ಸಂವಿಧಾನದಲ್ಲಿ ಅಮರವಾದ ಕೈಬರಹ

Update: 2022-01-26 08:15 GMT

1950ರ ಜನವರಿ 26ರಂದು ಅಂತಿಮವಾಗಿ ಅಂಗೀಕರಿಸಲಾದ ಭಾರತೀಯ ಸಂವಿಧಾನವನ್ನು ಬರೆದವರು ಯಾರು ಎಂದು ಕೇಳಿದರೆ, ಹೆಚ್ಚಿನವರು ಡಾ. ಬಿ.ಆರ್. ಅಂಬೇಡ್ಕರ್ ಎಂದೇ ಹೇಳುತ್ತಾರೆ. ನಿಜ. ಆದರೆ, ಸಂವಿಧಾನದ ಮೂಲ ಪ್ರತಿಯಲ್ಲಿರುವ ಕೈಬರಹ ಯಾರದ್ದು ಎಂದು ಕೇಳಿದರೆ, ಹೆಚ್ಚಿನವರಿಗೆ ಗೊತ್ತಿರಲಾರದು.

ಭಾರತೀಯ ಪ್ರಜಾಪ್ರಭುತ್ವದ ಅಡಿಗಲ್ಲು ಎನಿಸಿದ ಭಾರತೀಯ ಸಂವಿಧಾನವನ್ನು ಬರೆದವರು ಯಾರು ಎಂದು ಕೇಳಿದರೆ ಹೆಚ್ಚಿನವರು ಡಾ. ಬಿ.ಆರ್. ಅಂಬೇಡ್ಕರ್ ಎಂದೇ ಹೇಳುತ್ತಾರೆ. ಹೌದು. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಭೆಯು ನಮ್ಮ ಸಂವಿಧಾನವನ್ನು ಬರೆಯಿತು. ಪ್ರಪಂಚದಲ್ಲಿನ ಬೇರೆ ಬೇರೆ ಲಿಖಿತ ಸಂವಿಧಾನಗಳನ್ನೂ ಅಲಿಖಿತ ಸಂವಿಧಾನಗಳನ್ನೂ ಅಧ್ಯಯನ ಮಾಡಿ, ಭಾರತಕ್ಕೆ ಸೂಕ್ತವೆನಿಸುವ ಸಂವಿಧಾನವನ್ನು ರಚಿಸಿತು ಎಂಬುದು ನಿಜ. (ನಮ್ಮನ್ನು ಆಳಿಹೋದ ಬ್ರಿಟಿಷರಿಗೆ ಲಿಖಿತ ಸಂವಿಧಾನವಿರಲಿಲ್ಲ ಎಂಬುದನ್ನು ಗಮನಿಸಬೇಕು.)

ಆದರೆ, 1950ರ ಜನವರಿ 26ರಂದು ಅಂತಿಮ ಸಹಿ ಹಾಕಲಾದ ಇಂಗ್ಲಿಷ್ ಭಾಷೆಯಲ್ಲಿರುವ ಸಂವಿಧಾನದ ಪ್ರತಿಯಲ್ಲಿ ಇರುವ ಕೈಬರಹ ಯಾರದ್ದು ಎಂದು ಕೇಳಿದಲ್ಲಿ ಹೆಚ್ಚಿನವರು ಉತ್ತರ ಹೇಳಲಾರರು. ಅದನ್ನು ಬರೆದವರು ಸಾವಿನ ವೇಳೆಯಲ್ಲೂ ಯಾರ ಗಮನಕ್ಕೂ ಬರದವರು. ಆದರೆ, ಸಂವಿಧಾನದಲ್ಲಿ ಅವರ ಹೆಸರಿನ ಜೊತೆಗೆ ಅವರ ಅಜ್ಜನ ಹೆಸರೂ ಇದೆ.

