ಪ್ರತಿಷ್ಠಿತ ಕಂಪೆನಿಯ ನಕಲಿ ನೇಮಕಾತಿ ಪತ್ರ ನೀಡಿ ಉದ್ಯೋಗಾಂಕ್ಷಿಗಳಿಂದ ಲಕ್ಷಾಂತರ ರೂ. ಪಡೆದು ವಂಚನೆ: ಆರೋಪಿಯ ಬಂಧನ

Update: 2022-01-24 16:02 GMT

ಬೆಂಗಳೂರು, ಜ.24: ಕೆಲಸ ಕೊಡಿಸುವುದಾಗಿ ಸಂದರ್ಶನ ನಡೆಸಿ, ಪ್ರತಿಷ್ಠಿತ ಐಬಿಎಂ ಕಂಪೆನಿ ನಕಲಿ ನೇಮಕಾತಿ ಪತ್ರ ನೀಡಿ ಉದ್ಯೋಗಾಂಕ್ಷಿಗಳಿಂದ ಲಕ್ಷಾಂತರ ರೂ.ಪಡೆದು ವಂಚಿಸುತ್ತಿದ್ದ ಓರ್ವನನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪುಣೆ ಮೂಲದ ಸಂಜೀವ್ ಗಂಗರಾಮ್ ಗೋರ್ಖಾ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಒಎಲ್‌ಎಕ್ಸ್ ನಲ್ಲಿ ಐಬಿಎಂ ಕಂಪೆನಿಯಲ್ಲಿ ಕೆಲಸ ಖಾಲಿಯಿದೆ. ಆಸಕ್ತ ಅರ್ಹ ಅರ್ಭ್ಯರ್ಥಿಗಳು ಸಂಪರ್ಕಿಸಿ ಎಂದು ಜಾಹೀರಾತು ನೀಡುತ್ತಿದ್ದ. ಇದನ್ನು ನೋಡಿ ನಂಬುತ್ತಿದ್ದ ಅಭ್ಯರ್ಥಿಗಳು ತಮ್ಮ ಮಾಹಿತಿ ಕಳುಹಿಸುತ್ತಿದ್ದರು.

ಬಳಿಕ ಮೊಬೈಲ್ ಸಂಖ್ಯೆ ಪಡೆದು ಆನ್‌ಲೈನ್‌ನಲ್ಲಿ ಸಂದರ್ಶನ ನಡೆಸುತ್ತಿದ್ದ. ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಹಣ ಖರ್ಚಾಗಲಿದೆ ಎಂದು ಹೇಳಿ ನಿರುದ್ಯೋಗಿಗಳಿಂದ ಸಾವಿರಾರು ರೂ. ಪಡೆಯುತ್ತಿದ್ದ. ಬಳಿಕ ಐಬಿಎಂ ಕಂಪೆನಿಯ ಹೆಸರಿನ ನಕಲಿ ನೇಮಕಾತಿ ಪತ್ರ ಕಳುಹಿಸಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಐಬಿಎಂ ಕಂಪೆನಿಯ ಹೆಚ್‌ಆರ್ ಪ್ರದೀಪ್ ಅನ್ನು ಸಂಪರ್ಕಿಸಿ ಎಂದು ಹೇಳಿ ಬಳಿಕ ಆರೋಪಿ ಮೊಬೈಲ್ ಸಂಪರ್ಕ ಕಡಿತಗೊಳಿಸಿ ವಂಚಿಸುತ್ತಿದ್ದ ಎನ್ನಲಾಗಿದೆ.

ಅಭ್ಯರ್ಥಿಗಳು ಹಣ ನೀಡಿ 'ಕೆಲಸ ಗಿಟ್ಟಿಸಿಕೊಂಡವರು' ಐಬಿಎಂ ಕಂಪೆನಿಗೆ ಹೋಗಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಂಪಿಗೆಹಳ್ಳಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಸದ್ಯ ವಿಚಾರಣೆಗೊಳಪಡಿಸಿದಾಗ ಆರೋಪಿ ಈವರೆಗೆ 40ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News