಲಾ ಕಟ್ಟಡವು ಬೀಳುವ ಸ್ಥಿತಿಯಲ್ಲಿದ್ದು, ಇಲ್ಲಿ ಮಕ್ಕಳು ಜೀವಭಯದಿಂದ ಶಿಕ್ಷಣ ಪಡೆಯಬೇಕಾದ ಸ್ಥಿತಿಯಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ನಿರ್ಮಾಣಕ್ಕೆ ಗ್ರಾಮ ಪಂಚಾಯತ್‌ನಲ್ಲಿ ಅವಕಾಶಗಳಿಲ್ಲ. ಇಲಾಖೆ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ತುರ್ತು ಗಮನ ಹರಿಸಬೇಕು''

-ಕಮಲೇಶ್ ಎಸ್.ವಿ., ಸದಸ್ಯ ಮುಂಡೂರು ಗ್ರಾಪಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News