 ಅವರ ಹೆಸರೇ ಪ್ರೇಮ್ ಬಿಹಾರಿ ನಾರಾಯಣ್ ರಾಯ್‌ಝಾದ (ಸಕ್ಸೇನಾ) ಎಂದು. 1901ರಲ್ಲಿ ಹುಟ್ಟಿದ ಇವರು, 1966ರಲ್ಲಿ ಕಾಲವಾದರು. ರಾಜ ಮಹಾರಾಜರು ಮತ್ತು ಜಮೀನ್ದಾರರ ಬಳಿ ದಾಖಲೆ, ಫರ್ಮಾನು, ದಸ್ತಾವೇಜುಗಳನ್ನು ಬರೆಯುತ್ತಿದ್ದ ವೃತ್ತಿಪರ ಬರಹಗಾರರ ಕುಟುಂಬದಲ್ಲಿ ಅವರು ಹುಟ್ಟಿದರು. ಇವರು ಮೂಲತಃ ಪರ್ಷಿಯಾದಿಂದ ಬಂದಿದ್ದ ಕ್ಯಾಲಿಗ್ರಫಿ ಕಲೆಯಲ್ಲಿ ಪರಿಣಿತರು. ಕ್ಯಾಲಿಗ್ರಫಿ ಎಂದರೆ, ಬೇರೆ ಬೇರೆ ಅಗಲದ ಬೇರೆ ಬೇರೆ ಕೋನಗಳಿರುವ ನಿಬ್ಬುಗಳನ್ನು ಶಾಯಿಯಲ್ಲಿ ಮುಳುಗಿಸಿ ಕಲಾತ್ಮಕವಾಗಿ ಬರೆಯುವ ಕಲೆ.

ಬಾಲ್ಯದಲ್ಲಿಯೇ ತಂದೆ, ತಾಯಿಯರನ್ನು ಕಳೆದುಕೊಂಡ ಇವರನ್ನು ಸಾಕಿ ಬೆಳೆಸಿ, ಈ ಕಲೆಯನ್ನು ಅವರಿಗೆ ಕಲಿಸಿದವರು ಅವರ ಅಜ್ಜ. ಅಜ್ಜ ಸ್ವತಃ ಇಂಗ್ಲಿಷ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದವರು. ಪ್ರೇಮ್ ಬಿಹಾರಿಯವರು ಸ್ವತ: ದಿಲ್ಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಕಲಿಯುತ್ತಾ, ತನ್ನ ಕ್ಯಾಲಿಗ್ರಫಿ ಕಲೆಯನ್ನೂ ಅಭಿವೃದ್ಧಿಪಡಿಸಿಕೊಂಡರು.

1940ರ ದಶಕದ ಕೊನೆಯ ಭಾಗದಲ್ಲಿ ಸಂವಿಧಾನ ರಚನಾ ಸಭೆಯು ಸಂವಿಧಾನದ ಕರಡನ್ನು ಸಿದ್ಧಗೊಳಿಸುತ್ತಿದ್ದಾಗ ಈ ಭಾರೀ ದಾಖಲೆಯ ಮೊದಲ ಪ್ರತಿಯನ್ನು ಬರೆಯುವಂತೆ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರೇಮ್ ಬಿಹಾರಿಯವರನ್ನು ಕೇಳಿಕೊಂಡರು.

‘‘ಇದನ್ನು ಬರೆಯಲು ಏನು ತೆಗೆದು ಕೊಳ್ಳುತ್ತೀರಿ?’’ ಎಂದು ನೆಹರೂ ಕೇಳಿದಾಗ, ‘‘ನನಗೆ ಒಂದು ಪೈ ಕೂಡಾ ಬೇಡ. ದೇವರ ದಯೆಯಿಂದ ನನ್ನಲ್ಲಿ ಎಲ್ಲವೂ ಇದೆ. ನಾನು ಜೀವನದಲ್ಲಿ ಸಾಕಷ್ಟು ಸಂತೋಷದಿಂದ ಇದ್ದೇನೆ’’ ಎಂದು ಪ್ರೇಮ್ ಬಿಹಾರಿಯವರು ಉತ್ತರಿಸಿದರಂತೆ. ಆದರೆ, ಒಂದು ಬೇಡಿಕೆ ಇದೆ. ಸಂವಿಧಾನದ ಪ್ರತಿಯೊಂದು ಪುಟದ ಕೊನೆಯಲ್ಲಿ ನನ್ನ ಹೆಸರು ಬರೆಯುತ್ತೇನೆ ಮತ್ತು ಕೊನೆಯ ಪುಟದಲ್ಲಿ ನನ್ನ ಹೆಸರಿನ ಜೊತೆಗೆ ಅಜ್ಜನ ಹೆಸರೂ ಬರೆಯುತ್ತೇನೆ ಎಂದರಂತೆ. ನೆಹರೂ ಇದಕ್ಕೆ ಒಪ್ಪಿದರು. ಈಗ ಅವರಿಬ್ಬರ ಹೆಸರುಗಳನ್ನು ಈ ಪ್ರತಿಯಲ್ಲಿ ಕಾಣಬಹುದು.

