ಡಾ. ಅಂಬೇಡ್ಕರ್ ಭಾವಚಿತ್ರ ತೆರವು ಪ್ರಕರಣ: ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ರಾಜ್ಯದಲ್ಲಿ ಮುಂದುವರಿದ ಧರಣಿ

Update: 2022-01-28 13:00 GMT

ಬೆಂಗಳೂರು/ರಾಯಚೂರು, ಜ. 28: ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಆವರಣದಲ್ಲಿ ಗಣರಾಜ್ಯೋತ್ಸವದ ದಿನ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಭಾವಚಿತ್ರ ತೆರವು ಪ್ರಕರಣ ಸಂಬಂಧ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಬೆಂಗಳೂರಿನ ಹೈಕೋರ್ಟ್ ಮುಂಭಾಗದಲ್ಲಿ ನೂರಾರು ವಕೀಲರು ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ಧರಣಿ ನಡೆಸಿದರು. ಈ ಮಧ್ಯೆ ರಾಯಚೂರಿನ ಸಿರವಾರ, ಲಿಂಗಸುಗೂರು, ಮಾನ್ವಿ, ದೇವದುರ್ಗ ಪಟ್ಟಣ ಸೇರಿದಂತೆ ವಿವಿಧೆಡೆಗಳಲ್ಲಿ ಅಂಗಡಿ, ಮುಂಗಟುಗಳನ್ನು ಮುಚ್ಚುವ ಮೂಲಕ ಬಂದ್ ಆಚರಿಸಲಾಯಿತು.

ಪ್ರತಿಭಟನಾಕಾರರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಜನರಿಗೆ ನ್ಯಾಯ ಕೊಡಬೇಕಾದ ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರೇ ಜಾತಿಯ ಅಸಹನೆ ಹೊಂದಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಹೀಗಾಗಿ ಅವರನ್ನು ಕೂಡಲೇ ಹುದ್ದೆಯಿಂದ ವಜಾ ಮಾಡಬೇಕು. ನ್ಯಾ.ಮಲ್ಲಿಕಾರ್ಜುನಗೌಡ ಅವರ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಬೇಕು ಹಾಗೂ ನ್ಯಾಯಾಧೀಶರನ್ನು ಬಂಧಿಸಬೇಕು' ಎಂದು ಆಗ್ರಹಿಸಿದರು.

ಇದನ್ನೂ ಓದಿ: ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ಆರೋಪ: ನ್ಯಾಯಾಧೀಶರಿಂದ ವಿವರಣೆ ಕೇಳಿದ ಹೈಕೋರ್ಟ್

ಪ್ರಕರಣ ದಾಖಲಿಸಲು ದಸಂಸ ಆಗ್ರಹ: `ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆರವು ಮಾಡಿ ಧ್ವಜಾರೋಹಣ ನೆರವೇರಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ಕೂಡಲೇ ಆ ಹುದ್ದೆಯಿಂದ ವಜಾ ಮಾಡಿ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು' ಎಂದು ದಸಂಸ (ಭೀಮಶಕ್ತಿ) ರಾಜ್ಯಾಧ್ಯಕ್ಷ ಹೆಬ್ಬಾಳ ವೆಂಕಟೇಶ್ ಆಗ್ರಹಿಸಿದ್ದಾರೆ.

`ಸಂವಿಧಾನ ಮತ್ತು ಕಾನೂನಿಗೆ ಮೂಲ ಪುರುಷ ಡಾ.ಬಿ.ಆರ್.ಅಂಬೇಡ್ಕರ್. ಆದರೆ, ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಈ ಬಗ್ಗೆ ಪರಿಜ್ಞಾನವಿಲ್ಲದೆ ಅವರ ಫೋಟೋ ತೆರವುಗೊಳಿಸಿಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆ ಎಂಬುದು ಸ್ಪಷ್ಟ. ಹೀಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಸರಕಾರ ಕೋರ್ಟ್ ಗಳಿಗೆ ಅಂಬೇಡ್ಕರ್ ಭಾವಚಿತ್ರ ಇಡುವ ಸಂಬಂಧ ಸ್ಪಷ್ಟ ಸೂಚನೆ ನೀಡಬೇಕು' ಎಂದು ವೆಂಕಟೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಒತ್ತಾಯ: `ರಾಯಚೂರಿನ ಜಿಲ್ಲಾ ನ್ಯಾಯಾಧೀಶರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ದೂರ ಮಾಡಿಸಿ, ಕೇವಲ ಗಾಂಧಿ ಫೋಟೋಗೆ ಮಾತ್ರ ಹಾರಹಾಕಿರುವ ಘಟನೆ ಅತ್ಯಂತ ಆಘಾತಕಾರಿ ಹಾಗೂ ಅಸಮರ್ಥನೀಯವಾಗಿದೆ' ಎಂದು ಎಸ್‌ಯುಸಿಐ ಆಕ್ರೋಶ ವ್ಯಕ್ತಪಡಿಸಿದೆ.

