ಅಜ್ಜಂದಿರು ಧೂಮಪಾನಿಗಳಾಗಿದ್ದರೆ ಮೊಮ್ಮಕ್ಕಳಿಗೂ ತೊಂದರೆ: ನೂತನ ಅಧ್ಯಯನದಿಂದ ಬಹಿರಂಗ !

Update: 2022-01-27 10:01 GMT
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ,ಜ.26: ಧೂಮ್ರಪಾನದಿಂದ ವ್ಯಕ್ತಿಯ ಆರೋಗ್ಯಕ್ಕೆ ಉಂಟಾಗುವ ಹಾನಿಗಳನ್ನು ಅಸಂಖ್ಯಾತ ಅಧ್ಯಯನಗಳು ಪುರಾವೆಗಳ ಸಹಿತ ಸಾಬೀತುಗೊಳಿಸಿವೆ. 

ಆದರೆ,ಧೂಮಪಾನದಿಂದಾಗಿ ಉಂಟಾಗುವ ಅಪಾಯಗಳು ನಾವು ಎಂದಿಗೂ ಊಹಿಸಿರದ ದೀರ್ಘಾವಧಿ ಪರಿಣಾಮಗಳನ್ನು ಬೀರುತ್ತವೆ ಎನ್ನುವುದನ್ನು ನೂತನ ಸಂಶೋಧನೆಯೊಂದು ಬಹಿರಂಗಗೊಳಿಸಿದೆ, ಈ ಅಪಾಯಗಳು ವ್ಯಕ್ತಿಯ ಮುಂದಿನ ಕೆಲವು ತಲೆಮಾರುಗಳಿಗೂ ಬೆದರಿಕೆಯನ್ನು ಒಡ್ಡಬಲ್ಲವು. ಹೌದು,ಜನರ ಧೂಮಪಾನದ ಚಟ ಅವರಿಗೆ ಮಾತ್ರವಲ್ಲ,ಅವರ ಮೊಮ್ಮಕ್ಕಳು ಮತ್ತು ಮರಿಮಕ್ಕಳ ಆರೋಗ್ಯದ ಮೇಲೂ ಹಾನಿಕರ ಪರಿಣಾಮಗಳನ್ನು ಬೀರುತ್ತದೆ.

ಬ್ರಿಟನ್‌ನ ಬ್ರಿಸ್ಟಲ್ ವಿವಿಯಲ್ಲಿ ನಡೆಸಲಾದ ‘90ರ ದಶಕದ ಮಕ್ಕಳು ’ ಎಂಬ ಅಧ್ಯಯನವು ಈ ಕಳವಳಕಾರಿ ವಿಷಯವನ್ನು ಬಹಿರಂಗಗೊಳಿಸಿದೆ. ಅಧ್ಯಯನದ ಫಲಿತಾಂಶಗಳು ಕಳೆದ ವಾರ ‘ಸೈಂಟಿಫಿಕ್ ರಿಪೋರ್ಟ್ಸ್ ’ ಜರ್ನಲ್‌ನಲ್ಲಿ ಪ್ರಕಟಗೊಂಡಿವೆ.

ಸಂಶೋಧನೆಯ ಭಾಗವಾಗಿ ಸಂಶೋಧಕರು 30 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಸಮೀಕ್ಷೆಗೊಳಪಟ್ಟವರ ರಕ್ತ,ಮೂತ್ರ,ಹೊಕ್ಕುಳ ಬಳ್ಳಿ, ಹಲ್ಲು,ಕೂದಲು ಮತ್ತು ಉಗುರುಗಳು ಸೇರಿದಂತೆ 15 ಲಕ್ಷಕ್ಕೂ ಅಧಿಕ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದರು. ವ್ಯಕ್ತಿಯ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುವ ಪಾರಿಸರಿಕ ಮತ್ತು ವಂಶವಾಹಿ ಅಂಶಗಳ ಮೌಲ್ಯಮಾಪನ ಸಂಶೋಧನೆಯ ಉದ್ದೇಶವಾಗಿತ್ತು. ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು 2,200 ಪ್ರಬಂಧಗಳು ಪ್ರಕಟಗೊಂಡಿವೆ. ಮಗುವಿನ ಹಲ್ಲುಗಳ ಮೇಲಿನ ಗೆರೆಗಳು ಅದು ಖಿನ್ನತೆಗೆ ಗುರಿಯಾಗುವ ಅಪಾಯವನ್ನು ನಿರ್ಧರಿಸಬಹುದು ಅಥವಾ ಟಿವಿ ವೀಕ್ಷಣೆಯು ಹೇಗೆ ಅಸ್ತಮಾ ಅಪಾಯದೊಂದಿಗೆ ಗುರುತಿಸಿಕೊಂಡಿದೆ ಎಂಬಂತಹ ಕೆಲವು ಗಮನ ಸೆಳೆಯುವ ವಿಷಯಗಳು ಈ ಪ್ರಬಂಧಗಳಲ್ಲಿವೆ.