ಭಾರತೀಯ ಸಂವಿಧಾನ ಪ್ರಪಂಚದಲ್ಲಿಯೇ ಅತ್ಯಂತ ಉದ್ದವಾದ ಸಂವಿಧಾನ. ಮೂಲ ಸಂವಿಧಾನದಲ್ಲಿ ಪೀಠಿಕೆ, 22 ಭಾಗಗಳು, 395 ವಿಧಿಗಳು ಮತ್ತು ಎಂಟು ಪರಿಚ್ಛೇದಗಳು ಇವೆ. ಈ ಕೆಲಸ ಮುಗಿದಾಗ, ಈ ಬರವಣಿಗೆಯ ಸೌಂದರ್ಯವೇ ಎಲ್ಲರ ಗಮನ ಸೆಳೆಯಿತು. ಕಲಾತ್ಮಕವಾದ ಚೌಕಟ್ಟು, ಇಟಾಲಿಯನ್ ಶೈಲಿಯ ಓರೆಯಾದ ಬರಹ, ದೊಡ್ಡ (ಕ್ಯಾಪಿಟಲ್) ಅಕ್ಷರಗಳಿಗೆ ಮಾಡಿದ ಕುಸುರಿ, ಕೊಂಬುಗಳು, ವಂಕಿಗಳು ಅತ್ಯಂತ ಕಲಾತ್ಮಕವಾಗಿದ್ದವು. ಇಡೀ ದಾಖಲೆಯಲ್ಲಿ ಒಂದೇ ಒಂದು ತಪ್ಪು, ಹೆಚ್ಚುವರಿ ಜಾಗ, ಒಂದೇ ಒಂದು ಚಿತ್ತು, ಬೇಡದ ಶಾಯಿಯ ಕಲೆ ಇರಲಿಲ್ಲ.

ಈಗ ‘ಕಾನ್‌ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತಿರುವ ಕಾನ್‌ಸ್ಟಿಟ್ಯೂಶನ್ ಹಾಲ್‌ನ ಒಂದು ಪ್ರತ್ಯೇಕ ಕೋಣೆಯಲ್ಲಿ ನಿರಂತರವಾಗಿ ಬರೆಯಲು ತೊಡಗಿದ ಪ್ರೇಮ್ ಬಿಹಾರಿ, ಇದನ್ನು ಬರೆಯಲು ಬೇರೆಬೇರೆ ರೀತಿಯ ನೂರಕ್ಕೂ ಹೆಚ್ಚು ನಿಬ್ಬುಗಳನ್ನು ಬಳಸಿದರಂತೆ. ಬರವಣಿಗೆಯ ಕೆಲಸ 26 ನವೆಂಬರ್ 1949ರಲ್ಲಿ ಪೂರ್ಣಗೊಂಡು, ಅದಕ್ಕೆ 26 ಜನವರಿ 1950ರಂದು ಸಹಿ ಬಿತ್ತು. ಎಲ್ಲಾ ಮುಗಿದಾಗ ಈ ದಾಖಲೆಯಲ್ಲಿ 251 ಪುಟಗಳು ಇದ್ದು, ಅದು 3.75 ಕಿ.ಗ್ರಾಂ ಭಾರವಿತ್ತು. ನಂತರ ಇದರ ಹಿಂದಿ ಪ್ರತಿ ಮಾಡಿದವರು ವಸಂತ ಕ್ರಿಶನ್ ವೈದ್ಯ ಎಂಬವರು. ಭಾರತೀಯ ಸಂಸತ್ತಿನ ಪುಸ್ತಕ ಭಂಡಾರದ ತಿಜೋರಿಯಂತಹ ಕೋಣೆಯಲ್ಲಿ 30x21x9 ಇಂಚುಗಳ ಹೀಲಿಯಂ ತುಂಬಿದ ಪೆಟ್ಟಿಗೆಗಳಲ್ಲಿ ಈ ಪುಟಗಳನ್ನು ರಕ್ಷಿಸಿಡಲಾಗಿದೆ. ಹೆಚ್ಚು ಕಡಿಮೆ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು 30 ಶೇಕಡಾ ತೇವಾಂಶವನ್ನು ಕಾದುಕೊಳ್ಳಲಾಗುತ್ತಿದೆ. ಈ ರೀತಿಯಾಗಿ ಪ್ರೇಮ್ ಬಿಹಾರಿ ನಾರಾಯಣ್ ರಾಯ್‌ಝಾದ ಅವರ ಕೈಬರಹ ಸಂವಿಧಾನದಲ್ಲಿ ಅಮರವಾಗಿದೆ.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News