ಗಾಂಜಾ ಹಾವಳಿ ತಡೆಗೆ ಪ್ರತ್ಯೇಕ ದಳ ರಚಿಸಲು ಆಗ್ರಹ: ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದಲಿತರ ಕುಂದು ಕೊರತೆ ಸಭೆ

Update: 2022-01-30 11:49 GMT

ಮಂಗಳೂರು, ಜ.30: ಪರಿಶಿಷ್ಟ ದಾತಿ ಹಾಗೂ ಪಂಗಡದ ಕಾಲನಿಗಳಲ್ಲಿ ಗಾಂಜಾ ಸೇವನೆ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಯುವಕರು ಗುರಿಯಾಗುತ್ತಿದ್ದಾರೆ. ಗಾಂಜಾ ಸೇವಿಸಿ ಹಣಕ್ಕಾಗಿ ಕಳ್ಳತನ ಮತ್ತಿತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪ್ರಸಂಗ ನಡೆಯುತ್ತಿದ್ದು, ಆತ್ಮಹತ್ಯೆಯಂತಹ ಪ್ರಕರಣವೂ ನಡೆಯುತ್ತಿದೆ ಎಂಬ ಆತಂಕ ದಲಿತ ನಾಯಕರಿಂದ ವ್ಯಕ್ತವಾಗಿದೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ ಹರಿರಾಂ ಶಂಕರ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ದಲಿತ ಮುಖಂಡ ಅನಿಲ್ ಕುಮಾರ್, ದಲಿತ ಕಾಲನಿಗಳಲ್ಲಿ ಯುವಕರು ಗಾಂಜಾ ಸೇವನೆ ಕುರಿತಂತೆ ತನಿಖೆ ನಡೆಸಿ ಗಾಂಜಾ ಹಾವಳಿ ತಡೆಗೆ ಪೊಲೀಸರು ಪ್ರತ್ಯೇಕ ದಳವನ್ನು ರಚಿಸಬೇಕು ಎಂದು ಅವರು ಆಗ್ರಹಿಸಿದರು.

ಪೊಲೀಸ್ ಆಯುಕ್ತರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಎಸ್‌ಸಿ, ಎಸ್‌ಟಿಯವರ ಕಾಲನಿಗಳಿಗೂ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕು ಎಂದು ಅಮಲ ಜ್ಯೋತಿ ಈ ಸಂದರ್ಭ ಮನವಿ ಮಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಾಲೊನಿಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ಪ್ರೇಮನಾಥ್ ಬಲ್ಲಾಳ್‌ಬಾಗ್ ಅವರು ಮಾತನಾಡಿ, ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವೇಕನಗರ ಎಸ್‌ಸಿ ಕಾಲೊನಿಯಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತದೆ. ಬೇರೆ ಬೇರೆ ಘಟನೆಗಳು ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳು ಕೂಡ ಸೇರಿರುತ್ತಾರೆ. ಇಲ್ಲಿ ಸಿಸಿ ಕೆಮರಾ ಅಳವಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಪಿ ಹರಿರಾಂ ಶಂಕರ್ ಅವರು, ಸಿಸಿ ಕೆಮರಾ ಅಳವಡಿಸಲು ಅನುದಾನದ ಕೊರತೆ ಇದೆ ಎಂದಾಗ, ದಲಿತ ನಾಯಕ ವಿಶ್ವನಾಥ್, ಎಲ್ಲ ಎಸ್‌ಸಿ/ಎಸ್‌ಟಿ ಕಾಲೊನಿಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸುವಂತೆ ಸಲಹೆ ನೀಡಿದರು.

