ಬೆಂಗಳೂರು: ಕಾರ್ಮಿಕನ ಆತ್ಮಹತ್ಯೆ ಪ್ರಕರಣ: ಮೂವರ ವಿರುದ್ಧ ಎಫ್‍ಐಆರ್ ದಾಖಲು
ಬೆಂಗಳೂರು, ಜ.29: ನಾಗರಬಾವಿ ವ್ಯಾಪ್ತಿಯ ಮರಳು ದಾಸ್ತಾನು ಕೇಂದ್ರದ ಆವರಣದಲ್ಲಿ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಟ್ಟಿಗೇಪಾಳ್ಯದ ನಿವಾಸಿ ಎಲ್.ಕೆ.ಸ್ವಾಮಿ(35), ಕೇಂದ್ರದಲ್ಲಿ ಮರಳು ಲೋಡ್–ಅನ್‍ಲೋಡ್ ಕೆಲಸ ಮಾಡುತ್ತಿದ್ದರು. ನಾಗರಬಾವಿ ಬಿಡಿಎ ಸಮುಚ್ಚಯ ಬಳಿಯ ಮರಳು ದಾಸ್ತಾನು ಕೇಂದ್ರದ ಆವರಣದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಜ. 27ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸ್ವಾಮಿ ಆತ್ಮಹತ್ಯೆ ಬಗ್ಗೆ ಪತ್ನಿ ದೂರು ನೀಡಿದ್ದಾರೆ. ಮರಳು ದಾಸ್ತಾನು ಕೇಂದ್ರದಲ್ಲಿರುವ ಚಾಲಕ ಸುರೇಶ್, ಚಂದ್ರು ಹಾಗೂ ಮಣಿ ಎಂಬುವರು ಕೆಲಸದ ವಿಚಾರವಾಗಿ ಪತಿ ಸ್ವಾಮಿ ಅವರಿಗೆ ಕಿರುಕುಳ ನೀಡುತ್ತಿದ್ದರು. ಜೀವ ಬೆದರಿಕೆಯೊಡ್ಡಿದ್ದರು. ಇದರಿಂದ ನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ಸುರೇಶ್, ಚಂದ್ರು ಹಾಗೂ ಮಣಿ ಕಾರಣ ಎಂಬುದಾಗಿ ಪತ್ನಿ ಆರೋಪಿಸಿದ್ದಾರೆ. ಮೂವರ ವಿರುದ್ಧವೂ ಎಫ್‍ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್‍ರು ತಿಳಿಸಿದ್ದಾರೆ.