`ಗಾಂಧಿ ಹಾಗೂ ಅಂಬೇಡ್ಕರ್ ಇಬ್ಬರ ಫೋಟೋ ಇರಿಸಬೇಕೆಂದು ಸರಕಾರದ ಸೂಚನೆ ಇದ್ದಾಗ್ಯೂ, ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತೆ, ನ್ಯಾಯದಾನ ನೀಡಬೇಕಾದ ಸ್ಥಾನದಲ್ಲಿ ಕುಳಿತಿರುವ ನ್ಯಾಯಾಧೀಶರ ಈ ವರ್ತನೆಯು ಈಗಾಗಲೇ ಜಾತೀವಾದ-ಕೋಮುವಾದಗಳ ಸಂಘರ್ಷದಲ್ಲಿ ಬೇಯುತ್ತಿರುವ ನಮ್ಮ ಸಮಾಜದಲ್ಲಿ ಮತ್ತಷ್ಟು ಧಗೆಯನ್ನು ಹುಟ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ರಾಜ್ಯ ಕಾರ್ಯದರ್ಶಿ ಕೆ.ಉಮಾ ಆಕ್ಷೇಪಿಸಿದ್ದಾರೆ.

`ನ್ಯಾಯಾಧೀಶರ ಈ ನಡೆಯು ಅವರ ಉದ್ದೇಶವನ್ನು ಪ್ರಶ್ನಾರ್ಹವನ್ನಾಗಿಸುತ್ತದೆ. ಇಂತಹ ವಿವಾದಗಳು ಜನರ ಗಮನವನ್ನು ಅವರ ಮೂಲಭೂತ ಸಮಸ್ಯೆಗಳಿಂದ ದಿಕ್ಕುತಪ್ಪಿಸುತ್ತವೆ ಎಂಬುದನ್ನು ಅರಿಯದಷ್ಟು ವಿವೇಚನಾರಹಿತರಾಗುವುದು ಸಾಧ್ಯವೆ ಎಂಬ ಪ್ರಶ್ನೆ ಎಲ್ಲ ಪ್ರಜ್ಞಾವಂತರನ್ನೂ ಕಾಡುತ್ತಿದೆ. ಆದುದರಿಂದ ಸರಕಾರ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳು ಕೂಡಲೇ ಮಧ್ಯಪ್ರವೇಶಿಸಿ ನ್ಯಾಯಾಧೀಶರ ನಡವಳಿಕೆ ಬಗ್ಗೆ ಹಾಗೂ ಈ ಘಟನೆಯ ಬಗ್ಗೆ ಕೂಲಂಕಷ ವಿಚಾರಣೆ ಕೈಗೊಂಡು ಸೂಕ್ತ ಕ್ರಮ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕಾನೂನು ಸಚಿವರಿಗೆ ಪತ್ರ: `ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆರವು ಮಾಡುವ ಮೂಲಕ ರಾಯಚೂರು ಜಿಲ್ಲಾ ನ್ಯಾಯಾಧೀಶರು ಸಂವಿಧಾನ ಶಿಲ್ಪಿ ಅವಮಾನಿಸಿ ವಿಕೃತಿ ಮೆರೆದಿರುವುದು ಅಕ್ಷಮ್ಯ ಮಾತ್ರವಲ್ಲ, ಅಪರಾಧ. ನ್ಯಾಯಾಧೀಶರನ್ನು ವಜಾಗೊಳಿಸಲು ಆಗ್ರಹಿಸಿ ರಾಜ್ಯಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ತಕ್ಷಣವೇ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದಲೇ ವಜಾ ಮಾಡಬೇಕು ಎಂದು ಆಗ್ರಹಿಸಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News