ಸಿಎಂ ಮನೆ ಬಳಿ ಪೊಲೀಸರ ಗಾಂಜಾ ದಂಧೆ ಆರೋಪ ಪ್ರಕರಣ: ಯುವತಿ ಬಲೆಗೆ

Update: 2022-01-27 18:20 GMT

ಬೆಂಗಳೂರು, ಜ.27: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಬಳಿ ಪೊಲೀಸ್ ಪೇದೆಗಳಿಬ್ಬರು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪ ಪ್ರಕರಣ ಸಂಬಂಧ ಯುವತಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಒಡಿಶಾ ಮೂಲದ ಪೂಜಾ, ತಮಿಳುನಾಡಿನ ಸೋಮಸುಂದರಂ ಹಾಗೂ ನಾಗಪುರದ ಶಿವಪಾಟೀಲ್ ಎಂಬುವವರು ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳಿಂದ 5 ಕೆಜಿ ಗಾಂಜಾವನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ. ಅಲ್ಲದೆ, ಬಂಧಿತರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ತನಿಖಾಧಿಕಾರಿಗಳು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಶಿವಪಾಟೀಲ್ ಜಯನಗರ ಹಾಗೂ ಸೋಮಸುಂದರ ಎಸ್.ಜಿ.ಪಾಳ್ಯದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇಬ್ಬರು ಸ್ನೇಹಿತರಾಗಿದ್ದರಿಂದ ಕಳೆದೊಂದು ವರ್ಷದಿಂದ ಒಟ್ಟಿಗೆ ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದರು. ಈ ಇಬ್ಬರು ಒಡಿಶಾದಲ್ಲಿ ನೆಲೆಸಿದ್ದ ಪೂಜಾ ಎಂಬಾಕೆಯನ್ನು ಸಂಪರ್ಕಿಸಿ ನಗರಕ್ಕೆ ಮಾದಕ ವಸ್ತುಗಳನ್ನು ತರಿಸಿಕೊಂಡು ಅದನ್ನು ಬಿಟಿಎಂ ಲೇಔಟ್, ಕೋರಮಂಗಲ ಸೇರಿದಂತೆ ನಗರದ ಹಲವು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್‍ಟಿನಗರದಲ್ಲಿರುವ ನಿವಾಸದ ಮುಂದೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಇಬ್ಬರು ಕಾನ್‍ಸ್ಟೇಬಲ್ ಸೇರಿ ಇದುವರೆಗೂ 8 ಮಂದಿಯನ್ನು ಬಂಧಿಸಲಾಗಿತ್ತು.

ಈ ದಂಧೆಯಲ್ಲಿ ಪೊಲೀಸರು ಶಾಮೀಲಾಗಿರುವ ಪ್ರಕರಣದ ತನಿಖೆ ಆರ್.ಟಿ.ನಗರ ಪೊಲೀಸ್ ಠಾಣೆಯಿಂದ ಸಿಸಿಬಿಗೆ ವರ್ಗಾವಣೆಗೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News