ಧೂಮಪಾನಕ್ಕೆ ಸಂಬಂಧಿಸಿದಂತೆ ವರದಿಯು ಇವುಗಳಲ್ಲಿ ಹೆಚ್ಚು ಗಮನೀಯವಾಗಿದೆ. ಧೂಮಪಾನದ ದುಷ್ಪರಿಣಾಮಗಳು ಕೇವಲ ವ್ಯಕ್ತಿಯ ಆರೋಗ್ಯಕ್ಕೆ ಸೀಮಿತವಲ್ಲ, ಅದು ಆತನ ವಂಶಜರಲ್ಲಿಯೂ ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧನೆಯು ಬೆಟ್ಟು ಮಾಡಿದೆ. ಪ್ರೌಢಾವಸ್ಥೆಗೆ ಮುನ್ನ ತಾವು ಧೂಮ್ರಪಾನ ಮಾಡಿದ್ದೆವು ಎಂದು ಕೆಲವೇ ಅಜ್ಜಿಯರು ಮತ್ತು ಮುತ್ತಜ್ಜಿಯರು ಹೇಳಿಕೊಂಡಿದ್ದರಿಂದ ಅಧ್ಯಯನದಲ್ಲಿ ಅಜ್ಜಂದಿರು ಮತ್ತು ಮುತ್ತಜ್ಜಂದಿರನ್ನು ಮಾತ್ರ ತೊಡಗಿಸಿಕೊಳ್ಳಲಾಗಿತ್ತು.

ಪ್ರೌಢಾವಸ್ಥೆಯನ್ನು ತಲುಪುವ ಮುನ್ನವೇ ಧೂಮಪಾನವನ್ನು ಆರಂಭಿಸಿದ್ದ ಅಜ್ಜಂದಿರು ಮತ್ತು ಮುತ್ತಜ್ಜಂದಿರನ್ನು (ತಂದೆಯ ಕಡೆಯಿಂದ) ಹೊಂದಿದ್ದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಬೊಜ್ಜು ಹೊಂದಿರುವುದು ಅಧ್ಯಯನದಲ್ಲಿ ಕಂಡುಬಂದ ಮಹತ್ವದ ಅಂಶವಾಗಿದೆ. 13ರಿಂದ 16ರ ವರ್ಷ ವಯೋಮಾನದಲ್ಲಿ ಧೂಮಪಾನವನ್ನು ಆರಂಭಿಸಿದ್ದ ಪೂರ್ವಜರನ್ನು ಹೊಂದಿದ್ದ ಮಹಿಳೆಯರಿಗೆ ಹೋಲಿಸಿದರೆ 13 ವರ್ಷ ಪ್ರಾಯಕ್ಕೆ ಮೊದಲೇ ಧೂಮಪಾನವನ್ನು ಆರಂಭಿಸಿದ ಅಜ್ಜ ಮತ್ತು ಮುತ್ತಜ್ಜರನ್ನು ಹೊಂದಿದ್ದ ಮಹಿಳೆಯರಲ್ಲಿ ಬೊಜ್ಜು ಹೆಚ್ಚಿನ ಪ್ರಮಾಣದಲ್ಲಿತ್ತು. ದಿಗ್ಭ್ರಮೆಯ ಸಂಗತಿಯೆಂದರೆ ತಮ್ಮ ಪೂರ್ವಜರ ಧೂಮ್ರಪಾನದ ಚಟದಿಂದಾಗಿ ಕೇವಲ ಮಹಿಳೆಯರಲ್ಲಿ ಮಾತ್ರ ಕೊಬ್ಬು ಬೆಳೆದಿರುವುದು ಮತ್ತು ಗಂಡು ಸಂತತಿಯಲ್ಲಿ ಈ ಅಪಾಯ ಕಂಡುಬಂದಿಲ್ಲ.

ಪ್ರೌಢಾವಸ್ಥೆಗೆ ಮೊದಲಿನ ಧೂಮಪಾನಿಗಳು ಬೊಜ್ಜಿಗೆ ಆನುವಂಶಿಕ ಪ್ರವೃತ್ತಿಯಂತಹ ಇತರ ಲಕ್ಷಣಗಳನ್ನು ಹೊಂದಿದ್ದರು ಎನ್ನುವುದು ಸಂಭವನೀಯ ವಿವರಣೆಯಾಗಿದೆ ಮತ್ತು ಇದು ಅವರ ತಲೆಮಾರುಗಳು ಅಧಿಕ ಬೊಜ್ಜು ಹೊಂದಿರುವುದನ್ನು ವಿವರಿಸಬಹುದು. ಆದರೆ ನಿಯಮಿತವಾಗಿ ಧೂಮಪಾನವನ್ನು ಮಾಡುವವರು ಬೊಜ್ಜು ಬೆಳೆಯುವ ಕಡಿಮೆ ಅಪಾಯವನ್ನು ಹೊಂದಿದ್ದಾರೆ ಎಂದು ಸಂಶೋಧಕರೇ ಗಮನಿಸಿರುವುದರಿಂದ ಈ ವಿವರಣೆಯು ಸಂಪೂರ್ಣ ಚಿತ್ರಣವನ್ನು ನೀಡುವುದಿಲ್ಲ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಯು ಹೆಚ್ಚಿನ ಬೆಳಕನ್ನು ಚೆಲ್ಲಬಹುದು.

ಸದ್ಯಕ್ಕೆ,ಹಾನಿಕಾರಕ ಪರಿಣಾಮಗಳು ಸಂತತಿಯ ತಂದೆಯ ಕಡೆಯ ಪೂರ್ವಜರಿಂದಲೇ ಏಕೆ ಬರುತ್ತದೆ ಮತ್ತು ತಾಯಿಯ ಕಡೆಯ ಪೂರ್ವಜರಿಂದ ಏಕೆ ಬರುವುದಿಲ್ಲ ಹಾಗೂ ಪುರುಷ ಸಂತತಿಯನ್ನು ಬಿಟ್ಟು ಹೆಣ್ಣು ಸಂತತಿಯಲ್ಲೇ ಏಕೆ ಕಾಣಿಸಿಕೊಳ್ಳುತ್ತವೆ ಎನ್ನುವುದು ಸೇರಿದಂತೆ ಹಲವಾರು ಉತ್ತರವಿಲ್ಲದ ಪ್ರಶ್ನೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News