ಯುಎಇ, ಸೌದಿ ಅರೇಬಿಯಾದ ಮೇಲಿನ ದಾಳಿ ಯೆಮನ್ ನ ಸಂಘರ್ಷ ಉಲ್ಬಣಿಸಿದ ಸಂಕೇತ: ಅಮೆರಿಕ

Update: 2022-01-25 17:06 GMT
  ಅಮೆರಿಕ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್, ಜ.25: ಯುಎಇ ಮತ್ತು ಸೌದಿ ಅರೆಬಿಯಾದ ಮೇಲೆ ಹೌತಿ ಬಂಡುಗೋರರು ಇತ್ತೀಚೆಗೆ ನಡೆಸಿದ ದಾಳಿಗಳು ಮತ್ತು ಇದಕ್ಕೆ ಪ್ರತಿಯಾಗಿ ಯೆಮನ್ ನ ಮೇಲೆ ನಡೆದ ವಾಯುದಾಳಿಯು ಯೆಮನ್‌ನ ಸಂಘರ್ಷವನ್ನು ಮತ್ತು ಆ ದೇಶದಲ್ಲಿನ ಮಾನವೀಯ ಬಿಕ್ಕಟ್ಟನ್ನು ಉಲ್ಬಣಿಸಿದೆ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಹೌದಿ ಬಂಡುಗೋರರು ಯುಎಇ ಸೌದಿ ಅರೆಬಿಯಾ ಮತ್ತು ಅಬುಧಾಬಿಯ ಮೇಲೆ ನಡೆಸಿದ ದಾಳಿಯಲ್ಲಿ 3 ನಾಗರಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದು ಈ ದಾಳಿಯನ್ನು ಅಮೆರಿಕ ಖಂಡಿಸುತ್ತದೆ. ಯುಎಇ ಮತ್ತು ಸೌದಿ ಅರೇಬಿಯಾದ ಮೇಲಿನ ದಾಳಿ ಹಾಗೂ ಯೆಮನ್ನ ಮೇಲೆ ನಡೆದ ವಾಯುದಾಳಿಯು ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಲಿದೆ ಮತ್ತು ಇದರಿಂದ ಯೆಮನ್ ನಾಗರಿಕರು ಸಂಕಷ್ಟಪಡುವಂತಾಗಿದೆ. ಈಗ ನಡೆಯುತ್ತಿರುವ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರದ ತುರ್ತು ಅಗತ್ಯವಿದೆ ಎಂದು ಯೆಮನ್ ಪ್ರಜೆಗಳು ಬಯಸುತ್ತಿದ್ದಾರೆ ಎಂದ ಪ್ರೈಸ್, ಸೌದಿ ಅರೆಬಿಯಾ ಮತ್ತು ಯುಎಇ ಮಿತ್ರರ ರಕ್ಷಣಾ ವ್ಯವಸ್ಥೆ ಬಲಪಡಿಸಲು ಅಮೆರಿಕ ಬದ್ಧವಾಗಿದೆ ಎಂದವರು ಹೇಳಿದ್ದಾರೆ.

ಹೌತಿ ಬಂಡುಗೋರರು ಇತ್ತೀಚೆಗೆ ಅಬುದಾಭಿಯನ್ನು ಗುರಿಯಾಗಿಸಿ ನಡೆಸಿದ ಡ್ರೋನ್ ದಾಳಿಯಲ್ಲಿ 3 ಮಂದಿ ಮೃತಪಟ್ಟು ಇತರ 6 ಮಂದಿ ಗಾಯಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಸೌದಿ ನೇತೃತ್ವದ ಒಕ್ಕೂಟವು ಯೆಮನ್‌ನ ಹೌದಿ ಬಂಡುಗೋರರ ನೆಲೆಯನ್ನು ಗುರಿಯಾಗಿಸಿ ನಡೆಸಿದ್ದ ವಾಯುದಾಳಿಯಲ್ಲಿ ಹೌದಿಗಳ ಶಸ್ತ್ರಾಸ್ತ್ರ ದಾಸ್ತಾನು ಕೇಂದ್ರ ಸಹಿತ ಹಲವು ಕಟ್ಟಡಗಳಿಗೆ ಹಾನಿಯಾಗಿತ್ತು. ಕಳೆದ ಶುಕ್ರವಾರ ಯೆಮನ್‌ನ ಸಾದಾ ಪ್ರಾಂತದ ಜೈಲಿನ ಮೇಲೆ ಸೌದಿ ನೇತೃತ್ವದ ಒಕ್ಕೂಟ ನಡೆಸಿದ ವಾಯುದಾಳಿಯಲ್ಲಿ 70ಕ್ಕೂ ಅಧಿಕ ಮಂದಿ ಮೃತಪಟ್ಟು ಕನಿಷ್ಟ 130 ಮಂದಿ ಗಾಯಗೊಂಡಿದ್ದಾರೆ ಎಂದು ಹೌತಿ ಸಂಘಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News