ವಿಪ್ರೋ ಸಂಸ್ಥಾಪಕ ಅಝೀಂ ಪ್ರೇಮ್ ಜಿ, ಟ್ರಸ್ಟ್ ವಿರುದ್ಧ ಪಿಸಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ

Update: 2022-01-26 17:05 GMT
ಅಝೀಂ ಪ್ರೇಮ್ ಜಿ

ಬೆಂಗಳೂರು, ಜ.26: ಖ್ಯಾತ ಉದ್ಯಮಿ ಹಾಗೂ ವಿಪ್ರೋ ಸಂಸ್ಥಾಪಕ ಅಝೀಂ ಪ್ರೇಮ್ ಜಿ, ಪತ್ನಿ ಯಾಸ್ಮೀನ್ ಪ್ರೇಮ್‌ಜಿ, ಪಿ.ಶ್ರೀನಿವಾಸನ್ ಮತ್ತು ಅಝೀಂ ಪ್ರೇಮ್‌ಜಿ ಟ್ರಸ್ಟ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ(ಪಿಸಿಎ) ಮತ್ತು ಐಪಿಸಿ ಸೆಕ್ಷನ್ ಅನ್ವಯ ನಂಬಿಕೆ ದ್ರೋಹ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಎರಡು ಪ್ರತ್ಯೇಕ ವಿಶೇಷ ಪ್ರಕರಣಗಳನ್ನು ದಾಖಲಿಸಿ, ನಾಲ್ಕೂ ಆರೋಪಿಗೆ ಸಮನ್ಸ್ ಜಾರಿಗೊಳಿಸಲು ಪಿಸಿಎ ವಿಶೇಷ ಕೋರ್ಟ್ ಆದೇಶ ನೀಡಿದೆ. 

ಚೆನ್ನೈ ಮೂಲದ ಎನ್‌ಜಿಒ ಇಂಡಿಯಾ ಅವೇಕ್ ಫಾರ್ ಟ್ರಾನ್ಸ್ಪರೆನ್ಸಿ ಸಂಸ್ಥೆಯ ಸದಸ್ಯ ಪಿ.ಸದಾನಂದಗೌಡ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ(ಪಿಸಿಎ) ಅಡಿ ಸ್ಥಾಪಿಸಲಾಗಿರುವ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಲಕ್ಷಿö್ಮನಾರಾಯಣ್ ಭಟ್ ಕೆ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.

ಅಝೀಂ ಪ್ರೇಮ್‌ಜಿ, ಪತ್ನಿ ಯಾಸ್ಮೀನ್ ಪ್ರೇಮ್‌ಜಿ, ಪಿ.ಶ್ರೀನಿವಾಸನ್ ಮತ್ತು ಟ್ರಸ್ಟ್ ವಿರುದ್ಧ ಪಿಸಿಎ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಬೇಕು. ಸಾಕ್ಷಿ ಇದ್ದರೆ ದೂರುದಾರರಾದ ಪಿ.ಸದಾನಂದಗೌಡ ಅವರು, ಒಂದು ವಾರದೊಳಗೆ ಅವುಗಳನ್ನು ಕೋರ್ಟ್ಗೆ ಸಲ್ಲಿಸಬೇಕೆಂದು ಪೀಠವು ಸೂಚನೆ ನೀಡಿದೆ. 

ಪ್ರಕರಣವೇನು: ಇಂಡಿಯಾ ಅವೇಕ್ ಫಾರ್ ಟ್ರಾನ್ಸ್ಫರೆನ್ಸಿಯ ಸದಸ್ಯ ಪಿ.ಸದಾನಂದಗೌಡ ಅವರು 2020ರಲ್ಲಿ ಅಝೀಂ ಪ್ರೇಮ್‌ಜಿ, ಯಾಸ್ಮೀನ್ ಮತ್ತು ಪಿ.ಶ್ರೀನಿವಾಸನ್ ಮತ್ತು ಟ್ರಸ್ಟ್ ವಿರುದ್ಧ ಎರಡು ಪ್ರಕರಣ ದಾಖಲಿಸಿದ್ದರು. ಈ ದೂರಿನಲ್ಲಿ ವಿದ್ಯಾ ಇನ್‌ವೆಸ್ಟ್ಮೆಂಟ್ ಸೇರಿ ಒಟ್ಟು ಮೂರು ಕಂಪೆನಿಗಳನ್ನು ಐದು ದಶಕಗಳ ಹಿಂದೆ ಸ್ಥಾಪಿಸಿದ್ದರು. ಈ ಕಂಪೆನಿಗೆ ಪ್ರೇಮ್ ಜಿ ಮತ್ತು ಅವರ ತಾಯಿ ಇವುಗಳ ನಿರ್ದೇಶಕರಾಗಿದ್ದರು. ಆ ನಂತರ ಯಾಸ್ಮೀನ್ ಈ ಕಂಪೆನಿಗಳ ನಿರ್ದೇಶಕರಾದರು. ಬಳಿಕ ಶ್ರೀನಿವಾಸನ್ ಈ ಕಂಪೆನಿಗಳ ನಿರ್ದೇಶಕರಾದರು. 

