12 ಜಿಲ್ಲೆಗಳ 3024 ಗ್ರಾ.ಪಂ.ಗಳಲ್ಲಿ ‘ಗ್ರಾಮ ಒನ್’ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ

Update: 2022-01-26 17:51 GMT

ಬೆಂಗಳೂರು, ಜ.26: ಗ್ರಾಮೀಣ ಭಾಗದ ಜನರಿಗೆ ಸರಕಾರಿ ಯೋಜನೆಗಳ ಸೌಲಭ್ಯ ಕಲ್ಪಿಸಲು ನೆರವು ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ‘ಗ್ರಾಮ ಒನ್’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುಯಲ್ ಆಗಿ ಚಾಲನೆ ನೀಡಿದರು.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ, ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಸರಕಾರ, ಜನ ಸ್ಪಂದನೆಗಾಗಿ ಚಿಂತನೆ ಮಾಡಿ ಗ್ರಾಮ ಒನ್ ಕಾರ್ಯಕ್ರಮ ರೂಪಿಸಿದ್ದೇವೆ. ಈ ಗ್ರಾಮ ಒನ್ ಕಾರ್ಯಕ್ರಮ ತಾಂತ್ರಿಕತೆಯಿಂದ ಕೂಡಿರುವ ಕಾರ್ಯಕ್ರಮ ಎಂದರು.

ತಹಶೀಲ್ದಾರ್ ಕಚೇರಿಯಲ್ಲಿ ಬಹಳಷ್ಟು ಸೇವೆಗಳಿಗಾಗಿ ಮತ್ತು ಬಹಳಷ್ಟು ಪ್ರಮಾಣಪತ್ರಗಳನ್ನು ದೊಡ್ಡ ಜನಸಂದಣಿ ಇರುವುದನ್ನು ನೋಡಿದ್ದೇವೆ. ಸಮಯಕ್ಕೆ ಸರಿಯಾಗಿ ಅವರಿಗೆ ಜಾತಿ, ಆದಾಯ, ವಾಸ ಪ್ರಮಾಣಪತ್ರಗಳು ಸಿಗುವುದಿಲ್ಲ. ಅಲ್ಲದೆ, ಮಧ್ಯವರ್ತಿಗಳು ಹಾಗೂ ಭ್ರಷ್ಟಾಚಾರದ ಹಾವಳಿ ಇರುವುದನ್ನು ಪರಿಹರಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಬಹಳಷ್ಟು ಸೇವೆಗಳನ್ನು ಆನ್‍ಲೈನ್ ಮೂಲಕ ಗ್ರಾಮ ಪಂಚಾಯಿತಿಯಲ್ಲೆ ನೀಡುವ ಕೆಲಸ ಮಾಡಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಿ, ತಹಶೀಲ್ದಾರ್, ಸಹಾಯಕ ಆಯುಕ್ತರ ಕಚೇರಿ, ಅಟಲ್ ಸೇವಾ ಕೇಂದ್ರಗಳಿಗೆ ಜೋಡಿಸಿ ಸುಮಾರು 20-25 ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಗಳಲ್ಲಿ ಮಾಡಲಾಗಿತ್ತು. ಅಲ್ಲಿ 6 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಇದರ ಪ್ರಯೋಜನವಾಗಿದೆ. ಇವತ್ತಿನಿಂದ 12 ಜಿಲ್ಲೆಗಳ 3024 ಗ್ರಾಮ ಪಂಚಾಯಿತಿಗಳಿಲ್ಲಿ ಈ ಕಾರ್ಯಕ್ರಮ ಜಾರಿಗೆ ಬರಲಿದೆ. ಮಾರ್ಚ್ ತಿಂಗಳ ಒಳಗಾಗಿ ಎಲ್ಲ ಜಿಲ್ಲೆಗಳ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಈ ಕಾರ್ಯಕ್ರಮ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಕಾರ್ಯಕ್ರಮದ ಕಾರ್ಯವೈಖರಿ ಬಗ್ಗೆ ನಿರಂತರವಾಗಿ ನಿರ್ವಹಣೆ ಮಾಡಲು ತೀರ್ಮಾನಿಸಲಾಗಿದೆ. ಈ ಗ್ರಾಮ ಒನ್ ನಡೆಸುವ ವ್ಯಕ್ತಿಗಳಿಗೆ ತಾಂತ್ರಿಕತೆ ಹಾಗೂ ಕಾನೂನು ಅರಿವು ಮೂಡಿಸುವ ತರಬೇತಿ ನೀಡಲು ಆದೇಶ ನೀಡಲಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ಕ್ರಾಂತಿಯಾಗಲಿದೆ. ಜನರಿಗೆ ಸಮಯಕ್ಕೆ ಸರಿಯಾಗಿ ಸರಕಾರಿ ಸೇವೆಗಳು ಸಿಗುವುದರಿಂದ ಅವರಿಗೆ ಮಾನಸಿಕ ನೆಮ್ಮದಿ ಇರುತ್ತದೆ. ಜನರನ್ನು ಸಶಕ್ತಗೊಳಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಡಿಕೆಶಿ-ಸಿದ್ದರಾಮಯ್ಯ ಪೈಪೋಟಿ: ಶಾಸಕರ ಸಂಪರ್ಕದ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಆಂತರಿಕವಾಗಿ ಪೈಪೋಟಿ ಇದೆ. ನಮ್ಮ ಪಕ್ಷದಿಂದ ಯಾರೊಬ್ಬರೂ ಕಾಂಗ್ರೆಸ್‍ಗೆ ಹೋಗಲ್ಲ. ಇನ್ನೂ ಅವರ ತಿಕ್ಕಾಟದಿಂದ ಬಹಳಷ್ಟು ಜನ ಕಾಂಗ್ರೆಸ್‍ನಿಂದ ಹೊರಗೆ ಬರುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿ ಇಲ್ಲ. ಪಂಜಾಬ್‍ನಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಗೋವಾದಲ್ಲಿ ಅಧಿಕಾರಕ್ಕೆ ಬರುವ ಪರಿಸ್ಥಿತಿಯೇ ಇಲ್ಲ. ಹೀಗಾಗಿ ಈ ಐದು ರಾಜ್ಯಗಳ ಚುನಾವಣೆ ನಂತರ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗುತ್ತದೆ. ಅದರ ಕರಿನೆರಳು ರಾಜ್ಯದ ಕಾಂಗ್ರೆಸ್ ಮೇಲೂ ಆಗುತ್ತೆ, ರಾಜಕಾರಣದ ಮೇಲೂ ಆಗುತ್ತೆ. ಅದರ ಪರಿಣಾಮವನ್ನು ನೀವೆ ನೋಡುತ್ತೀರಾ ಎಂದು ಅವರು ಹೇಳಿದರು.

ರಮೇಶ್ ಜಾರಕಿಹೊಳಿ ಜೊತೆ ಯಾರು ಸಂಪರ್ಕದಲ್ಲಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. 2023ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಮ್ಮನ್ನು ಬಿಟ್ಟು ಸರಕಾರ ಮಾಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‍ನವರಿಗೆ ಅತಂತ್ರವಾದರೆ ಅವರು ಸ್ವತಂತ್ರವಾಗುತ್ತಾರೆ. ಮೊದಲಿನಿಂದಲೂ ಅವರ ಆಸೆ ಅದೇ ಇದೆ ಎಂದರು.
ಇನ್ನೂ ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅದು ಶುದ್ಧ ಸುಳ್ಳು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News