ಪೊಲೀಸ್ ಠಾಣೆಗಳಿಗೆ ಸಮಸ್ಯೆಯ ಬಗ್ಗೆ ದೂರು ನೀಡಲು ಹೋದಾಗ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಹಾಗಾಗಿ ನ್ಯಾಯಕ್ಕಾಗಿ ಮೇಲಧಿಕಾರಿಗಳ ಬಳಿ ಬರಬೇಕಾದ ಪರಿಸ್ಥಿತಿ ಇದೆ. ಪ್ರತೀ ಪೊಲೀಸ್ ಠಾಣೆಗಳಲ್ಲಿಯೂ ಪ್ರತೀ ತಿಂಗಳು ಕೂಡ ದಲಿತರ ಕುಂದುಕೊರತೆ ಸಭೆ ನಡೆಸಬೇಕೆಂಬ ನಿಯಮವಿದೆ. ಆದರೆ ಕೆಲವು ಪೊಲೀಸ್ ಠಾಣೆಗಳಲ್ಲಿ ಸಮರ್ಪಕವಾಗಿ ಸಭೆ ನಡೆಯುತ್ತಿಲ್ಲ. ಸಭೆಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುತ್ತಿಲ್ಲ ಎಂದು ದಲಿತ ಮುಖಂಡ ಎಸ್.ಪಿ. ಆನಂದ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹರಿರಾಂ ಶಂಕರ್, 'ಎಸ್‌ಐ, ಇನ್ಸ್‌ಪೆಕ್ಟರ್‌ಗಳಿಗೆ ಬಂದೋಬಸ್ತ್ ಮತ್ತಿತರ ಕರ್ತವ್ಯದ ಜವಾಬ್ದಾರಿಯೂ ಇರುವುದರಿಂದ ಕೆಲವೊಮ್ಮೆ ವಿಳಂಬ ಆಗಿರಬಹುದು ಎಂದರು.

ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಗುತ್ತಿಗೆ ಪಡೆದು ಕಾಮಗಾರಿ ಮಾಡಿದ ಗುತ್ತಿಗೆದಾರರೋರ್ವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಜಿ.ಪಂ.ನಿಂದ ಅವರ ಕಾಮಗಾರಿಯ ಬಿಲ್ ಪಾವತಿ ಮಾಡಲಾಗಿದೆ ಎಂದು ಅಮಲ ಜ್ಯೋತಿ ಆರೋಪಿಸಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ತರಾಗುವುದು ಎಂದು ಡಿಸಿಪಿ ತಿಳಿಸಿದರು.

ರಿಯಾಯಿತಿ ಟಿಕೆಟ್‌ಗೆ ಒತ್ತಾಯಸಂಜೆ 6 ಗಂಟೆಯ ಅನಂತರ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಟಿಕೆಟ್ ನೀಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಬಸ್ ನಿರ್ವಾಹಕರ ನಡುವೆ ಸಂಘರ್ಷವೂ ನಡೆಯುತ್ತಿದೆ. ಇದನ್ನು ಪೊಲೀಸ್ ಅಧಿಕಾರಿಗಳು ಆರ್‌ಟಿಒ ಅಧಿಕಾರಿಗಳಿಗೆ ಗಮನಕ್ಕೆ ತಂದು ರಿಯಾಯಿತಿ ಟಿಕೆಟ್ ದೊರೆಯುವಂತೆ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಜಗದೀಶ್ ಪಾಂಡೇಶ್ವರ, ರಮೇಶ್, ಜೈ ಗಣೇಶ್, ಸುಮತಿ ಮೊದಲಾದವರು ಅಹವಾಲುಗಳನ್ನು ಸಲ್ಲಿಸಿದರು.

ಎಸಿಪಿಗಳಾದ ಎಂ.ಎ.ನಟರಾಜ್, ಪಿ.ಎಎ ಹೆಗ್ಡೆ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

'ಜನಸ್ನೇಹಿ ಪೊಲೀಸ್ ವ್ಯವಸ್ಥೆ'

ಅಹವಾಲುಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರು, ಪ್ರತೀ ಪೊಲೀಸ್ ಠಾಣೆಯನ್ನು ಕೂಡ ಜನಸ್ನೇಹಿಯಾಗಿ ಮಾಡಲು ಇಲಾಖೆ ಕ್ರಮ ವಹಿಸಿದೆ. ಸಭೆಯಲ್ಲಿ ವ್ಯಕ್ತವಾಗಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರ ಕರ್ತವ್ಯ, ವರ್ತನೆ ಮತ್ತಷ್ಟು ಜನಸ್ನೇಹಿಯಾಗಿ ಇರುವಂತೆ ಪ್ರಯತ್ನಿಸಲಾಗುವುದು. ಈ ಬಗ್ಗೆ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News