ಕಂಪೆನಿ ಕಾಯ್ದೆ ಅಡಿ ವಿದ್ಯಾ, ರೀಗಲ್ ಮತ್ತು ನೇಪಿಯನ್ ಕಂಪೆನಿಗಳನ್ನು ಸ್ಥಾಪಿಸಲಾಗಿದ್ದು, ಅಝೀಂ ಪ್ರೇಮ್‌ಜೀ ಸೇರಿ ಮೂವರು ಮಂಡಿಸಿದ ವಿಲೀನ ಪ್ರಸ್ತಾಪದ ಸಂಬಂಧ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಮೂರು ಕಂಪೆನಿಗಳನ್ನು ವಿಸರ್ಜಿಸಲಾಗಿತ್ತು. ಈ ದೂರು ದಾಖಲಿಸುವಾಗ ಕಂಪೆನಿಗಳು ಅಸ್ತಿತ್ವದಲ್ಲಿ ಇರಲಿಲ್ಲ. ಆ ವಿಲೀನ ಒಪ್ಪಿಗೆಯ ಸಂದರ್ಭದಲ್ಲಿನ ಹಣಕಾಸು ವರ್ಗಾವಣೆಯ ಸಂಬಂಧಿಸಿದ ವಿಚಾರವು ಪ್ರಾಸಿಕ್ಯೂಷನ್‌ಗೆ ಒಳಪಟ್ಟಿರುತ್ತದೆ. ಅಲ್ಲದೆ, ವಿದ್ಯಾ ಕಂಪೆನಿ ಸೇರಿ ಮೂರು ಕಂಪೆನಿಗಳನ್ನು ವಿಸರ್ಜಿಸುವಾಗ ಅವುಗಳಿಗೆ ನಿರ್ದೇಶಕ ಹೊರತಾಗಿ ಯಾವುದೇ ಮಾಲಕರು ಇಲ್ಲದೆ ಇರುವುದರಿಂದ ಅವುಗಳ ಆಸ್ತಿ ಸರಕಾರಕ್ಕೆ ಸೇರಬೇಕು ಎಂಬುದು ಅರ್ಜಿದಾರರ ವಾದವಾಗಿದೆ. 

ಆದರೆ, ಪ್ರೇಮ್ ಜಿ, ಯಾಸ್ಮೀನ್ ಮತ್ತು ಶ್ರೀನಿವಾಸನ್ ಅವರು ಈ ಮೂರು ಸಂಸ್ಥೆಗಳಲ್ಲಿದ್ದ ಅಂದಿನ ದಿನಮಾನದಲ್ಲಿ 12,281 ಕೋಟಿ ಮೌಲ್ಯ ಹೊಂದಿದ್ದ 29.5527 ಕೋಟಿ ವಿಪ್ರೊ ಲಿಮಿಟೆಡ್ ಷೇರುಗಳನ್ನು ಗಿಫ್ಟ್ ರೂಪದಲ್ಲಿ ಪ್ರೇಮ್‌ಜಿ ಟ್ರಸ್ಟ್ ಗೆ ವರ್ಗಾಯಿಸಿಕೊಂಡಿದ್ದಾರೆ. ಈಗಿನ ಬೆಲೆಯು 16.590 ಕೋಟಿ ರೂ.ಆಗಿದೆ. 

ಕಂಪೆನಿ ನಿರ್ದೇಶಕರಾಗಿ ಈ ಜನ ಆರೋಪಿಗಳು ವಿಶ್ವಾಸ ದ್ರೋಹವೆಸಗಿದ ಅರೋಪವು ಮೇಲ್ನೋಟಕ್ಕೆ ಕಂಡು ಬಂದಿರುವುದನ್ನು ಪರಿಗಣಿಸಿರುವ ಕೋರ್ಟ್ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿ ಎರಡು ಪ್ರತ್ಯೇಕ ವಿಶೇಷ ಪ್ರಕರಣಗಳನ್ನು ದಾಖಲಿಸಿ, ನಾಲ್ಕೂ ಆರೋಪಿಗೆ ಸಮನ್ಸ್ ಜಾರಿಗೊಳಿಸಲ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News