ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಅನುಮಾನಾಸ್ಪದ ಸಾವು

Update: 2022-01-28 16:09 GMT
ಸೌಂದರ್ಯ

ಬೆಂಗಳೂರು, ಜ.28: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ(30) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಮಗಳಾಗಿದ್ದ ಸೌಂದರ್ಯ ಅವರನ್ನು 2018ರಲ್ಲಿ ವೈದ್ಯ ನೀರಜ್ ಅವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂಭತ್ತು ತಿಂಗಳ ಮಗುವಿದೆ. ಇಲ್ಲಿನ ವಸಂತನಗರದಲ್ಲಿರುವ ಅಪಾರ್ಟ್ಮೆಂಟ್ ಸಮುಚ್ಚಯವೊಂದರಲ್ಲಿ ದಂಪತಿ ವಾಸವಿದ್ದರು.

ಕೊಠಡಿಯಲ್ಲಿ ಸೌಂದರ್ಯ ಅವರ ಮೃತದೇಹ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ, ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸೌಂದರ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ತನಿಖೆಯಿಂದಲೇ ನಿಖರ ಮಾಹಿತಿ ತಿಳಿಯಬೇಕಿದೆ. ಪತಿ ಹಾಗೂ ಕುಟುಂಬದವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ಅಂತ್ಯಕ್ರಿಯೆ: ಸೌಂದರ್ಯ(30) ಅವರ ಅಂತ್ಯಕ್ರಿಯೆಯನ್ನು ಅಬ್ಬಿಗೆರೆಯಲ್ಲಿರುವ ಪತಿ ಡಾ.ನೀರಜ್ ಅವರ ಕಲ್ಪವೃಕ್ಷ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ಸಂಜೆ ನೆರವೇರಿಸಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರು, ಶಾಸಕರು, ಸೌಂದರ್ಯ ಕುಟುಂಬಸ್ಥರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸ್ಥಳೀಯರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಗಣ್ಯರಿಂದ ಸಾಂತ್ವನ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಮೊಮ್ಮಗಳ ನಿಧನಕ್ಕೆ ಸಾಂತ್ವನ ಹೇಳಿದರು.

ಮಾಜಿ ಪ್ರಧಾನಿ ಮಂತ್ರಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಮಾಜಿ ಮುಖ್ಯಮಂತ್ರಿ ಸಂತಾಪ ಸೂಚಿಸಿದರು.

ಮಾಜಿ ಸಿ.ಎಂ.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅವರು ಇಷ್ಟು ಚಿಕ್ಕ ವಯಸ್ಸಿನಲ್ಲೇ, ತಮ್ಮ ಒಂಬತ್ತು ತಿಂಗಳ ಹಸುಗೂಸು ಸೇರಿದಂತೆ ಎಲ್ಲರನ್ನೂ ಅಗಲಿರುವುದು ಬಹಳ ನೋವಿನ ಸಂಗತಿಯಾಗಿದೆ. ಯಡಿಯೂರಪ್ಪನವರ ಕುಟುಂಬದ ಸದಸ್ಯರ ದುಃಖವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ನನ್ನ ದೀರ್ಘ ಕಾಲದ ರಾಜಕೀಯ ಸಂಗಾತಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳ ಸಾವಿನ ಸುದ್ದಿ ಕೇಳಿ ಮನಸಿಗೆ ಘಾಸಿಯಾಯಿತು. ಭುಜದೆತ್ತರಕ್ಕೆ ಬೆಳೆದ ಮಕ್ಕಳು, ಕುಟುಂಬ ಸದಸ್ಯರ ಅಗಲಿಕೆಯಿಂದಾಗುವ ನೋವು, ಸಂಕಟವನ್ನು ನಾನು ಕಂಡಿದ್ದೇನೆ, ಅನುಭವಿಸಿದ್ದೇನೆ. ಸೌಂದರ್ಯ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ದೇವರು ಕರುಣಿಸಲಿ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News