ಜನವಸತಿ ಪ್ರದೇಶದಲ್ಲಿ ಎಲ್‌ಪಿಜಿ ಬಂಕ್ ನಿರ್ಮಾಣ: ಆರೋಪ
ಮಂಗಳೂರು, ಜ.25: ಸುರತ್ಕಲ್ ಬಳಿಯ ಕುಳಾಯಿ ಜಂಕ್ಷನ್‌ನಿಂದ ಕಾನಕ್ಕೆ ತೆರಳುವ ರಸ್ತೆಯ ಬಲಬದಿಯಲ್ಲಿ ಟೋಟಲ್ ಗ್ಯಾಸ್ ಕಂಪೆನಿಯ ಎಲ್‌ಪಿಜಿ ಬಂಕ್ ನಿರ್ಮಾಣಕ್ಕೆ ಒಂದು ಸೆಂಟ್ಸ್ ಸರಕಾರಿ ಜಮೀನನ್ನು ಅತಿಕ್ರಮಣ ಮಾಡಲಾಗಿದೆ. ಜನವಸತಿ ಪ್ರದೇಶದಲ್ಲಿ ಎಲ್‌ಪಿಜಿ ಬಂಕ್ ನಿರ್ಮಾಣದಿಂದ ಮುಂದೆ ಸಂಭವಿಸಬಹುದಾದ ದುರಂತದ ಹಿನ್ನೆಲೆಯಲ್ಲಿ ಸ್ಥಳೀಯರು ಭೀತಿಯಿಂದ ಜೀವಿಸುವಂತಾಗಿದೆ ಎಂದು ಕುಳಾಯಿ ನಾಗರಿಕ ಸಮಿತಿ ಆರೋಪಿಸಿದೆ.
ನಾಗರಿಕ ಸಮಿತಿ ಒತ್ತಾಯದಂತೆ ಸ್ಥಳೀಯ ಶಾಸಕರ ಸೂಚನೆ ಅನ್ವಯ ಎಲ್‌ಪಿಜಿ ಬಂಕ್ ನಿರ್ಮಾಣಗೊಳ್ಳುತ್ತಿರುವ ಜಾಗವನ್ನು ಸರ್ವೆ ಮಾಡಲಾಗಿದ್ದುಘಿ, ಒಂದು ಸೆಂಟ್ಸ್ ಸರಕಾರಿ ಜಮೀನು ಅತಿಕ್ರಮಣ ಮಾಡಲಾಗಿದೆ ಎಂದು ಮಂಗಳೂರು ತಹಸೀಲ್ದಾರ್ ವರದಿ ನೀಡಿದ್ದಾರೆ. ಸ್ಥಳವನ್ನು ತೆರವುಗೊಳಿಸಲು ಆದೇಶ ನೀಡಿದ್ದಾರೆ. ಆದರೂ, ಕಾಮಗಾರಿ ಮುಂದುವರೆದಿದೆ ಎಂದು ಕುಳಾಯಿ ನಾಗರಿಕ ಸಮಿತಿ ಅಧ್ಯಕ್ಷ ಕೆ. ಭರತ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಂಕ್ ನಿರ್ಮಾಣಗೊಳ್ಳುತ್ತಿರುವ 14 ಸೆಂಟ್ಸ್ ಜಾಗಕ್ಕೆ ಮುಡಾ ಏಕನಿವೇಶನ ವಿನ್ಯಾಸ ಅನುಮೋದನೆ ನೀಡಿದೆ. ಈ ಬಗ್ಗೆ ಸಮಿತಿ ದೂರು ನೀಡಿದ ಹಿನ್ನೆಲೆಯಲ್ಲಿ ಏಕನಿವೇಶನ ವಿನ್ಯಾಸ ಪರಿಷ್ಕರಿಸಬೇಕು ಎಂದು ಅಧಿಕಾರಿಗಳು ಪತ್ರ ಮೂಲಕ ಸ್ಥಳದ ಮಾಲಕರಿಗೆ ತಿಳಿಸಿದ್ದಾರೆ. ಬಂಕ್ ಪರಿಸರದ 100 ಮೀ. ಅಂತರದಲ್ಲಿ ಯಾವುದೇ ವಾಸ್ತವ್ಯದ ಮನೆ, ದೈವಸ್ಥಾನ, ಇರುವುದಿಲ್ಲ ಎಂದು ಮನಪಾ ಆರೋಗ್ಯಾಧಿಕಾರಿ ವರದಿ ನೀಡಿದ್ದಾರೆ. ಆದರೆ, ಎಲ್‌ಪಿಜಿ ಬಂಕ್‌ನ 20 ಮೀ. ಅಂತರದಲ್ಲಿ ದೈವಸ್ಥಾನ ಹಾಗೂ ವಾಸ್ತವ್ಯದ ಮನೆಗಳಿವೆ. ಇಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಮಂಜೂರಾದರೂ ರಸ್ತೆ ಅಗಲಿೀಕರಣ ಕಾಮಗಾರಿ ನಡೆಸದಂತಾಗಿದೆ. ಎಂಆರ್‌ಪಿಎಲ್‌ಗೆ ಬುಲೆಟ್ ಟ್ಯಾಂಕರ್, ಘನ ವಾಹನ ಸಂಚರಿಸುತ್ತಿದ್ದುಘಿ, ಈ ಪ್ರದೇಶ ವಾಹನ, ಜನದಟ್ಟಣೆಯಿಂದ ಕೂಡಿದೆ. ಇಲ್ಲಿ ಬಂಕ್ ನಿರ್ಮಾಣಕ್ಕೆ ಸ್ಥಳೀಯರ ಪ್ರಬಲ ವಿರೋಧವಿದೆ ಎಂದರು.
ಈ ಬಗ್ಗೆ ಜಿಲ್ಲಾಕಾರಿ, ಮೇಯರ್, ಮನಪಾ ಆಯುಕ್ತರು, ಮುಡಾ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ನ್ಯಾಯ ದೊರೆಯದಿದ್ದಲ್ಲಿ ಎಲ್ಲ ಸಂಘ ಸಂಸ್ಥೆಗಳು, ಊರ ನಾಗರಿಕರು ಒಟ್ಟಾಗಿ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.
ಸಮಿತಿ ಕಾರ್ಯದರ್ಶಿ ಗಂಗಾಧರ ಬಂಜನ್, ಸದಸ್ಯರಾದ ರಮೇಶ್ ಅಳಪೆ, ಲಿಂಗಪ್ಪ ಎಂ.ಡಿ. ಉಪಸ್ಥಿತರಿದ್ದರು.