ಅಕ್ರಮ, ನಕಲಿ ದಾಖಲೆ ಸೃಷ್ಟಿ ಆರೋಪ: ಬಿಡಿಎ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

Update: 2022-01-25 15:35 GMT

ಬೆಂಗಳೂರು, ಜ.25: ಅಕ್ರಮ, ನಕಲಿ ದಾಖಲೆ ಸೃಷ್ಟಿ ಆರೋಪ ಸಂಬಂಧ ಬಿಡಿಎ ಅಧಿಕಾರಿಗಳು ಸೇರಿದಂತೆ ಹತ್ತಾರು ಆರೋಪಿಗಳ ವಿರುದ್ಧ 18 ಪ್ರಕರಣಗಳನ್ನು ದಾಖಲಾಗಿವೆ ಎಂದು ವರದಿಯಾಗಿದೆ.

ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನೂರಾರು ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಕಬಳಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬೃಹತ್ ಕರ್ಮಕಾಂಡವನ್ನು ಬಯಲಿಗೆ ಎಳೆದಿರುವ ವಿಶೇಷ ಕಾರ್ಯಪಡೆ ಮತ್ತು ಜಾಗೃತ ದಳದ ಅಧಿಕಾರಿಗಳು, ಇದೀಗ ಮತ್ತಷ್ಟು ದಾಖಲೆ ಆಧರಿಸಿ ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಿಡಿಎ ಉಪಕಾರ್ಯದರ್ಶಿಗಳಾದ ಅನಿಲ್‍ಕುಮಾರ್, ಎಸ್.ಎ.ಮಂಗಳ ಅವರ ಹೆಸರುಗಳು ಕೇಳಿಬಂದಿವೆ. ಜೊತೆಗೆ ಬಿಡಿಎ ಕೇಸ್‍ವರ್ಕರ್‍ಗಳು, ಮಧ್ಯವರ್ತಿಗಳು ಮತ್ತು ನಿವೇಶನದ ಫಲಾನುಭವಿಗಳು ಆರೋಪಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

18 ಪ್ರತ್ಯೇಕ ಪ್ರಕರಣಗಳಲ್ಲಿ 11 ಎಚ್‍ಬಿಆರ್ ಲೇಔಟ್ ನಿವೇಶನಗಳಿಗೆ ಸಂಬಂಧಪಟ್ಟಿದ್ದರೆ, 7 ಪ್ರಕರಣಗಳು ವಿಶ್ವೇಶ್ವರಯ್ಯ ಲೇಔಟ್‍ಗೆ ಸಂಬಂಧಪಟ್ಟಿದೆ. ಪ್ರತಿ ಪ್ರಕರಣದಲ್ಲೂ ಐಪಿಸಿ ಸೆಕ್ಷನ್ 409, 420, 465, 471, 472, 468ರಡಿ ಆರೋಪಗಳನ್ನು ದಾಖಲಿಸಲಾಗಿದೆ.

ನಿವೇಶನಕ್ಕೆ ಸಂಬಂಧಪಟ್ಟಂತೆ ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ನೋಂದಣಿಯಾಗದೆ ಇದ್ದರೂ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬಿಡಿಎನಿಂದ ಶುದ್ಧ ಕ್ರಯಪತ್ರ ಮಾಡಿಸಿಕೊಂಡು ಕೋಟ್ಯಂತರ ರೂ. ಮೌಲ್ಯದ ನಿವೇಶನಗಳನ್ನು ಆರೋಪಿಗಳು ಕಬಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News